ಪ್ಲಾಸ್ಟಿಕ್ ಮುಕ್ತ ದೇಶವಾಗುವತ್ತ ದಿಟ್ಟ ಹೆಜ್ಜೆ ಇಡುತ್ತಿರುವ ಆಸ್ಟ್ರೇಲಿಯಾ| ಹೇಗೆ ಅಂತೀರಾ?? ಇಲ್ಲಿದೆ ಡೀಟೇಲ್ಸ್|
ಪ್ಲಾಸ್ಟಿಕ್ ನಿಷಿದ್ಧ ಎಂದು ಬೋರ್ಡ್ ಹಾಕಿದಲ್ಲಿಯೇ ಪ್ಲಾಸ್ಟಿಕ್ ಬಳಕೆ ಮಾಡುವ ಪರಿಪಾಠ ಇಂದಿಗೂ ಹೆಚ್ಚಾಗಿ ನಡೆಯುತ್ತಿದೆ. ಪ್ಲಾಸ್ಟಿಕ್ ಬಳಕೆ ನಿಷೇಧದ ಕುರಿತು ಎಷ್ಟೇ ಜಾಗೃತಿ ಮೂಡಿಸಿದರು ಕೂಡ ಜನರಿಗೆ ಪ್ಲಾಸ್ಟಿಕ್ ವಸ್ತುಗಳ ಮೇಲಿನ ನಂಟು ಅಷ್ಟು ಸುಲಭದಲ್ಲಿ ಬಿಡಲು ಸಾಧ್ಯವಿಲ್ಲ. ಮತ್ತೊಂದು ವಿಪರ್ಯಾಸದ ಸಂಗತಿ ಎಂದರೆ, ಈ ಪ್ಲಾಸ್ಟಿಕ್ನಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅರಿವಿದ್ದರೂ ಇಂದಿಗೂ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿರುವ ಜೊತೆಗೆ ಅದರ ಬಳಕೆ ಕಡಿಮೆಯಾಗುವ ಬದಲಿಗೆ ಹೆಚ್ಚಾಗಿ ಬಳಸಲಾಗುತ್ತಿದೆ.
ಭಾರತ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ನಿಷೇಧ ಹೇರಲಾಗಿದ್ದರೂ ಅದನ್ನು ಸರಿಯಾದ ರೀತಿಯಲ್ಲಿ ನಿಯಂತ್ರಣ ಮಾಡುವಲ್ಲಿ ವಿಫಲವಾಗುತ್ತಿವೆ.
ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವ ಸಲುವಾಗಿ ಐದು ವರ್ಷಗಳ ಮಾರ್ಗಸೂಚಿ ಅಳವಡಿಸಿರುವ ಆಸ್ಟ್ರೇಲಿಯಾದಲ್ಲಿ ಕಳೆದ ಕೆಲವು ವರ್ಷಗಳಿಂದ ಈ ನಿಟ್ಟಿನಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಲು ನಿರಂತರವಾಗಿ ವಿವಿಧ ಕ್ರಮಗಳನ್ನು ಜಾರಿಗೆ ತರುತ್ತಾ ಬಂದಿದೆ. ಇದೀಗ ದೇಶವನ್ನು ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತವನ್ನಾಗಿಸುವ ದಿಸೆಯಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯನ್ನಿರಿಸಿದೆ.
ಆಸ್ಟ್ರೇಲಿಯಾದಲ್ಲಿ 1989ರಿಂದ ಪ್ಲಾಸ್ಟಿಕ್ ಬಳಕೆಯ ಕಡಿವಾಣ ಹಾಕುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಜಾರಿಗೆ ತರಲಾಗಿದ್ದು, ಅದರ ಅನುಷ್ಠಾನ ಪ್ರಕ್ರಿಯೆಗೆ ಮುಂದಾಗಿದೆ. ಇದೀಗ, ಜನಸಂಖ್ಯೆ ಹೆಚ್ಚಿರುವ ರಾಜ್ಯಗಳಲ್ಲಿ ಏಕ ಬಳಕೆಯ ಪ್ಲಾಸ್ಟಿಕ್ಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದ್ದು, ಹಂತಹಂತವಾಗಿ ಉಳಿದ ರಾಜ್ಯಗಳಿಗೆ ಇದು ವಿಸ್ತರಣೆಯಾಗಲಿದೆ. ಪ್ರಸ್ತುತ ಯೋಜನೆಯ ಅನ್ವಯ ಈ ಪ್ರಕ್ರಿಯೆ ಸರಿಯಾಗಿ ಕಾರ್ಯ ರೂಪಕ್ಕೆ ಬಂದದ್ದೆ ಆದರೆ, ಆಸ್ಟ್ರೇಲಿಯಾ ಇನ್ನೂ ಮುಂದೆ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ದೇಶವಾಗುವುದರಲ್ಲಿ ಸಂದೇಹವಿಲ್ಲ.
ಆಸ್ಟ್ರೇಲಿಯಾದಲ್ಲಿ 2018ರಿಂದಲೇ ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸಲಾಗಿದೆ. ಪ್ರಸ್ತುತ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆಯಾಗುತ್ತಿದೆ. ದೇಶದ ಶೇ. 50ಕ್ಕೂ ಹೆಚ್ಚು ರಾಜ್ಯಗಳಲ್ಲಿ ಈಗಾಗಲೇ ಬಹುತೇಕ ಏಕ ಬಳಕೆಯ ಪ್ಲಾಸ್ಟಿಕ್ಗಳನ್ನು ನಿಷೇಧಿಸಲಾಗಿದ್ದು, ಇದರೊಂದಿಗೆ ಈಗ ಸ್ಟ್ರಾ, ಕಟ್ಲರಿ ಸಹಿತ ಇನ್ನು ಹಲವಾರು ಪ್ಲಾಸ್ಟಿಕ್ ಉತ್ಪನ್ನವನ್ನೂ ಕೂಡ ಇದರೊಂದಿಗೆ ಸೇರಿಸಲಾಗಿದೆ. ಸೂಕ್ಷ್ಮ ಪ್ಲಾಸ್ಟಿಕ್ ಕಣಗಳಿಂದ ಉಂಟಾಗುವ ತ್ಯಾಜ್ಯವನ್ನು ಕಡಿಮೆ ಮಾಡುವ ಸಲುವಾಗಿ ಹೆಚ್ಚು ಜನ ಸಂಖ್ಯೆ ಹೊಂದಿರುವ ನ್ಯೂ ಸೌತ್ ವೇಲ್ಸ್ ನಲ್ಲಿ ಇವುಗಳ ಬಳಕೆಗೆ ಈಗಾಗಲೆ ಸಂಪೂರ್ಣ ನಿಯಂತ್ರಣ ಮಾಡಲು ಕ್ರಮ ಕೈಗೊಳ್ಳಲಾಗಿದೆ.
ಅತೀ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದಿ ಸುವ ದೇಶವೆಂದು ದಾಖಲೆ ಬರೆದಿದ್ದ ಆಸ್ಟ್ರೇಲಿಯಾದಲ್ಲಿ ನಿರಂತರವಾಗಿ ಪ್ಲಾಸ್ಟಿಕ್ ತ್ಯಾಜ್ಯ ವಿರೋಧಿ ಆಂದೋಲನ ನಡೆಸಲಾಗಿದ್ದು, ಸಿಡ್ನಿ ಮೂಲದ ಇಯಾನ್ ಕೀರ್ನಾನ್ ಇದರ ನೇತೃತ್ವ ವಹಿಸಿದ್ದರು. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಯಲ್ಲಿ ವಿಶ್ವದ 25 ರಾಷ್ಟ್ರಗಳ ಪೈಕಿ ಆಸ್ಟ್ರೇಲಿಯಾವು 7ನೇ ಸ್ಥಾನದಲ್ಲಿದೆ. ಬಳಿಕ ಯುರೋಪಿಯನ್ ರಾಷ್ಟ್ರಗಳು, ಜಪಾನ್, ಯುಕೆ, ಯುಎಸ್ ಇದೆ. ಸುರಕ್ಷಿತ ವಿಧಾನದಲ್ಲಿ ಪ್ಲಾಸ್ಟಿಕ್ ಬಳಕೆ ಮತ್ತು ಜಾಗೃತಿ ಮೂಡಿಸಲ್ಲಿ ಆಸ್ಟ್ರೇಲಿಯಾ ಪ್ರಥಮ ಸ್ಥಾನದಲ್ಲಿದೆ. ಅಂಕಿಅಂಶಗಳ ಆಧಾರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ಸಮರ್ಥ ಸಂಗ್ರಹ ಮತ್ತು ವಿಂಗಡಣೆಯಲ್ಲಿ 16ನೇ ಸ್ಥಾನದಲ್ಲಿದೆ.
ಐದು ವರ್ಷಗಳ ಮಾರ್ಗಸೂಚಿಯ ಅನ್ವಯ ಕ್ವೀನ್ಸ್ಲ್ಯಾಂಡ್ನಲ್ಲಿ 2023ರ ಸೆಪ್ಟಂಬರ್ನಿಂದ ಭಾರೀ ಗಾತ್ರದ ಪ್ಲಾಸ್ಟಿಕ್ ಶಾಪಿಂಗ್ ಬ್ಯಾಗ್ಗಳ ಜತೆಗೆ ಇನ್ನೂ ಹೆಚ್ಚಿನ ಪ್ಲಾಸ್ಟಿಕ್ಗಳಿಗೆ ನಿಷೇಧ ಹೇರಲಾಗುತ್ತದೆ. ವಿಕ್ಟೋರಿಯಾದಲ್ಲಿ 2023ರ ಫೆ. 1ರಿಂದ ಏಕ ಬಳಕೆಯ ಪ್ಲಾಸ್ಟಿಕ್ಗಳ ಮಾರಾಟ ಮತ್ತು ಪೂರೈಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ಕಳೆದ ಜೂನ್ನಲ್ಲಿ ನ್ಯೂ ಸೌತ್ ವೇಲ್ಸ್ನಲ್ಲಿ ಹಗುರವಾದ ಪ್ಲಾಸ್ಟಿಕ್ ಚೀಲಗಳನ್ನು ನಿಷೇಧಿಸಲಾಗಿತ್ತು. ಇದರೊಂದಿಗೆ ಮಂಗಳವಾರ ದಿಂದ ಏಕ ಬಳಕೆಯ ಪ್ಲಾಸ್ಟಿಕ್ಗಳಾದ ಕುಡಿಯಲು ಬಳಕೆ ಯಾಗುವ ಸ್ಟ್ರಾ, ಹತ್ತಿಯ ಬಡ್ಸ್, ಆಹಾರ ಕೊಂಡೊಯ್ಯುವ ಪಾಲಿಸ್ಟರ್ ಪಾತ್ರೆಗಳನ್ನು ಸೇರಿಸಲಾಗಿದೆ.
1989ರಲ್ಲಿ ಕ್ಲೀನ್ ಅಪ್ ಸಿಡ್ನಿ ಹಾರ್ಬರ್ ಅಭಿಯಾನವನ್ನು ಪ್ರಾರಂಭಿಸಿದ ಇಯಾನ್ ಕೀರ್ನಾನ್ ಅವರ ತಂಡ ಪ್ರಪಂಚದ ಅತ್ಯಂತ ಪ್ರಸಿದ್ಧ ಜಲ ಮಾರ್ಗಗಳ ತಾಜ್ಯವನ್ನು ನಿಭಾಯಿಸುವ ನಿಟ್ಟಿನಲ್ಲಿ ಪ್ರಯತ್ನ ಪ್ರಾರಂಭಿಸಿತ್ತು. ಈ ಯೋಜನೆಗೆ ಸಿಡ್ನಿ ಭಾಗದ ಸುಮಾರು 40 ಸಾವಿರಕ್ಕೂ ಹೆಚ್ಚು ಕೈಜೋಡಿಸಿ ಉಳಿದವರಿಗೆ ಮಾದರಿಯಾಗಿತ್ತು. ಹೀಗೆ ಪ್ರಾರಂಭವಾದ ಕಾರ್ಯ ಕೊನೆಗೆ ಕ್ಲೀನ್ ಅಪ್ ಆಸ್ಟ್ರೇಲಿಯಾ ಡೇ ಅನ್ನು ಆಚರಿಸಲು ಪ್ರಾರಂಭಿಸಲಾಗಿದೆ.
ಕ್ಲೀನ್ ಅಪ್ ಆಸ್ಟ್ರೇಲಿಯಾ ಡೇ ಯಲ್ಲಿ ಪಾಲ್ಗೊಳ್ಳುವವರಿಗೆ ಆಸ್ಟ್ರೇಲಿಯಾವನ್ನು ಸ್ವಚ್ಚಗೊಳಿಸುವ ಅಧಿಕಾರವನ್ನು ಮಾತ್ರ ನೀಡಲಾಗುತ್ತದೆ. ಎಲ್ಲಿ, ಹೇಗೆ ಎಂಬುದನ್ನು ಸ್ವಯಂ ಸೇವಕರೇ ನಿರ್ಧರಿಸಬೇಕಾಗಿದ್ದು,ಅಗತ್ಯ ಸಾಮಗ್ರಿಗಳನ್ನು ಮಾತ್ರ ನೀಡಲಾಗುತ್ತದೆ. ಇದು ವರ್ಷಂಪ್ರತಿ ಮಿಲಿಯನ್ ಸ್ವಯಂಸೇವಕ ತ್ಯಾಜ್ಯ ಯೋಧರನ್ನು ಆಕರ್ಷಿಸಿದೆ. ಏಕ ಬಳಕೆಯ ಪ್ಲಾಸ್ಟಿಕ್ನಿಂದ ಉಂಟಾಗುವ ಸಮಸ್ಯೆಗಳನ್ನು ಜನರೇ ಅರ್ಥ ಮಾಡಿಕೊಳ್ಳಬೇಕು ಎಂಬ ಉನ್ನತ ಧ್ಯೇಯವನ್ನು ಒಳಗೊಂಡಿದೆ.
ಆಸ್ಟ್ರೇಲಿಯಾದ ಮೂರನೇ ಒಂದರಷ್ಟು ಜನರು ನ್ಯೂ ಸೌತ್ ವೇಲ್ಸ್ನಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿ ಪ್ಲಾಸ್ಟಿಕ್ ಬಳಕೆ ಮೇಲೆ ನಿಯಂತ್ರಣ ಹೇರುವುದು ಬಹುತೇಕ ಸವಾಲಿನ ಕೆಲಸ. ಆದರೆ ಇಲ್ಲಿನ ಪರಿಸರ ಸಚಿವರಾದ ಜೇಮ್ಸ್ ಗ್ರಿಫಿನ್ ಅವರು ಈ ಸವಾಲನ್ನು ಸ್ವೀಕರಿಸಿದ್ದು, ಸಾಗರಗಳಲ್ಲಿರುವ ಪ್ಲಾಸ್ಟಿಕ್ ಪ್ರಮಾಣವು 2050ರ ವೇಳೆಗೆ ಮೀನಿನ ಪ್ರಮಾಣವನ್ನೇ ಮೀರಿಸುತ್ತದೆ. ಇದು ಭಯಾನಕ ಮುನ್ಸೂಚನೆಯಾಗಿದೆ.
ಹೀಗಾಗಿ ಈ ನಿಟ್ಟಿನಲ್ಲಿ ಈಗಲೇ ಮುಂಜಾಗ್ರತಾ ಕ್ರಮವಾಗಿ ಕ್ರಮ ಕೈಗೊಳ್ಳುವ ಮೂಲಕ ಭವಿಷ್ಯ ಸುಂದರವಾಗಿಸುವ ಅಭಿಲಾಷೆ ಹೊತ್ತಿದ್ದು, ಮುಂದಿನ 20 ವರ್ಷಗಳಲ್ಲಿ ಪರಿಸರಕ್ಕೆ ಸೇರಬಹುದಾದ 2.7 ಬಿಲಿಯನ್ ಪ್ಲಾಸ್ಟಿಕ್ ಉತ್ಪನ್ನಗಳಿಗೆ ನಿಷೇಧ ಹೇರುವುದಾಗಿ ಘೋಷಣೆ ಮಾಡಿದ್ದಾರೆ.
ನಮ್ಮ ದೇಶದಲ್ಲೂ ಕೂಡ ಪ್ಲಾಸ್ಟಿಕ್ ಬಳಕೆ ನಿಷೇಧದ ಬಗ್ಗೆ ಚರ್ಚೆ ಮಾಡುವ ಬದಲು ಪ್ರತಿಯೊಬ್ಬರೂ ಈ ವಿಚಾರದ ಕುರಿತು ಕೊಂಚ ಮಟ್ಟಿಗಾದರೂ ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸಿ ಎಲ್ಲೆಂದರಲ್ಲಿ ಚಲ್ಲಾಪಿಲ್ಲಿಯಾಗಿ ಹಾಕುವುದನ್ನು ನಿಲ್ಲಿಸುವ ಮೂಲಕ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಬಹುದು.