PMJJBY : ಪ್ರಧಾನಮಂತ್ರಿ ಜೀವನ್ ಜ್ಯೋತಿ ವಿಮೆ ಬಗ್ಗೆ ಮುಖ್ಯವಾದ ಮಾಹಿತಿ ಇಲ್ಲಿದೆ!
ಪ್ರಧಾನ ಮಂತ್ರಿ ಜೀವನ್ ಜ್ಯೋತಿ ವಿಮೆ (PMJJBY) ಯೋಜನೆಯನ್ನು 2015ರ ಬಜೆಟ್ನಲ್ಲಿ ಹಣಕಾಸು ಸಚಿವರು ಘೋಷಿಸಿದ್ದರು. ಕೋಲ್ಕತ್ತಾದಲ್ಲಿ ಅದೇ ವರ್ಷ ಮೇ 9ರಂದು ಪ್ರಧಾನಿ ನರೇಂದ್ರ ಮೋದಿ ಈ ಯೋಜನೆಗೆ ಚಾಲನೆ ನೀಡಿದರು.
18ರಿಂದ 50 ವರ್ಷ ವಯಸ್ಸಿನವರು ಪಿಎಂಜೆಜೆಬಿವೈ ಯೋಜನೆಯಡಿ ಜೀವ ವಿಮೆ ಮಾಡಿಸಿಕೊಳ್ಳಬಹುದಾಗಿದೆ. ಜೀವ ವಿಮೆ ಮಾಡಿಸಿಕೊಳ್ಳಲು ಬ್ಯಾಂಕ್ ಖಾತೆ ಇರಬೇಕು. ವಾರ್ಷಿಕವಾಗಿ 436 ರೂ. ಪ್ರೀಮಿಯಂ ಪಾವತಿಸಬೇಕಾಗುತ್ತದೆ ಮತ್ತು ಇದಕ್ಕೆ ಜಿಎಸ್ಟಿಯಿಂದ ವಿನಾಯಿತಿ ಇದೆ.
12 ತಿಂಗಳ ಅವಧಿಯ ವಿಮೆ ಇದಾಗಿದ್ದು, ಜೂನ್ 1ರಿಂದ ಮೇ 31ರ ವರೆಗಿದೆ. ಸ್ವಯಂ ಪಾವತಿ ವ್ಯವಸ್ಥೆ ಅಳವಡಿಸಿಕೊಂಡರೆ ಪ್ರತಿ ವರ್ಷ 436 ರೂ. ವಿಮೆಗೆ ಮೇ 31ರಂದು ಪಾವತಿಯಾಗುತ್ತದೆ. ಎಲ್ಲ ಬ್ಯಾಂಕ್ಗಳ ನೆಟ್ ಬ್ಯಾಂಕಿಂಗ್ ವಿಭಾಗದಲ್ಲಿ ಈ ವಿಮೆ ಮಾಡಿಸಿಕೊಳ್ಳುವ ಅವಕಾಶವಿದೆ.
55 ವರ್ಷ ವಯಸ್ಸಿನವರೆಗೆ ಅಟೋ ರಿನೀವಲ್ ಮಾದಲಗುತ್ತದೆ. ಹಾಗೆಂದು 50 ವರ್ಷ ಮೇಲ್ಪಟ್ಟವರು ಮೊದಲ ಬಾರಿ ಈ ವಿಮೆಗೆ ನೋಂದಣಿ ಮಾಡಿಸಿಕೊಳ್ಳಲಾಗುವುದಿಲ್ಲ. ವಿಮೆ ಮಾಡಿಸಿಕೊಂಡವರು ಮೃತಪಟ್ಟಲ್ಲಿ, ಅವರು ನಾಮನಿರ್ದೇಶನ ಮಾಡಿರುವವರಿಗೆ (ನಾಮಿನಿ) 2 ಲಕ್ಷ ರೂ. ಪರಿಹಾರ ಮೊತ್ತ ದೊರೆಯಲಿದೆ.
ವಿಮೆ ನೋಂದಣಿ ಮಾಡಿಕೊಂಡ 45 ದಿನಗಳ ಮೊದಲು ಅಪಘಾತವನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯಲ್ಲಿ ಸಾವು ಸಂಭವಿಸಿದರೆ ಪರಿಹಾರ ದೊರೆಯುವುದಿಲ್ಲ. 45 ದಿನಗಳ ನಂತರವಾದರೆ ಸಿಗುತ್ತದೆ.