ಮಾಡಿದ್ದು ಉಣ್ಣು ಮಹರಾಯ ಅನ್ನೋ ಮಾತಿದೆ ಹಾಗೆಯೇ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇ ಬೇಕು ತಾನೇ. ಮನುಷ್ಯನ ಕೆಲವೊಂದು ಬೇಜವಾಬ್ದಾರಿಗಳಿಂದಲೇ ಕೆಲವೊಂದು ಅಪಘಾತಗಳು ನಡೆಯುತ್ತವೆ. ಹಾಗೆಯೇ ಇಲ್ಲೊಬ್ಬ ಕುಡುಕನ ಅವಾಂತರದಿಂದ ಇಬ್ಬರು ಮಕ್ಕಳು ತೀವ್ರ ಘಾಯ ಗೊಂಡಿದ್ದಾರೆ.
ಹೌದು ತೆಲಂಗಾಣದ ವಾರ್ಗಲ್ ಮಂಡಲ್‍ನ ಮೈಲಾರಂ ಗ್ರಾಮದಲ್ಲಿ ಓರ್ವ ಕುಡಿದ ಅಮಲಿನಲ್ಲಿ ಆಟೋ ಚಾಲಾಯಿಸಿದ್ದರಿಂದ ಅಪಘಾತ ಸಂಭವಿಸಿ ಇಬ್ಬರು ಮಕ್ಕಳು ತೀವ್ರವಾಗಿ ಗಾಯಗೊಂಡಿದ್ದಾರೆ. ಈ ವೇಳೆ ತನ್ನನ್ನು ಸ್ಥಳೀಯರು ಎಲ್ಲಿ ಥಳಿಸುತ್ತಾರೋ ಎಂಬ ಭಯದಿಂದ ಆಟೋ ಚಾಲಕ ವಿದ್ಯುತ್ ಟವರ್ ಏರಿ ಹೈಡ್ರಾಮಾ ಆಡಿರುವ ಘಟನೆ ನಡೆದಿದೆ.
ಗಜ್ವೆಲ್ ಎಜುಕೇಶನ್ ಹಬ್ ಬಳಿ ಆಟೋ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಖಾಸಗಿ ಶಾಲೆಯ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವೇಳೆ ಆಟೋ ಪಲ್ಟಿಯಾಗಿದ್ದು, ವಾಹನದಲ್ಲಿದ್ದ ನಾಲ್ವರು ವಿದ್ಯಾರ್ಥಿಗಳಲ್ಲಿ 9 ವರ್ಷದ ಸಾತ್ವಿಕಾ ಮತ್ತು 8 ವರ್ಷದ ರುತ್ವಿಕಾ ಎಂಬ ಬಾಲಕಿಯರು ತೀವ್ರವಾಗಿ ಗಾಯಗೊಂಡಿದ್ದು, ಇನ್ನಿಬ್ಬರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಈಗಾಗಲೇ ಗಾಯಗೊಂಡ ಮಕ್ಕಳನ್ನು ಕೂಡಲೇ ಸ್ಥಳೀಯರು ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇನ್ನು ಆಟೋ ಚಾಲಕ ನರಸಿಮುಲು ಮದ್ಯದ ಅಮಲಿನಲ್ಲಿ ಇದ್ದ ಕಾರಣ ಸ್ಥಳೀಯರ ಕೋಪದಿಂದ ತಪ್ಪಿಸಿಕೊಳ್ಳಲು ವಿದ್ಯುತ್ ಕಂಬ ಏರಿದ್ದನು. ಆದರೆ ಅದೃಷ್ಟವಶಾತ್, ಆ ಸಮಯದಲ್ಲಿ ಕರೆಂಟ್ ಇರಲಿಲ್ಲ. ಹೀಗಾಗಿ ಆಟೋ ಚಾಲಕನ ಮನವೊಲಿಸಿ ಕೊನೆಗೂ ಕೆಳಗಿಳಿಸಲಾಯಿತು.
ಪೊಲೀಸ್ ವರದಿಯ ಪ್ರಕಾರ ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಏನೇ ಆದರೂ ಕುಡಿದ ಮತ್ತಿನಲ್ಲಿ ವಾಹನ ಚಲಾವಣೆ ಮಾಡಿರುವುದು ತಪ್ಪು ತಪ್ಪೇ. ಆತ ಮಾಡಿದ ತಪ್ಪಿಗೆ ಮಕ್ಕಳು ನೋವು ಅನುಭವಿಸಬೇಕಾಗಿದೆ. ಮುಂದೆ ಇಂತಹ ಘಟನೆ ನಡೆಯದಂತೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಕ್ರೋಶ ಗೊಂಡಿದ್ದಾರೆ.