ಕಟೀಲು‌ ಯಕ್ಷಗಾನ ಸೇವೆ ಕಾಲಮಿತಿ ರದ್ದುಗೊಳಿಸಲು ಭಕ್ತಾಧಿಗಳ‌ ಆಗ್ರಹ : ದೇವಳಕ್ಕೆ ಪಾದಯಾತ್ರೆ ನಡೆಸಲು ನಿರ್ಧಾರ

ಮಂಗಳೂರು : ಯಕ್ಷಗಾನದ ಪಾರಂಪರಿಕ ಮೇಳವೆಂದೇ ಖ್ಯಾತವಾಗಿರುವ ಕಟೀಲು ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿಯ ಬಯಲಾಟ ಪ್ರದರ್ಶನವನ್ನು ಕಾಲಮಿತಿಗೆ ಒಳಪಡಿಸಿರುವ ಆಡಳಿತ ಮಂಡಳಿಯ ನಿರ್ಧಾರಕ್ಕೆ ಭಕ್ತಾದಿಗಳ ವಲಯದಿಂದ ತೀವ್ರ ಅಸಮಾಧಾನ ವ್ಯಕ್ತವಾಗಿದೆ.

ಯಕ್ಷಗಾನ ಪರಂಪರೆಯಂತೆ ಬೆಳಗ್ಗಿನವರೆಗೆ ನಡೆಯಬೇಕೆಂದು ಆಗ್ರಹಿಸಿ ಶ್ರೀ ಕಟೀಲು ಯಕ್ಷ ಸೇವಾ ಸಮನ್ವಯ ಸಮಿತಿಯ ಸದಸ್ಯರು ನ.6ರಂದು ಬಜಪೆ ಶ್ರೀ ಶಾರದಾ ಶಕ್ತಿ ಮಂಟಪದಿಂದ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ವರೆಗೆ `ಕಟೀಲಮ್ಮನೆಡೆಗೆ ಭಕ್ತರ ನಡೆ’ ಪಾದಯಾತ್ರೆಯನ್ನು ನಡೆಸಲು ನಿರ್ಧರಿಸಿದ್ದಾರೆ.

ದೇವಸ್ಥಾನದ ಮೇಳದವರು ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ರಾತ್ರಿ ಯಕ್ಷಗಾನ ಸೇವೆಯಾಟಗಳನ್ನು ಏಕಪಕ್ಷೀಯವಾಗಿ ದಿಢೀರಾಗಿ ಸಂಜೆ 4.30ರಿಂದ ರಾತ್ರಿ 10ರವರೆಗೆ ಕಾಲಮಿತಿಗೆ ಸೀಮಿತಗೊಳಿಸಿ ಮುಂದೆ ನಡೆಸುವುದಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದ ದೇವಳದ ಆತುರದ ನಿರ್ಧಾರ ಭಕ್ತಾದಿಗಳ ಮನಸ್ಸಿಗೆ ಆಘಾತ ಮಾಡಿದೆ ಎಂದು ತಿಳಿಸಿದ್ದಾರೆ.

ಕಟೀಲು ಮೇಳದವರ ಈ ಆಘಾತಕಾರಿ ನಿರ್ಧಾರದಿಂದ ನೊಂದ ಸಹಸ್ರಾರು ಭಕ್ತಾದಿಗಳು ನಮ್ಮ ಸಮಿತಿಯ ನೇತೃತ್ವದಲ್ಲಿ, ಯಕ್ಷಗಾನ ಪರಂಪರೆಯಂತೆ ಬೆಳಗ್ಗಿನವರೆಗೆ ನಡೆಯಲೇಬೇಕು ಎಂದು ಆಗ್ರಹಿಸಿ ನ 06ರಂದು ಬೆಳಿಗ್ಗೆ 8.30 ರಿಂದ ಬಜಪೆ ಶ್ರೀ ಶಾರದಾ ಶಕ್ತಿ ಮಂಟಪದಿಂದ ಕಟೀಲಮ್ಮನೆಡೆ ಭಕ್ತರ ನಡೆ ಪಾದಯಾತ್ರೆಯನ್ನು ನಡೆಸಲಿದ್ದೇವೆ. ಹಾಗೂ ಶ್ರೀದೇವಿಯಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಸಲ್ಲಿಸುವವರಿದ್ದೇವೆ. ಕಾರ್ಯಕ್ರಮದಲ್ಲಿ 8000 ಕ್ಕೂ ಅಧಿಕ ಮಂದಿ ಭಕ್ತಾದಿಗಳು ಭಾಗವಹಿಸಲಿದ್ದಾರೆ ಅಂದರು.

Leave A Reply

Your email address will not be published.