84 ವರ್ಷಗಳ ಬಳಿಕ ಮತ್ತೆ ಗ್ರಂಥಾಲಯದತ್ತ ಮುಖ ಮಾಡಿದ ಪುಸ್ತಕ!ಅಷ್ಟಕ್ಕೂ ಆ ಪುಸ್ತಕದಲ್ಲಿ ಏನಿತ್ತು?
ನಾವು ಗ್ರಂಥಾಲಯದಿಂದ ಪುಸ್ತಕವನ್ನು ತೆಗೆದುಕೊಂಡು ಅದನ್ನು ಮತ್ತೆ ಹಿಂದಿರುಗಿಸುವಾಗ ಕೆಲವೊಮ್ಮೆ ತಡವಾಗುತ್ತದೆ. ಕೇವಲ ಪುಸ್ತಕ ಮಾತ್ರವಲ್ಲ ಯಾವುದೇ ಒಬ್ಬ ಮನುಷ್ಯನು ವಸ್ತುವಾಗಿರಲಿ, ಹಣವಾಗಿರಲಿ ತೆಗೆದುಕೊಂಡ ವೇಗದಲ್ಲೆ ಹಿಂದಿರುಗಿಸುವುದಕ್ಕಿಂತಲೂ ನಿರ್ಲಕ್ಷಿಸುವುದೇ ಹೆಚ್ಚು.
ಇಲ್ಲೊಬ್ಬರು ಗ್ರಂಥಾಲಯದಿಂದ ಪಡೆದ ಪುಸ್ತಕವನ್ನು ಬರೋಬ್ಬರಿ 84 ವರ್ಷಗಳ ಬಳಿಕ ಹಿಂದಿರುಗಿಸಿದ್ದಾರೆ. ಅರೇ! 84 ವರ್ಷಗಳ ಕಾಲ ಯಾಕೆ ಪುಸ್ತಕವನ್ನು ಅವರ ಬಳಿಯೆ ಇಟ್ಟುಕೊಂಡಿದ್ದರು. ಅಷ್ಟಕ್ಕೂ ಆ ಪುಸ್ತಕದಲ್ಲಿ ಏನಿತ್ತು?, ಕೇಳಲು ಅಚ್ಚರಿ ಎನಿಸಿದರೂ ಇದು ನಿಜ.
1938 ರಲ್ಲಿ ಲೇಖಕ ರಿಚರ್ಡ್ ಜೆಫರೀಸ್ ಅವರ ʼರೆಡ್ ಡೀರ್ʼ ಎನ್ನುವ ಪುಸ್ತಕವನ್ನು ಅರ್ಲ್ಸ್‌ಡನ್ ಲೈಬ್ರರಿಯಿಂದ ಕ್ಯಾಪ್ಟನ್ ವಿಲಿಯಂ ಹ್ಯಾರಿಸನ್ ಪಡೆದುಕೊಂಡಿದ್ದರು. ಆದರೆ ಹ್ಯಾರಿಸನ್ 1957 ರಲ್ಲಿ ನಿಧನರಾದರು. ಆ ಬಳಿಕ ಅವರ ವಸ್ತುಗಳೊಂದಿಗೆ ಕಪಾಟಿನಲ್ಲಿ ಈ ಪುಸ್ತಕವೂ ಯಾರಿಗೂ ಕಾಣದ ಹಾಗೆ ಉಳಿದುಹೋಗಿತ್ತು.
ವಿಲಿಯಂ ಹ್ಯಾರಿಸನ್ ಅವರ ಮೊಮ್ಮಗನಾದ ಪ್ಯಾಡಿ ರಿಯೊರ್ಡಾನ್ ಇತ್ತೀಚೆಗೆ ಅಮ್ಮನ ಮನೆಯನ್ನು ಸ್ವಚ್ಛ ಮಾಡುತ್ತಿರುವಾಗ ಹೇಗೊ ಅಡಗಿ ಕೂತ ತಾತ ತಂದ ʼರೆಡ್ ಡೀರ್ʼ ಪುಸ್ತಕ ಕಣ್ಣಿಗೆ ಬಿದ್ದಿದೆ. ತೆರೆದು ನೋಡಿದಾಗ ಅದೇ ವರ್ಷದ ಅಂದರೆ 1938 ರ ಅಕ್ಟೋಬರ್ 11 ರೊಳಗೆ ಪುಸ್ತಕ ಹಿಂತಿರುಗಿಸಬೇಕೆಂದು ಬರೆಯಲಾಗಿತ್ತು.
ʼರೆಡ್ ಡೀರ್ʼ ಪುಸ್ತಕವನ್ನು ಪ್ಯಾಡಿ ರಿಯೊರ್ಡಾನ್ ಅರ್ಲ್ಸ್‌ಡನ್ ಲೈಬ್ರರಿಗೆ ಹೋಗಿ ವಾಪಸ್ ಕೊಟ್ಟಿದ್ದಾರೆ. ಇದರೊಂದಿಗೆ ಲೈಬ್ರರಿಗೆ ದೇಣಿಗೆಯನ್ನು ನೀಡಿದ್ದಾರೆ. ಈ ದೇಣಿಗೆಯಲ್ಲಿ ತಾತ ತೆಗೆದುಕೊಂಡು ಹೋದಂದಿನಿಂದ ಮೊಮ್ಮಗ ಹಿಂದಿರುಗಿಸುವವರೆಗೂ ಪುಸ್ತಕಕ್ಕೆ ದಂಡ ಸೇರಿದೆ. ಪುಸ್ತಕ ವಾಪಸ್ ಕೊಟ್ಟ ಬಳಿಕ ಅರ್ಲ್ಸ್‌ಡನ್ ಲೈಬ್ರರಿ ಈ ಘಟನೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.