ಕಾರಲ್ಲಿ ಪ್ರಯಾಣ ಮಾಡುವಾಗ ಈ ವಸ್ತುಗಳು ಇದ್ದರೆ ಉತ್ತಮ!

ಈಗಂತೂ ಪ್ರತಿಯೊಬ್ಬರ ಮನೆಯಲ್ಲೂ ತಮ್ಮದೇ ಸ್ವಂತ ಬೈಕ್, ಕಾರು ಇರುತ್ತದೆ. ಸಾರ್ವಜನಿಕ ಸಾರಿಗೆಯ ಬಳಕೆ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಾ ಬಂದಿದೆ. ತಮ್ಮ ಸ್ವಂತ ವಾಹನದಲ್ಲೇ ಪ್ರಯಾಣಿಸುವವರು ಹೆಚ್ಚು. ಅದರಲ್ಲೂ ಜನರು ಕಾರಿನ ಪ್ರಯಾಣ ಹೆಚ್ಚು ಸುರಕ್ಷಿತ ಹಾಗೂ ಆರಾಮದಾಯಕವಾಗಿರುತ್ತದೆಂದು ಅದರಲ್ಲೇ ಪ್ರಯಾಣಿಸುತ್ತಾರೆ. ನೀವು ಕಾರಿನಲ್ಲಿ ಪ್ರಯಾಣಿಸುತ್ತೀರಾ? ಹಾಗಾದ್ರೆ ಈ ವಸ್ತುಗಳನ್ನು ನೆನಪಿನಲ್ಲಿ ಕಾರಿನಲ್ಲಿ ಇಟ್ಟುಕೊಳ್ಳಿ.

ಪ್ರಯಾಣ ದೊಡ್ಡದಿರಲಿ ಚಿಕ್ಕದಿರಲಿ ನಿಮ್ಮ ಕಾರಿನಲ್ಲಿ ಈ ಅಗತ್ಯ ವಸ್ತುಗಳನ್ನು ಇಟ್ಟುಕೊಳ್ಳಲು ಮರೆಯಬೇಡಿ. ಕೆಲ ವಸ್ತುಗಳು ತುರ್ತು ಸಂದರ್ಭದಲ್ಲಿ ನಿಮ್ಮ ನೆರವಿಗೆ ಬರುತ್ತವೆ.

ಮಹತ್ವದ ದಾಖಲೆ ಪತ್ರ:- ವಾಹನ ಚಾಲನೆ ಮಾಡುವಾಗ ಕಾರಿನ ಪ್ರಮುಖ ಪೇಪರ್‌ಗಳು ಮತ್ತು ನಿಮ್ಮ ಡ್ರೈವಿಂಗ್ ಲೈಸೆನ್ಸ್ ಸೇರಿ ಕೆಲ ದಾಖಲೆಗಳನ್ನು ನೀವು ಕಾರಿನಲ್ಲಿ ಇಟ್ಟಿರಬೇಕು. ಅನೇಕ ಬಾರಿ ಪೊಲೀಸರು ವಾಹನವನ್ನು ಪರಿಶೀಲಿಸುತ್ತಾರೆ. ದಾಖಲೆ ಇಲ್ಲದಿದ್ದರೆ ಪೊಲೀಸರಿಗೆ ದಂಡ ಪಾವತಿ ಮಾಡಬೇಕಾಗುತ್ತದೆ. ಇಲ್ಲವೆ ಯಾವುದೇ ರೀತಿಯ ಘಟನೆ ಮತ್ತು ಅಪಘಾತದ ಸಂದರ್ಭದಲ್ಲಿ ಈ ಪೇಪರ್ ಗಳು ತುಂಬಾ ಉಪಯುಕ್ತ.

ನೀರಿನ ಬಾಟಲಿ: ಬೇಕಾದಾಗ ನೀರನ್ನು ಖರೀದಿ ಮಾಡ್ಕೊಂಡ್ರೆ ಆಯ್ತು ಎನ್ನುತ್ತ ನೀರಿನ ಬಾಟಲಿಯನ್ನು ತೆಗೆದುಕೊಂಡು ಹೋಗುವುದಿಲ್ಲ. ಒಮ್ಮೆಲೆ ಬಾಯಾರಿಕೆಯಾದಾಗ, ಮಾತ್ರೆ ಸೇವನೆ ಮಾಡುವ ಸಂದರ್ಭದಲ್ಲಿ ಅಥವಾ ಅಪಘಾತವಾದಾಗ, ಇಲ್ಲವೆ ಮಕ್ಕಳ ಜೊತೆ ಕಾರಿನಲ್ಲಿ ಪ್ರಯಾಣ ಬೆಳೆಸುವಾಗ ನೀರಿನ ಅವಶ್ಯಕತೆ ಇದ್ದೇ ಇರುತ್ತದೆ. ಆಗ ನಮಗೆ ಅಂಗಡಿಯಲ್ಲಿ ನೀರಿನ ಬಾಟಲಿ ಖರೀದಿಗೆ ಸಿಗದೆ ಇರಬಹುದು. ಹಾಗಾಗಿ ಯಾವುದೇ ಪ್ರಯಾಣವಿರಲಿ, ನೀರಿನ ಬಾಟಲಿ ಕಾರ್ ನಲ್ಲಿ ಇರುವಂತೆ ನೋಡಿಕೊಳ್ಳಿ.

ಟಿಶ್ಯು ಪೇಪರ್: ಪ್ರಯಾಣದ ವೇಳೆ ವಾಂತಿಯಾದಾಗ ಟಿಶ್ಯು ಉಪಯೋಗವಾಗುತ್ತದೆ. ಏನಾದರೂ ತಿಂದು ನೀರಿನಿಂದ ಕೈ ತೊಳೆಯಲು ಸಾಧ್ಯವಾಗುದಿರುವ ಸಮಯದಲ್ಲಿ ಟಿಶ್ಯು ನೆರವಿಗೆ ಬರುತ್ತದೆ.

ತುರ್ತು ಔಷಧಿ: ತುರ್ತು ಸಂದರ್ಭದಲ್ಲಿ ಅಗತ್ಯವಿರುವ ಫಸ್ಟ್ ಎಡ್ ಬಾಕ್ಸ್ ( ಪ್ರಥಮ ಚಿಕಿತ್ಸೆ ಪೆಟ್ಟಿಗೆ) ನಿಮ್ಮ ಕಾರಲ್ಲಿ ಇರಲಿ. ನೀವೆನಾದ್ರೂ ಖಾಯಿಲೆಯಿಂದ ಬಳಲುತ್ತಿದ್ದರೆ ಅದಕ್ಕೆ ಸಂಬಂಧಿಸಿದ ಮಾತ್ರೆಗಳನ್ನು ಇಟ್ಟುಕೊಳ್ಳಿ. ಇದಲ್ಲದೆ, ವಾಂತಿ ನಿಯಂತ್ರಿಸುವ ಮಾತ್ರೆ, ಜ್ವರದ ಮಾತ್ರೆ, ತಲೆ ನೋವಿನ ಮಾತ್ರೆ, ಗ್ಯಾಸ್ಟ್ರಿಕ್ ಮಾತ್ರೆಗಳನ್ನು ನಿಮ್ಮ ಕಾರಿನಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು.

ಈ ಅಗತ್ಯ ವಸ್ತುಗಳನ್ನು ಹೊರತುಪಡಿಸಿ ಇನ್ನೂ ಕೆಲ ವಸ್ತುಗಳನ್ನು ಕಾರಿನಲ್ಲಿ ನೀವು ಇಟ್ಟುಕೊಳ್ಳಬೇಕು. ಬಿಸ್ಕತ್ ಸೇರಿದಂತೆ ಬೇಗನೆ ಹಾಳಾಗದ ಆಹಾರ, ಫೋನ್ ಚಾರ್ಜರ್, ಟಾರ್ಚ್, ಕತ್ತರಿ ಅಥವಾ ಚಾಕು, ಮಳೆಗಾಲದ ಸಮಯದಲ್ಲಿ ಕೊಡೆ, ಒಂದು ಜೊತೆ ಬಟ್ಟೆ ಸೇರಿದಂತೆ ಕೆಲ ಅಗತ್ಯ ವಸ್ತುಗಳನ್ನು ನೀವು ಇಟ್ಟುಕೊಳ್ಳುವುದು ಒಳ್ಳೆಯದು.

ಕಾರು ಹತ್ತುವ ಮೊದಲು ಈ ಮೇಲಿನ ಎಲ್ಲಾ ಅಗತ್ಯ ವಸ್ತುಗಳು ಇವೆಯೇ ಎಂದು ಪರೀಕ್ಷಿಸಿ ಪ್ರಯಾಣ ಬೆಳೆಸುವುದು ಉತ್ತಮ.

Leave A Reply

Your email address will not be published.