ನಾಗದೇವರ ಮೂರ್ತಿಯನ್ನು ಧ್ವಂಸ ಮಾಡಿದ ಕಿಡಿಗೇಡಿಗಳು!
ಜನರಿಗೆ ನಂಬಿಕೆ ಇರುವ ದೇವಸ್ಥಾನ, ಧಾರ್ಮಿಕ ಕ್ಷೇತ್ರಗಳ ಮೇಲೆ ಕೆಲವರು ಅಸಡ್ಡೆ ತೋರಿ ಜನರ ನಂಬಿಕೆಯನ್ನು ಪ್ರಶ್ನಿಸುವ ಪ್ರಯತ್ನ ಎಗ್ಗಿಲ್ಲದೆ ನಡೆಯುತ್ತಿದೆ. ಅದರಲ್ಲಿ ಕೂಡ ದೇವರು-ದೇವಸ್ಥಾನಗಳನ್ನು ಗುರಿಯಾಗಿಸಿ ನಡೆಯುತ್ತಿರುವ ಕಿಡಿಗೇಡಿತನಕ್ಕೆ ಈಗ ಇನ್ನೊಂದು ಪ್ರಕರಣ ಸೇರ್ಪಡೆಯಾಗಿದೆ.
ನಾಗದೇವರ ಮೂರ್ತಿಯೊಂದನ್ನು ಕಿಡಿಗೇಡಿಗಳು ಧ್ವಂಸಗೊಳಿಸಿ, ಹಿಂದೂಗಳ ಭಾವನೆಗಳ ಜೊತೆಗೆ ಆಟವಾಡುವ ಯತ್ನ ನಡೆಸಿದ್ದಾರೆ. ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ ಚಿಕ್ಕತೋಗೂರು ಗೇಟ್ ಬಳಿ ಈ ಪ್ರಕರಣ ನಡೆದಿದ್ದು, ಹೊಸೂರು ಬೆಂಗಳೂರು ಮುಖ್ಯರಸ್ತೆಯ ಚಿಕ್ಕತೋಗೂರಿನ ರಸ್ತೆಪಕ್ಕದ ನಾಗದೇವರ ಬನದಲ್ಲಿನ ಮೂರ್ತಿಯನ್ನು ಕಿಡಿಗೇಡಿಗಳು ನಿನ್ನೆ ರಾತ್ರಿ ವಿರೂಪಗೊಳಿಸಿದ್ದಾರೆ.
ಸುಮಾರು 30 ವರ್ಷಗಳಿಂದ ಇಲ್ಲಿ ಪೂಜೆ ಪುನಸ್ಕಾರ ನಡೆಯುತ್ತಿದ್ದು, ಪ್ರತಿದಿನವೂ ಪೂಜೆ ನಡೆಯುವ ಈ ಜಾಗದಲ್ಲಿ ನಿನ್ನೆ ಕಿಡಿಗೇಡಿಗಳು ಕಲ್ಲಿನಿಂದ ಹೊಡೆದು ದೇವರ ಮೂರ್ತಿಯನ್ನು ಒಡೆದು ಹಾಕಿದ್ದಾರೆ. ದೇವರ ಮೂರ್ತಿಯನ್ನು ವಿರೂಪಗೊಳಿಸಿದ್ದಕ್ಕೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕಿಡಿಕಾರಿದ್ದಾರೆ.
ಘಟನೆ ನಡೆದಿರುವ ಸ್ಥಳಕ್ಕೆ ಭಜರಂಗದಳ ಹಾಗೂ ಹಿಂದೂ ಪರ ಹೋರಾಟಗಾರರು ಭೇಟಿ ನೀಡಿದ್ದಾರೆ. ಇದರ ಜೊತೆಗೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಕೂಡ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.