ಹೂವಿನ ಅಂದಕ್ಕೆ ಮಾರು ಹೋದ ಪುಟಾಣಿ ಕಪ್ಪೆ !!! ವೀಡಿಯೋ ವೈರಲ್!!

ಹೂವು ಎಲ್ಲರನ್ನು ಗಮನ ಸೆಳೆಯುವಲ್ಲಿ ಎತ್ತಿದ ಕೈ. ಹೆಣ್ಣಿಗೂ ಹೂವಿಗೂ ಅನುರಾಗ ಸಂಬಂಧ ಅದಲ್ಲದೆ ಹೂಗಳ ಚೆಂದಕ್ಕೆ ಹೂಗಳೇ ಸಾಟಿ..ಹೂಗಳನ್ನು ಹೆಣ್ಣಿಗೆ ಹೆಣ್ಣನ್ನೂ ಹೂವಿಗೆ ಹೋಲಿಸಿ ಹಲವರು ದೊಡ್ಡ ದೊಡ್ಡ ಕವಿತೆಗಳನ್ನೇ ಬರೆದಿದ್ದಾರೆ. ಹೂವುಗಳ ಸೌಂದರ್ಯಕ್ಕೆ ಮರುಳಾಗಿ ಚಿಟ್ಟೆ, ದುಂಬಿಗಳು ಹೂವಿಂದ ಹೂವಿಗೆ ಹಾರುತ್ತಾ ಸೌಂದರ್ಯ ಸವಿದರೆ, ಜೀರುಂಡೆಗಳು ಹೂವೊಳಗೆ ಮಲಗಿ ಅವುಗಳ ಮಕರಂದ ಹೀರಿ ಅಲ್ಲೇ ನಿದ್ದೆಗೆ ಜಾರುವುದುಂಟು ಹಾಗೆ ಸಾವನ್ನು ಕಾಣುವುದುಂಟು. ಅಂತಹ ಸಮ್ಮೋಹನ ಶಕ್ತಿ ಹೂವಿಗಿದೆ.

 

ಆದ್ರೆ ಹೂವನ್ನು ಒಂದು ಮೂಖ ಜೀವಿಯೊಂದು ಆಕರ್ಷಿಸಿರುವ ದೃಶ್ಯ ನೋಡಿರಲು ಸಾಧ್ಯ ಇಲ್ಲ. ಹೌದು ಕಪ್ಪೆಗಳು ಹೂವನ್ನು ಬಾಚಿ ತಬ್ಬಿಕೊಂಡ ದೃಶ್ಯ ವೈರಲ್ ಆಗಿದೆ.

ಹಲವು ಎಸಳನ್ನು ಹೊಂದಿರುವ ಡೇಲಿಯಾ ಹೂವು ನೋಡಲು ಭಾರೀ ಸೊಗಸು. ಕೆಂಪು, ಕಡುಗೆಂಪು, ನೀಲಿ, ನೆರಳೆ, ಹಳದಿ ಕೇಸರಿ, ಹಳದಿ ಹೀಗೆ ಹಲವು ಬಣ್ಣಗಳಲ್ಲಿ ಲಭ್ಯವಿರುವ ಈ ಡೇಲಿಯಾ ಹೂವನ್ನು ಇಷ್ಟಪಡದವರಿಲ್ಲ. ಹಲವು ಬಣ್ಣಗಳಲ್ಲಿ ಕಾಣಸಿಗುವ ಈ ಡೇಲಿಯಾ ಹೂವುಗಳು ಇಡೀ ಹೂದೋಟವನ್ನು ಕಲರ್‌ಫುಲ್ ಆಗಿಸುವುದು. ಹಾಗೆಯೇ ಇಲ್ಲೊಂದು ಕಡೆ ಪುಟಾಣಿ ಕಪ್ಪೆಗಳು ಕೂಡ ಈ ಹೂವಿಗೆ ಮನಸೋತು ಅಲ್ಲೇ ವಾಸಸ್ಥಾನ ಮಾಡಿಕೊಂಡಿವೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://www.instagram.com/reel/CjEM8G9J0bY/?utm_source=ig_web_copy_link

ಈ ವಿಡಿಯೋವನ್ನು ಅಮೆರಿಕಾದ ವಾಷಿಂಗ್ಟನ್ ನಗರದ ಸನೋಹೋಂಶ್ ಎಂಬ ನಗರದಲ್ಲಿರುವ ಹೂದೋಟವೊಂದರಿಂದ ಸೆರೆ ಹಿಡಿಯಲಾಗಿದೆ. ಈ ವಿಡಿಯೋದಲ್ಲಿ ಕಾಣಿಸುವ ಡೇಲಿಯಾ ಹೂವುಗಳು ಬೆರ್ರಿ ಬಾಲ್ ಡೇಲಿಯಾ ಎಂದು ಕರೆಯಲ್ಪಡುವ ಹೂವುಗಳಾಗಿದ್ದು, ಇದು Asteraceae ಎಂಬ ಕುಟುಂಬಕ್ಕೆ ಸೇರಿದ್ದಾಗಿದೆ. ಈ ಡೇಲಿಯಾಗಳು ಕೇಂದ್ರ ಹಾಗೂ ದಕ್ಷಿಣ ಅಮೆರಿಕಾ ಭಾಗದಲ್ಲಿ ಹೆಚ್ಚಾಗಿ ಕಾಣ ಸಿಗುತ್ತವೆ. ಅಲ್ಲದೇ ಮೆಕ್ಸಿಕೋದಲ್ಲೂ ಇವು ಹೆಚ್ಚಾಗಿ ಲಭ್ಯವಿರುತ್ತವೆ. ಈ ಸಸ್ಯಗಳು ಎತ್ತರದ ಪ್ರದೇಶಗಳಲ್ಲಿ ಉತ್ತಮವಾಗಿ ಬೆಳೆಯುತ್ತವೆ. ಅಲ್ಲದೇ ಅವು ಔಷಧೀಯ ಗುಣಗಳನ್ನು ಹೊಂದಿವೆ ಎಂದು ತಿಳಿದುಬಂದಿದ್ದು, ಇದನ್ನು 1963 ರಲ್ಲಿ ಮೆಕ್ಸಿಕೋದ ರಾಷ್ಟ್ರೀಯ ಹೂವು ಎಂದು ಘೋಷಿಸಲಾಗಿದೆ. ಬೆರ್ರಿ ಬಾಲ್ ಡೇಲಿಯಾ ಉದ್ದವಾದ ಎಸಳುಗಳನ್ನು ಹೊಂದಿದ್ದು, ಸರಿಸುಮಾರು 4 ಇಂಚುಗಳಷ್ಟು (10 cm) ಅಗಲಕ್ಕೆ ಬೆಳೆಯಬಹುದು.

snohomishlavenderfarm ಎಂಬ ಇನ್ಸ್ಟಾಗ್ರಾಮ್ ಪೇಜ್‌ನಿಂದ ಈ ವಿಡಿಯೋ ಅಪ್‌ಲೋಡ್ ಆಗಿದ್ದು, ಏಳು ಮಿಲಿಯನ್‌ಗೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. ಹೂತೋಟವೊಂದರ ದೃಶ್ಯ ಇದಾಗಿದ್ದು, ಬಣ್ಣ ಬಣ್ಣದ ಹಲವು ಹೂವುಗಳು ಈ ತೋಟದಲ್ಲಿ ಕಾಣಿಸುತ್ತಿವೆ. ಇಲ್ಲಿರುವ ಗುಲಾಬಿ ಬಣ್ಣದ ಡೇಲಿಯಾ ಹೂಗಳ ಒಳಗೆ ಎಸಳುಗಳ ಮಧ್ಯದಲ್ಲಿ ಪುಟಾಣಿ ಕಪ್ಪೆಗಳು ಆಶ್ರಯ ಪಡೆದಿದ್ದು, ಗಾಳಿಗೆ ಹೂಗಳು ಅತ್ತಿತ್ತ ತೊಯ್ದಾಡುತ್ತಿದ್ದರೆ, ಇವುಗಳ ಒಳಗಿರುವ ಕಪ್ಪೆಗಳು ಹೂವಿನ ತೂಗುಯ್ಯಾಲೆಯಲ್ಲಿ ಸುಖವಾಗಿ ತೇಲಾಡುತ್ತಿವೆ.

ಈ ವಿಡಿಯೋ ನೋಡಿದ ಅನೇಕರು ಈ ಎಸಳುಗಳ ನಡುವೆ ಈ ಪುಟಾಣಿ ಕಪ್ಪೆಗಳು ಹೇಗೆ ಸೇರಿಕೊಂಡವು ಎಂದು ಪ್ರಶ್ನಿಸಿದ್ದಾರೆ. ಈ ದೃಶ್ಯ ನೋಡಲು ಮುದ್ದಾಗಿವೆ ಎಂದು ಖುಷಿಯಾಗಿ ಕೆಲವು ವೀಕ್ಷಕರು ಕಾಮೆಂಟ್ ಮಾಡಿದ್ದಾರೆ

Leave A Reply

Your email address will not be published.