ಕರಾವಳಿಯ ಜಿಲ್ಲೆಗಳಿಗೆ ಜ.1 ರಿಂದ ಪಡಿತರ ಕುಚಲಕ್ಕಿ ವಿತರಣೆ – ಸಚಿವ ಕೋಟಾ ಶ್ರೀನಿವಾಸ ಪೂಜಾರಿ

ಸರ್ಕಾರವು ರಾಜ್ಯದ ಜನತೆಗೆ ನೆರವಾಗುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ. ಇದೀಗ ಪಡಿತರ ಯೋಜನೆಯಡಿಯಲ್ಲಿ ಕರಾವಳಿ ಭಾಗದ ಜನರಿಗೆ ಕುಚಲಕ್ಕಿ ವಿತರಿಸುವ ಯೋಜನೆಯನ್ನು ತಂದಿದೆ.

 

ಕರಾವಳಿ ಜಿಲ್ಲೆಗಳಾದ ಉಡುಪಿ, ದ. ಕನ್ನಡ ಹಾಗೂ ಉ. ಕನ್ನಡದಲ್ಲಿ ಜನವರಿ 1ರಿಂದ ಪಡಿತರ ಮೂಲಕ ಕುಚಲಕ್ಕಿ ವಿತರಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದರು. ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಭತ್ತವನ್ನು ಬೆಂಬಲ ಬೆಲೆಯಲ್ಲಿ ಖರೀದಿ ಮಾಡಿ, ಭತ್ತಕ್ಕೆ ಹೆಚ್ಚುವರಿ ಮೊತ್ತ ರಾಜ್ಯ ಸರ್ಕಾರ ಕೊಡಲು ಸರ್ಕಾರ ನಿರ್ಧರಿಸಿದೆ.

ಕರಾವಳಿ ಜಿಲ್ಲೆಗಳ ಜನರು ನಾವು ಊಟ ಮಾಡುವ ಕುಚಲಕ್ಕಿಯನ್ನು ಪಡಿತರ ಮೂಲಕ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದರು. ಆದರೆ ಬೇರೆ ಬೇರೆ ಕಾರಣಗಳಿಂದ ಅದರ ಜಾರಿ ಸಾಧ್ಯವಾಗಿರಲಿಲ್ಲ. ಬಹುಜನರ, ಬಹು ದಿನಗಳ ಬೇಡಿಕೆಯನ್ನು ಗಮನಿಸಿ ಸಿಎಂ ಊರಿನ ಕುಚಲಕ್ಕಿಯನ್ನು ನಾವು ಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಈ ಹಿನ್ನೆಲೆ ಆಹಾರ ಇಲಾಖೆ ಹಾಗೂ ಕೃಷಿ ಇಲಾಖೆ ಜೊತೆಗೆ ಸಭೆ ಮಾಡಿದ್ದೂ, ಉಡುಪಿ, ದ.ಕನ್ನಡ ಮತ್ತು ಉ.ಕನ್ನಡದಲ್ಲಿ ಡಿಸೆಂಬರ್ 1ರಿಂದ ಕುಚಲಕ್ಕಿಗೆ ಪೂರಕವಾಗಿ ಬೆಂಬಲ 2,540 ರೂ. ಬೆಲೆ ನೀಡಿ ಭತ್ತ ಖರೀದಿ ಕೇಂದ್ರ ತೆರೆಯುತ್ತೇವೆ. ಜನವರಿ 1ರಿಂದ ಕರಾವಳಿಯ ಮೂರು ಜಿಲ್ಲೆಗಳಿಗಳಲ್ಲಿ ಐದು ಕೆಜಿ ಕುಚಲಕ್ಕಿಯನ್ನು ಪಡಿತರ ಮೂಲಕ ವಿತರಿಸಲಾಗುತ್ತದೆ.

ವರ್ಷ ಪೂರ್ತಿ ನಮ್ಮಲ್ಲಿ ಕುಚಲಕ್ಕಿಯ ಭತ್ತ ಸಿಗುವುದು ಕಷ್ಟಸಾಧ್ಯವಾಗಲಿದೆ. ಹೀಗಾಗಿ ರಾಜ್ಯದ ಬೇರೆ ಜಿಲ್ಲೆಗಳಿಂದ ಭತ್ತ ಖರೀದಿ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕೆಂಪು ಕುಚಲಕ್ಕಿಯ ಭತ್ತವನ್ನೇ ಖರೀದಿ ಮಾಡಿ ಭತ್ತವನ್ನು ನಮ್ಮ ಊರಲ್ಲೇ ಸಂಸ್ಕರಣೆ ಮಾಡುತ್ತೇವೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರವು ಕುಚಲಕ್ಕಿ ಮಾಡುವ ತಳಿಗಳಾದ ಜಯ, ಅಭಿಲಾಷ ಜ್ಯೋತಿ, ಎಂಒ 4 ಗೆ ಬೆಂಬಲ ಬೆಲೆ ಘೋಷಣೆ ಮಾಡಿದ್ದೂ , ಪ್ರತಿ ಕ್ವಿಂಟಾಲ್‌ಗೆ 2,040 ರೂ. ಕೊಡುತ್ತಿದೆ. 13 ಲಕ್ಷ ಕ್ವಿಂಟಾಲ್ ಭತ್ತ ಖರೀದಿಯ ಗುರಿ ಇದ್ದೂ ಈ ಪೈಕಿ 8.50 ಲಕ್ಷ ಕ್ವಿಂಟಾಲ್ ಭತ್ತ ಬರುವ ಅಂದಾಜಿದೆ. ಇದನ್ನು ವಿತರಣೆ ಮಾಡಲಾಗುವುದು ಎಂದರು.

ಸರ್ಕಾರ ಕೊಡುವ ಬೆಂಬಲ ಬೆಲೆಗೆ ಭತ್ತ ಸಿಗದ ಕಾರಣ ಸಿಎಂ ಪ್ರತಿ ಕ್ವಿಂಟಾಲ್‌ಗೆ 500 ರೂ. ಹೆಚ್ಚುವರಿ ಬೆಲೆ ಕೊಡುತ್ತಿದ್ದಾರೆ. ಇದನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ. ಇದಕ್ಕೆ ಸುಮಾರು 132 ಕೋಟಿ ರೂ. ಆಗುವ ಅಂದಾಜಿದೆ ಎಂದು ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ತಿಳಿಸಿದರು.

Leave A Reply

Your email address will not be published.