Winter Skin Care : ಚಳಿಗಾಲದಲ್ಲಿ ಒಣ ತ್ವಚೆ ನಿವಾರಣೆ ಮಾಡಲು ಈ ಎಣ್ಣೆಗಳು ಉತ್ತಮ!
ಚಳಿಗಾಲ ಬಂತೆಂದರೆ ಸಾಕು, ನಮಗೆ ಎದುರಾಗುವ ಮೊದಲ ಸಮಸ್ಯೆಯೇ ಚರ್ಮ ಒಣಗುವುದು, ತುಟಿಗಳು ಒಡೆಯುವುದು, ಒಡೆದ ಚರ್ಮ, ಬಿಳಿ ತ್ವಚೆ ಹೀಗೆ ಚರ್ಮದ ಸಮಸ್ಯೆಗಳು ಕಾಡುತ್ತವೆ. ಈ ಸಮಸ್ಯೆಗಳಿಗೆ ನಾವು ವಿವಿಧ ಕ್ರೀಮ್, ಲೋಷನ್, ಎಣ್ಣೆಗಳನ್ನು ಮಾರುಕಟ್ಟೆಯಿಂದ ಖರೀದಿಸುತ್ತೇವೆ.
ಆದರೆ ಇವುಗಳು ಚರ್ಮದ ಮೇಲೆ ಸ್ವಲ್ಪ ಸಮಯದವರೆಗೆ ಮಾತ್ರ ಪರಿಣಾಮಬೀರಿ, ಚರ್ಮವು ಮತ್ತೆ ಶುಷ್ಕ ಮತ್ತು ಮಂದವಾಗುತ್ತದೆ. ಹಾಗಾಗಿ ಇದಕ್ಕೆ ಮನೆಮದ್ದು ಎಂಬಂತೆ, ಮನೆಯಲ್ಲಿರುವ ಎಣ್ಣೆಗಳನ್ನು ಬಳಸಿಕೊಂಡು ಈ ಸಮಸ್ಯೆಯನ್ನು ಹೋಗಲಾಡಿಸಬಹುದು. ಹೇಗೆ ಅಂತೀರಾ? ನೀವೇ ನೋಡಿ
ಅನೇಕ ಜನರು ಚರ್ಮದ ಆರೈಕೆಗಾಗಿ ತೈಲವನ್ನು ಬಳಸುತ್ತಾರೆ ಅದರಲ್ಲೂ ವಿಶೇಷವಾಗಿ ಚಳಿಗಾಲದಲ್ಲಿ ತ್ವಚೆಯ ಮೇಲೆ ಎಣ್ಣೆಯನ್ನು ಹಚ್ಚುವುದರಿಂದ ಚಳಿಗಾಲದಲ್ಲಿ ತ್ವಚೆ ಒಣಗುವುದನ್ನು ತಡೆಯಬಹುದು. ಇದು ಶುಷ್ಕತೆಯನ್ನು ಹೋಗಲಾಡಿಸುತ್ತದೆ ಮತ್ತು ನಿಮ್ಮ ತ್ವಚೆಯನ್ನು ಹೊಳೆಯುವಂತೆ ಮಾಡುತ್ತದೆ. ನಿಮ್ಮ ತ್ವಚೆಯ ಆರೈಕೆಯ ದಿನಚರಿಯಲ್ಲಿ ನೀವು ಸೇರಿಸಬಹುದಾದ ಕೆಲವು ಅತ್ಯುತ್ತಮ ಚಳಿಗಾಲದ ತೈಲಗಳನ್ನು ನಾವಿಲ್ಲಿ ನೀಡಿದ್ದೇವೆ. ಒಮ್ಮೆ ಟ್ರೈ ಮಾಡಿ ನೋಡಿ.
ತೆಂಗಿನ ಎಣ್ಣೆ:- ತೆಂಗಿನ ಎಣ್ಣೆಯಲ್ಲಿರುವ ಆಂಟಿ ಬ್ಯಾಕ್ಟಿರಿಯಲ್ ಮತ್ತು ಆಂಟಿ ಫಂಗಲ್ ಅಂಶಗಳು ಚರ್ಮದ ಅನೇಕ ಸಮಸ್ಯೆಗಳನ್ನು ದೂರಮಾಡುತ್ತದೆ. ಚಳಿಗಾಲದಲ್ಲಿ ಇದು ಚರ್ಮಕ್ಕೆ ಅತ್ಯುತ್ತಮವಾದ ಏಜೆಂಟ್ ಆಗಿ ಕಾರ್ಯನಿರ್ವಹಿಸುವುದರಿಂದ ಇದನ್ನು ಸ್ನಾನದ ನಂತರ ಮಸಾಜ್ ಮಾಡುವುದರಿಂದ ಚರ್ಮದ ಟೋನ್ ಅನ್ನು ಸುಧಾರಿಸುತ್ತದೆ ಮತ್ತು ಚರ್ಮವನ್ನು ಪೋಷಿಸುತ್ತದೆ.
ಆಲಿವ್ ಎಣ್ಣೆ:- ಆಲಿವ್ ಎಣ್ಣೆಯು ಆಂಟಿ-ಆಕ್ಸಿಡೆಂಟ್ ಮತ್ತು ವಯಸ್ಸಾದ ವಿರೋಧಿ ಗುಣಗಳನ್ನು ಹೊಂದಿದೆ. ವಿಶೇಷ ಚಳಿಗಾಲದ ಚರ್ಮದ ಆರೈಕೆಗಾಗಿ ಆಲಿವ್ ಎಣ್ಣೆಯನ್ನು ಸ್ನಾನ ಮಾಡಿದ ನಂತರ ಮಸಾಜ್ ಮಾಡುವುದರಿಂದ ತ್ವಚೆಯನ್ನು ಮೃದುವಾಗಿ ಮತ್ತು ಕಾಂತಿಯುತವಾಗಿ ಇರಿಸುತ್ತದೆ.
ಬಾದಾಮಿ ಎಣ್ಣೆ:- ಬಾದಾಮಿ ಎಣ್ಣೆಯಲ್ಲಿ ವಿಟಮಿನ್ ಎ, ವಿಟಮಿನ್ ಬಿ ಮತ್ತು ವಿಟಮಿನ್ ಇ ಸಮೃದ್ಧವಾಗಿದ್ದೂ, ಇದು ಚಳಿಗಾಲದಲ್ಲಿ ಚರ್ಮದ ಶುಷ್ಕತೆಯನ್ನು ನಿವಾರಿಸುವುದರ ಜೊತೆಗೆ ತ್ವಚೆಯನ್ನು ಪೋಷಿಸಲು ಸಹ ಉಪಯುಕ್ತವಾಗಿದೆ. ಸ್ನಾನದ ನಂತರ ಬಾದಾಮಿ ಎಣ್ಣೆಯನ್ನು ತ್ವಚೆಗೆ ಹಚ್ಚುವುದರಿಂದ ತ್ವಚೆಯ ಸನ್ಟಾನ್ ಮತ್ತು ಸತ್ತ ಚರ್ಮದ ಕೋಶಗಳನ್ನು ಹೋಗಲಾಡಿಸುತ್ತದೆ.
ಸೂರ್ಯಕಾಂತಿ ಎಣ್ಣೆ:- ಸೂರ್ಯಕಾಂತಿ ಎಣ್ಣೆಯು ಚರ್ಮದಲ್ಲಿರುವ ಬ್ಯಾಕ್ಟಿರಿಯಾ ಮತ್ತು ಮೊಡವೆಗಳನ್ನು ಹೋಗಲಾಡಿಸಲು ಮತ್ತು ಸತ್ತ ಚರ್ಮದ ಕೋಶಗಳನ್ನು ಸರಿಪಡಿಸಲು ಸಹಾಯಕಾರಿ. ಸೂರ್ಯಕಾಂತಿ ಎಣ್ಣೆಯು ಬೀಟಾ-ಕ್ಯಾರೋಟಿನ್ ಮತ್ತು ಉತ್ಕರ್ಷಣ ನಿರೋಧಕಗಳ ಅತ್ಯುತ್ತಮ ಮೂಲ. ಸೂರ್ಯಕಾಂತಿ ಎಣ್ಣೆಯನ್ನು ನಿಯಮಿತವಾಗಿ ಬಳಸುವುದರಿಂದ ಚರ್ಮವು ಹೊಳೆಯುತ್ತದೆ.
ಸಾಸಿವೆ ಎಣ್ಣೆ:- ಸಾಸಿವೆ ಎಣ್ಣೆಯಲ್ಲಿರುವ ಬೀಟಾ-ಕ್ಯಾರೋಟಿನ್, ಆಂಟಿಫಂಗಲ್ ಮತ್ತು ಬ್ಯಾಕ್ಟಿರಿಯಾ ವಿರೋಧಿ ಗುಣಗಳು ಮೊಡವೆ, ಕಲೆಗಳು ಮತ್ತು ಚರ್ಮದ ಸೋಂಕುಗಳಿಗೆ ಪರಿಹಾರ ನೀಡುತ್ತದೆ. ಚಳಿಗಾಲದಲ್ಲಿ ಚರ್ಮದ ಪರಿಚಲನೆ ಸುಧಾರಿಸಲು ಸಾಸಿವೆ ಎಣ್ಣೆಯನ್ನು ಸ್ನಾನದ ನಂತರ ಮಸಾಜ್ ಮಾಡಬಹುದು.