ದುಡ್ಡು ಕೊಟ್ಟರೆ ನಿಮ್ಮನ್ನು ಜೀವಂತ ಸಮಾಧಿ ಮಾಡ್ತಾರಂತೆ | ಆದರೆ ಈ ಆಫರ್ ನ ಹಿಂದಿನ ಕಾರಣ ತಿಳಿದರೆ ನಿಜಕ್ಕೂ ದಂಗಾಗ್ತೀರಾ!!!
ಹುಟ್ಟು ಆಕಸ್ಮಿಕ ಆದರೆ, ಸಾವು ನಿಶ್ಚಿತ ಎಂಬ ಮಾತಿದ್ದರೂ ಕೂಡ ಸಾವು ಎಂದಾಗ ಎಲ್ಲರೂ ಭಯ ಪಡುವವರೆ… ಸಾವು ಹತ್ತಿರ ಬರುತ್ತಿದೆ ಅಂತ ತಿಳಿದಾಗ ಮುಕ್ಕೋಟಿ ದೇವರಲ್ಲಿ ಜೀವ ಬಿಕ್ಷೆಗೆ ಮೊರೆ ಇಡುತ್ತೇವೆ.
ಹೀಗಿರುವಾಗ ಜೀವಂತ ಸಮಾಧಿಯಾಗಲು ಒಪ್ಪವುದು ದೂರದ ಮಾತೇ ಸರಿ…ಆದರೆ, ರಷ್ಯಾದ ಒಂದು ಕಂಪನಿ 47 ಲಕ್ಷ ರೂಪಾಯಿ ಕೊಟ್ಟರೆ ಜೀವಂತ ಸಮಾಧಿ ಮಾಡುತ್ತದೆ ಎಂಬ ವಿಚಾರ ಅಚ್ಚರಿ ಮೂಡಿಸುತ್ತದೆ.
ಇದೇನಪ್ಪಾ ವಿಚಿತ್ರಾ ಎಂದು ನೀವು ಹುಬ್ಬೇರಿಸುವುದು ಖಚಿತ!!..ರಷ್ಯಾ ಕಂಪನಿಯ ಹೆಸರು ಪ್ರೆಕಾಟೆಡ್ ಅಕಾಡೆಮಿ ಇದು ತನ್ನ ಗ್ರಾಹಕರಿಗೆ ಜೀವಂತ ಸಮಾಧಿಯಾಗುವ ಆಫರ್ ನೀಡಿದ್ದು, ಬದುಕಿರುವಾಗಲೇ ತನ್ನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡು, ಅದನ್ನು ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಿದೆ. ಹಾಗಾಗಿ, ಗ್ರಾಹಕರು 3.5 ಮಿಲಿಯನ್ ರೂಬಲ್ಸ್ (ರಷ್ಯಾ ಕರೆನ್ಸಿ) ಪಾವತಿಸಬೇಕೆಂದು ಕಂಪನಿ ಹೇಳಿಕೊಂಡಿದೆ.
ಭಾರತೀಯ ಕರೆನ್ಸಿ ಪ್ರಕಾರ 47 ಲಕ್ಷ ರೂಪಾಯಿ ಎಂದು ಅಂದಾಜು ಮಾಡಲಾಗಿದೆ. ನಾವೇ ದುಡ್ಡು ಕೊಟ್ಟು ನಮ್ಮ ಅಂತ್ಯಕ್ರಿಯೆ ನಾವೇ ನೋಡಿಕೊಳ್ಳಬೇಕಾ?? ಇದೆಂಥಾ ಗ್ರಹಚಾರ.. ಎಂದು ನೀವು ಅಂದುಕೊಂಡರು ಕೂಡ ಅಂಥವರು ಕೂಡ ನಮ್ಮ ನಡುವೆ ಇದ್ದಾರೆ ಅಂದರೆ ನೀವು ನಂಬಲೇಬೇಕು.
ಪ್ರೆಕಾಟೆಡ್ ಅಕಾಡೆಮಿ ಕಂಪನಿಯ ಸಂಸ್ಥಾಪಕಿ ಯಾಕಟೆರಿನಾ ಪ್ರೀಬ್ರಾಜೆನ್ಸ್ಕಾಯಾ ಎಂದಾಗಿದ್ದು, ಈ ವಾರದ ಆರಂಭದಲ್ಲೇ ತಮ್ಮ ಇನ್ಸ್ಟಾಗ್ರಾಂನಲ್ಲಿ ಹೊಸ ಉದ್ಯಮವನ್ನು ಯಾಕಟೆರಿನಾ ಘೋಷಣೆ ಮಾಡಿದ್ದಾರೆ. ಅರೇ ಇದೇನಪ್ಪಾ!! ಅಯ್ಯೋ ಯಾರಾದರೂ ಇದನ್ನು ಬಯಸುತ್ತಾರಾ ಎಂದು ಅಚ್ಚರಿಯಿಂದ ಮೂಗು ಮುರಿಯಬಹುದು.
ಈ ಅನುಭವವು ತನ್ನ ಗ್ರಾಹಕರಿಗೆ ಹೊಸ ಪ್ರತಿಭೆಗಳು ಮತ್ತು ಅತೀಂದ್ರಿಯ ಸಾಮರ್ಥ್ಯಗಳನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ .ಇದರ ಜೊತೆಗೆ, ಭಯ ಮತ್ತು ಆತಂಕವನ್ನು ಮೆಟ್ಟಿ ನಿಲ್ಲುವ ವಿಶ್ವಾಸ ಅವರಲ್ಲಿ ಬರಲು ನೆರವಾಗುತ್ತದೆ ಎಂದು ಯಾಕಟೆರಿನಾ ಹೇಳಿದ್ದಾರೆ.
ಈ ವಿಚಿತ್ರ ಅನುಭವವನ್ನು ನಿಮಗಾಗಿ ಮತ್ತು ನಿಮ್ಮ ಸ್ವಂತ ಸಂತೋಷದ ಭವಿಷ್ಯಕ್ಕಾಗಿ ಹೋರಾಡುವ ನಿಜವಾದ ಸಂಕೇತ ಎಂದು ಇನ್ಸ್ಟಾಗ್ರಾಂನಲ್ಲಿ ಯಾಕಟೆರಿನಾ ಬಣ್ಣಿಸಿದ್ದಾರೆ.
ಇದಲ್ಲದೆ, ಈ ಪ್ರಕ್ರಿಯೆಯನ್ನು ಮಾನಸಿಕ ಚಿಕಿತ್ಸೆ (ಸೈಕಿಕ್ ಥೆರಪಿ) ಎಂದು ಕಂಪನಿ ಕರೆದುಕೊಂಡಿದ್ದು, ಭಯ ಮತ್ತು ಆತಂಕದಿಂದ ಹೊರಬರಲು ಇದು ಸಹಕಾರಿಯಾಗಲಿದೆ ಎಂದು ಯಾಕಟೆರಿನಾ ಹೇಳಿದ್ದಾರೆ.
ಇದೇನು ನಿಮಗೆ ಉಚಿತವಾಗಿ ದೊರೆಯುತ್ತದೆ ಎಂದು ಭಾವಿಸಿದ್ದರೆ, ಖಂಡಿತ ಇಲ್ಲ… ಈ ಅನುಭವ ಪಡೆಯಲು 47 ಲಕ್ಷ ರೂ. ಚಾರ್ಜ್ ಮಾಡಲಾಗುತ್ತದೆ. ಹಣ ಪಾವತಿಸಿ, ಆಫರ್ ಸ್ವೀಕಾರ ಮಾಡಿದರೆ, ಗ್ರಾಹಕನನ್ನು ಒಂದು ಗಂಟೆಗಳ ಕಾಲ ಶವದ ಪೆಟ್ಟಿಗೆಯಲ್ಲಿ ಇಟ್ಟು ಜೀವಂತ ಸಮಾಧಿ ಮಾಡುತ್ತಾರೆ. ಅಲ್ಲದೆ, ಎಲ್ಲ ರೀತಿಯ ವಿಧಿ ವಿಧಾನಗಳನ್ನು ಸಹ ಆಚರಿಸುತ್ತಾರೆ.
ಇಡೀ ಆಚರಣೆ ರಷ್ಯಾದ ಸೆಂಟ್ ಪೀಟರ್ಬರ್ಗ್ನಲ್ಲಿ ನಡೆಯಲಿದ್ದು, .ರಷ್ಯಾಕ್ಕೆ ಪ್ರಯಾಣಿಸಲು ಸಾಧ್ಯವಾಗದವರಿಗೆ ಅಥವಾ ಈ ಪ್ಯಾಕೇಜ್ ತುಂಬಾ ದುಬಾರಿಯಾಗಿದೆ ಎಂದು ಭಾವಿಸುವವರಿಗೆ, ಕಂಪನಿಯು ಅಗ್ಗದ ಆನ್‌ಲೈನ್ ಪ್ಯಾಕೇಜ್ ಆಫರ್ ಕೂಡ ನೀಡಿದೆ.
ಆನ್‌ಲೈನ್ ಪ್ಯಾಕೇಜ್‌ನ ಬೆಲೆ 12 ಲಕ್ಷ ರೂಪಾಯಿಯಾಗಿದ್ದು, ಈ ಪ್ಯಾಕೇಜ್ ಅಡಿಯಲ್ಲಿ ಒಬ್ಬ ವ್ಯಕ್ತಿಯು ಮೇಣದಬತ್ತಿಗಳು ಮತ್ತು ಅಂತ್ಯಕ್ರಿಯೆಯ ಹಾಡುಗಳೊಂದಿಗೆ ತಮ್ಮ ಸ್ವಂತ ಅಂತ್ಯಕ್ರಿಯೆಯನ್ನು ಅನುಭವವನ್ನು ಆನ್‌ಲೈನ್ ಮೂಲಕ ಪಡೆಯಬಹುದು ಎನ್ನಲಾಗುತ್ತಿದೆ .
ಆದರೆ, ಭಯ ಮತ್ತು ಆತಂಕವನ್ನು ಸಂಪೂರ್ಣ ತೊಡೆದುಹಾಕಲು ಮತ್ತು ಜೀವನವನ್ನು ಉತ್ಸಾಹದಿಂದ ನಡೆಸಲು ಹಾಗೂ ಹೊಸ ಇಚ್ಛೆಯನ್ನು ಕಂಡುಕೊಳ್ಳಲು ಬಯಸುವವರು ಉತ್ತಮ ಫಲಿತಾಂಶಗಳಿಗಾಗಿ ‘ಪೂರ್ಣ ಪ್ರಮಾಣದ ಸಮಾಧಿ’ ವಿಧಾನವನ್ನು ಪ್ರಿಕೇಟೆಡ್ ಅಕಾಡೆಮಿ ಶಿಫಾರಸು ಮಾಡುತ್ತದೆ.
ಸಮಾಧಿ ವಿಧಾನವು ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಕಂಪನಿಯ ಸಂಸ್ಥಾಪಕಿ ಯಕಟೆರಿನಾ ಪ್ರೀಬ್ರಾಜೆನ್ಸ್ಕಾಯಾ ಭರವಸೆ ನೀಡಿದ್ದು, ತಮ್ಮ ಗ್ರಾಹಕರ ಸುರಕ್ಷತೆಯೇ ಸಂಸ್ಥೆಗೆ ಮೊದಲ ಆದ್ಯತೆಯಾಗಿದೆ ಎಂದು ಕೂಡ ಹೇಳಿಕೊಂಡಿದ್ದಾರೆ.
ನಿಮಗೂ ಈ ಅನುಭವ ಪಡೆಯಬೇಕು ಎನಿಸಿದರೆ ದುಬಾರಿ ಮೊತ್ತ ತೆತ್ತು ಜೀವನದ ಕೊನೆಯ ಕ್ಷಣಗಳ ಅನುಭವ ಪಡೆಯಬಹುದು .