ಮೊಟ್ಟೆ ಪ್ರಿಯರೇ ನಿಮಗೊಂದು ಕಹಿ ಸುದ್ದಿ | ಮೊಟ್ಟೆ ಬೆಲೆ ದಿಢೀರ್ ಏರಿಕೆ | ಕಾರಣವೇನು?
ಸಾಮಾನ್ಯ ಜನತೆಗೆ ಬೆಲೆ ಏರಿಕೆಯ ಬಿಸಿಯ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇತ್ತೀಚೆಗಷ್ಟೇ ಹಾಲಿನ ದರ, ಈರುಳ್ಳಿ, ಅಡಿಗೆ ಎಣ್ಣೆಗಳ ದರ ಏರಿಕೆಯಾಗಿ ಗಾಯದ ಮೇಲೆ ಬರೆ ಎಳೆದಂತಹ ಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಕೂಡ ದಿನಬಳಕೆ ವಸ್ತುಗಳ ಬೆಲೆ ದಿನಂಪ್ರತಿ ಹೆಚ್ಚಳವಾಗುತ್ತಿರುವ ನಡುವೆಯೇ ಮತ್ತೊಂದು ಶಾಕ್ ಎದುರಾಗಿದೆ .
ಚಳಿಗಾಲದ ಸನಿಹದಲ್ಲೇ ಈಗ ಕೋಳಿ ಮೊಟ್ಟೆ ಬೆಲೆಯು ಗಗನಕ್ಕೇರಿದ್ದು ಸಾಮಾನ್ಯ ಜನತೆ ಪರದಾಡುವ ಸ್ಥಿತಿ ಉಂಟಾಗಿದೆ. ಚಳಿಗಾಲ ಬಂದಾಗ ಸುತ್ತಮುತ್ತಲಿನ ಎಲ್ಲಾ ವಾತಾವರಣವೂ ಬದಲಾಗುವುದು ಸಹಜ. ಈ ಸಮಯದಲ್ಲಿ ನಾವು ಸೇವಿಸುವ ಆಹಾರ ಕ್ರಮದಲ್ಲಿ ಕೂಡ ಕೊಂಚ ಬದಲಾವಣೆ ಮಾಡಿಕೊಳ್ಳುವುದು ಸಾಮಾನ್ಯ. ಚಳಿಗಾಲದಲ್ಲಿ ನಮ್ಮ ದೇಹವನ್ನು ಬೆಚ್ಚಗೆ ಇಡುವಂತಹ ಆಹಾರವನ್ನು ಸೇವಿಸುವುದು ವಾಡಿಕೆ. ಅದರಲ್ಲೂ ಚಳಿಗಾಲದಲ್ಲಿ ಮಾಂಸಾಹಾರ ಸೇವಿಸುವವರ ಸಂಖ್ಯೆಯೂ ಕೂಡ ಏರಿಕೆಯಾಗುತ್ತದೆ.
ಇದೀಗ, ಬ್ಯಾಚುಲರ್ಸ್ ಫುಡ್ ಎಂದೆ ಪ್ರಸಿದ್ಧಿ ಪಡೆದ ಮೊಟ್ಟೆಯ ದರ ಈಗ ಏರುಗತಿಯಲ್ಲಿದ್ದು, ಈ ಬಾರಿ ಪ್ರತಿ ಮೊಟ್ಟೆ 5 ರೂಪಾಯಿಯಿಂದ ಹಿಡಿದು 6-7 ರೂ. ತಲುಪಿದೆ. ಇದು ಈ ವರ್ಷದ ಗರಿಷ್ಠ ದರ ಎನ್ನುವುದು ಮೊಟ್ಟೆ ವ್ಯಾಪಾರಿಗಳ ಜೊತೆಗೆ ಗ್ರಾಹಕರ ಅಭಿಮತವಾಗಿದೆ.
ಒಂದು ವಸ್ತುವಿಗೆ ಹೆಚ್ಚಿನ ಬೇಡಿಕೆ ಇದ್ದು, ಅದರ ಲಭ್ಯತೆ ಕಡಿಮೆ ಇದ್ದಾಗ ಬೆಲೆ ಏರಿಕೆ ಮಾಡುವುದು ಸಾಮಾನ್ಯ ವಿಚಾರ. ಮೊಟ್ಟೆಯ ವಿಚಾರಕ್ಕೂ ಇದು ಅನ್ವಯವಾಗುತ್ತದೆ. ಚಳಿಗಾಲದಲ್ಲಿ ಮೊಟ್ಟೆ ಉತ್ಪಾದನೆ ಕಡಿಮೆಯಾಗುವುದಲ್ಲದೆ, ಮೊಟ್ಟೆಗಳ ಬಳಕೆ ಹೆಚ್ಚಾಗುತ್ತದೆ. ಜತೆಗೆ ಡಿಸೆಂಬರ್ ತಿಂಗಳು ಹತ್ತಿರವಾಗುತ್ತಿದ್ದಂತೆ ಕ್ರಿಸ್‌ಮಸ್ ಮತ್ತು ಹೊಸ ವರ್ಷದ ಸಂದರ್ಭದಲ್ಲಿ ಕೇಕ್ ತಯಾರಿಕೆಗೆ ಹೆಚ್ಚಾಗಿ ಮೊಟ್ಟೆಯ ಅವಶ್ಯಕತೆ ಇದ್ದು, ಡಿಸೆಂಬರ್ ನಲ್ಲಿ ಸುಮಾರು 2.5 ಕೋಟಿ ಮೊಟ್ಟೆಗಳನ್ನು ಬಳಸಲಾಗುತ್ತದೆ. ಅದರಲ್ಲೂ ಕೂಡ ಬೆಂಗಳೂರು, ನಂತರ ಮಂಗಳೂರಿನಲ್ಲಿ ಹೆಚ್ಚಿನ ಪ್ರಮಾಣದ ಮೊಟ್ಟೆ ಬಳಕೆಯಾಗುತ್ತದೆ.
ಪ್ರತಿದಿನ ಸುಮಾರು 5 ಲಕ್ಷ ಮೊಟ್ಟೆ ಬಳಕೆಯಾಗಲಿದ್ದು ಮೊಟ್ಟೆ ದರ ಏರಿಕೆಯಿಂದ ಗ್ರಾಹಕರಿಗೆ ಶಾಕ್ ಎದುರಾಗಿದೆ. ಇನ್ನೂ ದೇಶ ವಿದೇಶ ಸಾಗಾಟ ಯತೇಥ್ಛವಾಗಿ ಮಾಡಲಾಗುತ್ತಿದ್ದು, ಈ ನಡುವೆ ಮುಂದಿನ ದಿನಗಳಲ್ಲಿಯು ಕೂಡ ಒಂದು ಮೊಟ್ಟೆ ದರ 7 ರೂಪಾಯಿಗಿಂತಲೂ ಹೆಚ್ಚಾಗುವ ನಿರೀಕ್ಷೆ ಇದೆ.