Health Tip : ಯಾವ ಸೊಪ್ಪಿಗೂ ಕಡಿಮೆ ಇಲ್ಲ ಈ ಹರಿವೆ ಸೊಪ್ಪು!!!
ಹರಿವೆ ಸೊಪ್ಪು ಪಲ್ಯ ಊಟಕ್ಕೆ ಎಷ್ಟು ರುಚಿಕರವೋ, ಹಾಗೆ ನಮ್ಮ ಆರೋಗ್ಯಕ್ಕೆ ಉಪಯೋಗಿಯಾದ ಸೊಪ್ಪು. ಇದನ್ನು ಸೇವಿಸುವುದರಿಂದ ನಮ್ಮ ದೇಹದಲ್ಲಿರುವ ಅನೇಕ ರೋಗಗಳು ವಾಸಿಯಾಗುತ್ತದೆ. ಹಾಗಾದರೆ ಇದನ್ನು ಸೇವಿಸುವುದರಿಂದ ಏನೆಲ್ಲಾ ಲಾಭಗಳಿವೆ ಎಂದು ತಿಳಿದುಕೊಳ್ಳೋಣ.
ಹರಿವೆ ಸೊಪ್ಪಿನಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ಕಬ್ಬಿಣ, ತಾಮ್ರ, ಹಾಗೂ ಅಗತ್ಯವಾದ ಜೀವಸತ್ವಗಳು, ಮೆಗ್ನೇಷಿಯಮ್, ಸತು ಮತ್ತು ಮ್ಯಾಂಗನೀಸ್ ಸಮೃದ್ಧವಾಗಿವೆ. ತಾಮ್ರ ಮತ್ತು ಮ್ಯಾಂಗನೀಸನ್ನು ದೇಹದಲ್ಲಿನ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಗಾಗಿ ಬಳಸಲಾಗುತ್ತದೆ. ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ತಾಮ್ರ ಅತ್ಯಗತ್ಯ. ಜೀರ್ಣಕ್ರಿಯೆ ಮತ್ತು ಮಾನವ ದೇಹದ ಬೆಳವಣಿಗೆಗೆ ಸತುವು ಅಗತ್ಯ. ಈ ಎಲ್ಲ ಅಂಶಗಳು ಈ ಸೊಪ್ಪಿನಲ್ಲಿದೆ. ಇದರಿಂದ ನಮ್ಮ ದೇಹಕ್ಕೆ ಹಲವಾರು ಉಪಯೋಗಳಿವೆ.
ಫೈಟೊನ್ಯೂಟ್ರಿಯೆಂಟ್ಸ್ ಮತ್ತು ಆಂಟಿ ಆಕ್ಸಿಡೆಂಟ್ಗಳ ಉಗ್ರಾಣವಾಗಿದ್ದು, ಇದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೂಕವನ್ನು ಕಡಿಮೆ ಮಾಡಲು ಬಯಸುವವರು ಹರಿವೆ ಸೊಪ್ಪಿನ ಪಲ್ಯ ತಿನ್ನುವುದು ಸೂಕ್ತ. ಹರಿವೆ ಸೊಪ್ಪನಲ್ಲಿ ಕರಗಬಲ್ಲ ಮತ್ತು ಕರಗದ ನಾರಿನಂಶವಿದೆ.
ಹರಿವೆ ಸೊಪ್ಪಿನಲ್ಲಿ ಕೊಬ್ಬು ಮತ್ತು ಕೊಲೆಸ್ಟ್ರಾಲ್ ಇಲ್ಲ. ರಕ್ತದಲ್ಲಿನ ಕೊಲೆಸ್ಟ್ರಾಲ್ ಕಡಿಮೆಗೊಳಿಸುವುದರಿಂದ ಹೃದ್ರೋಗವನ್ನು ನಿವಾರಿಸುತ್ತದೆ. ಹರಿವೆ ಸೊಪ್ಪಿನಲ್ಲಿ ಬಿ ಗುಂಪಿನ ಜೀವಸತ್ವಗಳು, ಫೋಲೇಟ್ಗಳು, ರಿಬೋಫ್ಲಾವಿನ್, ನಿಯಾಸಿನ್, ಥಯಾಮಿನ್ ಗಳಿದ್ದು ನವಜಾತ ಶಿಶುಗಳಲ್ಲಿನ ಜನ್ಮ
ದೋಷಗಳನ್ನು ತಡೆಗಟ್ಟಲು ಸಹಾಯ ಮಾಡುತ್ತವೆ.
ಕೂದಲು ಉದುರುವ ಸಮಸ್ಯೆಗೂ ಪರಿಹಾರ ನೀಡುತ್ತದೆ. ಹರಿವೆ ಸೊಪ್ಪಿನಲ್ಲಿ ಲೈಸಿನ್ ಎಂಬ ಅಮೈನೊ ಆಮ್ಲವಿದ್ದು, ಇದು ಶಕ್ತಿ ಉತ್ಪಾದನೆ ಮತ್ತು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಗೆ ಅಗತ್ಯ. ಕೂದಲಿನ ಬೆಳವಣಿಗೆ ಮತ್ತು ಚರ್ಮದ ಆರೋಗ್ಯವನ್ನು ಉತ್ತೇಜಿಸುತ್ತದೆ. ನಿಯಮಿತ ಹರಿವೆ ಸೊಪ್ಪಿನ ಸೇವನೆ ಜೀರ್ಣಕ್ರಿಯೆಗೆ ಪ್ರಯೋಜನವನ್ನು ನೀಡುತ್ತದೆ.
ಪೋಷಕಾಂಶಗಳ ಉಗ್ರಾಣ, ಹರಿವೆ ಸೊಪ್ಪು ಆರೋಗ್ಯದ ಮೇಲೆ ಇಷ್ಟೆಲ್ಲಾ ಪರಿಣಾಮ ಬೀರುವುದರಿಂದ ಚಳಿಗಾಲದಲ್ಲಿ ಈ ತರಕಾರಿಯನ್ನು ಆರಿಸಿ ಮತ್ತು ಅದರ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಿ