15 ಕೋಟಿ ರೂ.ನಗದು ವಶಪಡಿಸಿಕೊಂಡ ಪೊಲೀಸರು : ಇಷ್ಟೊಂದು ಮೊತ್ತ ಈ ಕಾರಣಕ್ಕೆ ಸಾಗಾಟ !

ಹೈದರಾಬಾದ್ (ತೆಲಂಗಾಣ): ಶಾಸಕರ ಖರೀದಿಗೆಂದು ತರಲಾಗಿದ್ದೆನ್ನಲಾದ 15 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿರುವ ಹೈದರಾಬಾದ್ ಪೊಲೀಸರು, ಈ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ.
ತೆಲಂಗಾಣದ ಮುನಗೋಡು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದ್ದು, ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಪಕ್ಷದ ನಾಲ್ವರು ಶಾಸಕರ ಕುದುರೆ ವ್ಯಾಪಾರ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಹೈದರಾಬಾದ್‌ನ ಹೊರವಲಯದ ಫಾರ್ಮ್‌ಹೌಸ್‌ನಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರು ದೆಹಲಿ, ತಿರುಪತಿ ಮತ್ತು ಹೈದರಾಬಾದ್ ಮೂಲದ ಏಜೆಂಟ್ ಗಳೆಂದು ಹೇಳಲಾಗಿದೆ.
ಅಚ್ಚಂಪೇಟೆ ಶಾಸಕ ಗುವ್ವಾಲ ಬಾಲರಾಜು, ಕೊಲ್ಲಾಪುರ ಶಾಸಕ ಬೀರಂ ಹರ್ಷವರ್ಧನ್ ರೆಡ್ಡಿ, ಪಿಣಪಾಕ ಶಾಸಕ ರೇಗಾ ಕಾಂತರಾವ್ ಹಾಗೂ ತಾಂಡೂರು ಶಾಸಕ ಪೈಲಟ್ ರೋಹಿತ್ ರೆಡ್ಡಿ ಅವರನ್ನು ಪಕ್ಷಾಂತರ ಮಾಡುವಂತೆ ದೆಹಲಿಯ ಜನರು ಪ್ರಚೋದಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.