Tulsi vivah 2022 : ತುಳಸಿ ಮದುವೆ ಎಂದು ? ಪೂಜಾ ಮುಹೂರ್ತ, ಮಹತ್ವದ ಮಾಹಿತಿ ಇಲ್ಲಿದೆ!!!

ಕರ್ನಾಟಕ ಸಾಂಸ್ಕೃತಿಕ ಕಲೆ, ಸಾಹಿತ್ಯ, ಸಂಸ್ಕೃತಿಯ ಪಸರಿಸುವ ನೆಲೆಬೀಡು ಎಂದರೆ ತಪ್ಪಾಗದು. ಕರ್ನಾಟಕ ಹಬ್ಬದ ಆಚರಣೆಯಲ್ಲಿ ತನ್ನದೆ ಆದ ವೈಶಿಷ್ಟ್ಯ ಹೊಂದಿದೆ. ಹಿಂದೂ ಧರ್ಮದ ಪ್ರಕಾರ ಪ್ರತಿಯೊಂದು ಹಬ್ಬದ ಆಚರಣೆಯಲ್ಲಿ ಕೂಡ ಅದರದ್ದೇ ಆದ ಮಹತ್ವವಿದೆ. ಭಾರತದಲ್ಲಿ ಹಿಂದೂ, ಕ್ರೈಸ್ತ, ಜೈನ, ಮುಸಲ್ಮಾನ ಹೀಗೆ ನಾನಾ ಜಾತಿಯನ್ನು ಒಳಗೊಂಡಿದ್ದು, ವೈವಿಧ್ಯತೆಯಲ್ಲಿ ಏಕತೆ ಎಂಬ ಸಂದೇಶ ಸಾರುವ ಮೂಲಕ ತನ್ನತನವನ್ನು ಉಳಿಸಿಕೊಂಡಿದೆ.

 

ಇತ್ತೀಚೆಗಷ್ಟೇ ದಸರಾ ಹಬ್ಬದ ಕಳೆ ಮುಗಿದು, ದೀಪಾವಳಿಯ ರಂಗು ಮುಗಿದು, ವರ್ಷದ ಕೊನೆಗೆ ಕೇವಲ ಒಂದು ತಿಂಗಳುಗಳು ಬಾಕಿ ಉಳಿದಿದೆ. ಅದರಲ್ಲೂ ಕಾರ್ತಿಕ ಮಾಸ ಅದರದ್ದೇ ಆದ ವಿಶೇಷತೆಯನ್ನು ಹೊಂದಿದೆ.

ಶಿವನ ಆರಾಧನೆಗೆ ಮಹತ್ವವಾದ ಕಾಲವಾಗಿದೆ. ದೈವಿಕ ಕಾಲವಾಗಿದ್ದು, ವಿಶೇಷವಾಗಿ ಮಹಿಳೆಯರು ಈ ಸಮಯದಲ್ಲಿ ತುಳಸಿ ಪೂಜೆ, ವ್ರತಾಚರಣೆ ಮಾಡಿ ದೈವಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ವಾಡಿಕೆ.

ಹಿಂದೂ ಕ್ಯಾಲೆಂಡರ್ ಪ್ರಕಾರ, ಕಾರ್ತಿಕ ಮಾಸದಲ್ಲಿ ಬರುವ ಶುಕ್ಲ ಪಕ್ಷದ ದ್ವಾದಶಿಯಂದು ತುಳಸಿ ಮದುವೆಯನ್ನು ಪ್ರತಿ ವರ್ಷ ನೆರವೇರಿಸಲಾಗುತ್ತದೆ. ಈ ದಿನದಂದು ಉಪವಾಸ ಆಚರಿಸಿ ತುಳಸಿಯನ್ನು ಸಾಲಿಗ್ರಾಮ ದೇವರೊಂದಿಗೆ ವಿವಾಹ ಮಾಡಿಕೊಡಬೇಕೆಂಬ ನಂಬಿಕೆ ಇದೆ.

ಕಾರ್ತಿಕ ಮಾಸದಲ್ಲಿ ತುಳಸಿ ಮತ್ತು ಸಾಲಿಗ್ರಾಮ ದೇವರನ್ನು ಮದುವೆ ಮಾಡಿದರೆ ಭಕ್ತರಿಗೆ ಅವರ ಹಿಂದಿನ ಜನ್ಮದ ಎಲ್ಲಾ ಪಾಪಗಳು ನಾಶವಾಗುತ್ತವೆ ಎಂದು ನಂಬಿಕೆಯಿದ್ದು, ತುಳಸಿಯನ್ನು ವಿಷ್ಣುಪ್ರಿಯಾ ಎಂದು ಕೂಡ ಕರೆಯಲಾಗುತ್ತದೆ. ಕಾರ್ತಿಕ ಮಾಸದ ನವಮಿ, ದಶಮಿ ಮತ್ತು ಏಕಾದಶಿಯಂದು ಉಪವಾಸ ಮತ್ತು ಪೂಜೆಯ ಮೂಲಕ ತುಳಸಿ ವಿವಾಹವನ್ನು ಮಾಡಲಾಗುತ್ತದೆ. ಮರುದಿನ ಬ್ರಾಹ್ಮಣರಿಗೆ ತುಳಸಿ ಗಿಡವನ್ನು ದಾನ ಮಾಡುವುದು ಮಂಗಳಕರವೆಂದು ಪರಿಗಣಿಸಲಾಗಿದೆ. ಅಲ್ಲದೆ, ತುಳಸಿ ವಿವಾಹ ಮಾಡುವವರಿಗೆ ದಾಂಪತ್ಯ ಸುಖ ಸಿಗುತ್ತದೆ.

ಪಂಚಾಂಗದ ಪ್ರಕಾರ ಈ ವರ್ಷದ ಕಾರ್ತಿಕ ಶುಕ್ಲ ದ್ವಾದಶಿ ತಿಥಿಯು ನವೆಂಬರ್ 04 ಶುಕ್ರವಾರದಂದು ಸಂಜೆ 06.08 ಕ್ಕೆ ಪ್ರಾರಂಭವಾಗುತ್ತದೆ. ಹಾಗೂ ಮರುದಿನ 05 ನವೆಂಬರ್, ಶನಿವಾರ ಸಂಜೆ 05:06 ಕ್ಕೆ ಕೊನೆಗೊಳ್ಳುತ್ತದೆ. ಉದಯತಿಥಿಯ ಆಧಾರದ ಮೇಲೆ ನವೆಂಬರ್ 05 ರಂದು ತುಳಸಿ ವಿವಾಹವನ್ನು ಮಾಡಲಾಗಲಿದ್ದು, ಈ ದಿನದಂದು ಉಪವಾಸವನ್ನು ಆಚರಿಸಿ ತುಳಸಿ ವಿವಾಹವನ್ನು ಸಂಜೆ ಮಾಡಲಾಗುತ್ತದೆ.

ತುಳಸಿ ವಿವಾಹ 2022 ರ ಶುಭ ಮುಹೂರ್ತವು ನವೆಂಬರ್ 05 ರಂದು ಸಂಜೆ 05:35 ರಿಂದ 07:12 ರವರೆಗೆ ಇರುತ್ತದೆ. ಅಂದಿನಿಂದ ಸಂಜೆ 07:12 ರಿಂದ ರಾತ್ರಿ 08:50 ರವರೆಗೆ ಸಾಮಾನ್ಯ ಮುಹೂರ್ತವಿದೆ. ಈ ಸಮಯದಲ್ಲಿ ಪೂಜೆಗೆ ಅತ್ಯಂತ ಮಂಗಳಕರವಾಗಿದ್ದು, ತುಳಸಿ ವಿವಾಹವನ್ನು ಆಯೋಜಿಸಬಹುದಾಗಿದೆ.

ತುಳಸಿ ವಿವಾಹದ ದಿನ ರವಿ ಯೋಗ ಬರಲಿದೆ. ಆದರೆ , ಈ ದಿನ ರವಿ ಯೋಗವು ರಾತ್ರಿ 11:56 ಕ್ಕೆ ಪ್ರಾರಂಭವಾಗಿ ಮರುದಿನ ನವೆಂಬರ್ 06 ಭಾನುವಾರದಂದು ಬೆಳಿಗ್ಗೆ 06.37 ರವರೆಗೆ ಇರಲಿದೆ.

ತುಳಸಿ ವಿವಾಹ ಪೂಜಾ ವಿಧಿ ವಿಧಾನಗಳ ಬಗ್ಗೆ ತಿಳಿಯುವುದಾದರೆ:

ಈ ದಿನ ಮಹಿಳೆಯರು ಬೆಳಗ್ಗೆ ಎದ್ದು ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಬಳಿಕ , ಪೂಜಾ ಸ್ಥಳವನ್ನು ಚೆನ್ನಾಗಿ ಅಲಂಕರಿಸುತ್ತಾರೆ.ಶುಭ ಮುಹೂರ್ತದಲ್ಲಿ ಪೂಜೆ ಮಾಡಿ ಒಂದು ಕಂಬದಲ್ಲಿ ತುಳಸಿ ಗಿಡವನ್ನು ಮತ್ತು ಇನ್ನೊಂದು ಬದಿಯಲ್ಲಿ ಸಾಲಿಗ್ರಾಮವನ್ನು ಸ್ಥಾಪಿಸಲಾಗುತ್ತದೆ. ಅವುಗಳ ಪಕ್ಕದಲ್ಲಿ ನೀರು ತುಂಬಿದ ಹೂದಾನಿ ಇರಿಸಬೇಕು ಅದರ ಮೇಲೆ ಐದು ಮಾವಿನ ಎಲೆಗಳನ್ನು ಇರಿಸಬೇಕು.

ತುಳಸಿ ಕಟ್ಟೆಯಲ್ಲಿ ತುಳಸಿ ಗಿಡವನ್ನು ನೆಟ್ಟು, ಗಂಗಾಜಲದೊಂದಿಗೆ ತುಳಸಿ ಮತ್ತು ಸಾಲಿಗ್ರಾಮ ಸ್ನಾನ ಮಾಡಿ ಕಬ್ಬಿನಿಂದ ಮಂಟಪ ಮಾಡಬೇಕು.ಬಳಿಕ ತುಳಸಿಗೆ ಕೆಂಪು ಸೀರೆ ಅರ್ಪಿಸಬೇಕು. ಸೀರೆಯನ್ನು ಒಂದು ಪಾತ್ರೆಯಲ್ಲಿ ಸುತ್ತಿ, ಬಳೆಗಳನ್ನು ಅರ್ಪಿಸಿ ಮತ್ತು ಗಿಡವನ್ನು ವಧುವಿನಂತೆ ಸಿಂಗರಿಸಬೇಕು.

ಇದಾದ ನಂತರ ಸಾಲಿಗ್ರಾಮವನ್ನು ಕೈಯಲ್ಲಿ ಹಿಡಿದುಕೊಂಡು ತುಳಸಿಯನ್ನು ಏಳು ಬಾರಿ ಪ್ರದಕ್ಷಿಣೆ ಮಾಡಬೇಕು. ಇದರ ನಂತರ ತುಪ್ಪದ ದೀಪವನ್ನು ಬೆಳಗಿಸಿ ಆರತಿ ಮಾಡಬೇಕು. ತುಳಸಿ ವಿವಾಹ ಮುಗಿದ ನಂತರ ಎಲ್ಲರಿಗೂ ಪ್ರಸಾದ ವಿತರಣೆ ಮಾಡಬಹುದು.

Leave A Reply

Your email address will not be published.