‘ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್ ‘ – ನಿಜವಾಯ್ತಾ ನಿರೀಕ್ಷೆಗೂ ಮೀರಿದ ಕಾರ್ಣಿಕ ?
ರಾಜ್ಯದಲ್ಲಿನ ವರ್ಷಂಪ್ರತಿಯ ಕಾರ್ಣಿಕವೊಂದು ನಿರೀಕ್ಷೆಯ ಎಲ್ಲೆಯನ್ನು ಮೀರಿ ನಿಜವಾಯಿತಾ? ಎಂಬ ಪ್ರಶ್ನೆ ಮೂಡುವಂತೆ ಜಾಗತಿಕ ವಿದ್ಯಮಾನವೊಂದು ನಡೆದಿದೆ.
ಈ ವಿಚಾರದ ಕುರಿತಾದ ಚರ್ಚೆಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು, ಕುತೂಹಲದ ಜೊತೆಗೆ , ಭವಿಷ್ಯವಾಣಿಯ ಬಗ್ಗೆ ಮಾತುಕತೆಗಳು ಅಲ್ಲಲ್ಲಿ ನಡೆಯುತ್ತಿವೆ.
ದೈವಿಕ ಶಕ್ತಿಯ ಜೊತೆಗೆ ಅಲ್ಲಿನ ಆಚರಣೆಯ ಮೂಲಕ ಖ್ಯಾತಿ ಪಡೆದಿರುವ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದೇವರಗುಡ್ಡ ಕಾರ್ಣಿಕೋತ್ಸವ ರಾಜ್ಯದಲ್ಲೇ ವಿಶೇಷ ಸ್ಥಾನ ಪಡೆದಿದೆ. ದೇವರಗುಡ್ಡದ ಕಾರ್ಣಿಕ ನುಡಿಯುವ ಗೊರವಪ್ಪ ನಾಗಪ್ಪ ಉರ್ಮಿ 20 ಅಡಿ ಬಿಲ್ಲನ್ನೇರಿ ಪ್ರತಿವರ್ಷವೂ ಕಾರ್ಣಿಕ (ಭವಿಷ್ಯ) ನುಡಿಯುವುದು ವಾಡಿಕೆ.
ಅವರು ನುಡಿಯುವ ಭವಿಷ್ಯವಾಣಿ ಹುಸಿಯಾಗುವುದಿಲ್ಲವೆಂಬುದು ಹೆಚ್ಚಿನವರ ನಂಬಿಕೆಯಾಗಿದೆ. ಇಷ್ಟೇ ಅಲ್ಲದೆ, ಈ ಬಾರಿ ನಿರೀಕ್ಷೆಗೂ ಮೀರಿದ ಕಾರ್ಣಿಕ ನಿಜವಾದ ವಿದ್ಯಮಾನವೊಂದು ಇತ್ತೀಚೆಗೆ ನಡೆದಿದೆ.
ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್’ ಎಂದ ಭವಿಷ್ಯ ನಿಜವಾಗಿದ್ದು, ಜನರಲ್ಲಿ ವಿಶ್ವಾಸದ ಜೊತೆಗೆ ನಿಗೂಢತೆಗೆ ನಿಲುಕದ ಶಕ್ತಿ ಎಂಬ ದೈವಿಕ ಭಾವನೆ ಮೂಡಿಸಿದೆ.
ಈ ವರ್ಷದ ದಸರಾ ಹಬ್ಬದ ಸಮಯದಲ್ಲಿ ಈ ಮಾಲತೇಶ ದೇವರ ಕಾರ್ಣಿಕೋತ್ಸವ ನಡೆದಿದ್ದು, ಕಾರ್ಣಿಕ ನುಡಿಯುವ ಗೊರವಪ್ಪ ನಾಗಪ್ಪ ಅವರು ನುಡಿದ ಕಾರ್ಣಿಕ ‘ಆಕಾಶದ ಗುಡ್ಡಕ್ಕಲೆ ಶಿಶು ಏರಿತಲೆ ಪರಾಕ್’ ಎಂದಿದ್ದಾರೆ. ಇಷ್ಟು ಹೇಳುತ್ತಲೇ ಬಿಲ್ಲಿನಿಂದ ಧುಮುಕಿದ ಗೊರವಪ್ಪನನ್ನು ಭಕ್ತರು ಕೆಳಗೆ ಬೀಳದಂತೆ ಹಿಡಿದಿದ್ದಾರೆ.
‘ಸಣ್ಣಸಣ್ಣ ರೈತರಿಗೂ ಪ್ರಯೋಜನವಾಗಲಿದ್ದು, ಯುವ ರಾಜಕಾರಣಿಗಳಿಗೆ ಹೆಚ್ಚಿನ ಅವಕಾಶ ದೊರೆಯಲಿದೆ ಅಲ್ಲದೆ, ಯುವಕನಿಗೆ ರಾಜ್ಯದ ಮುಖ್ಯಮಂತ್ರಿ ಸ್ಥಾನ ದೊರೆಯಲಿದೆ’ ಎಂದು ವರ್ಷದ ಭವಿಷ್ಯವಾಣಿ ಎಂದೇ ನಂಬಲಾಗುವ ಈ ಕಾರ್ಣಿಕದ ಅರ್ಥವನ್ನು ದೇವಸ್ಥಾನದ ಪ್ರಧಾನ ಅರ್ಚಕ ಮಾಲತೇಶ ಭಟ್ ವಿಶ್ಲೇಷಿಸಿದ್ದಾರೆ.
ಹೀಗಾಗಿ ರಾಜ್ಯದಲ್ಲಿ ಯಾರು ಯುವ ನಾಯಕರು ರಾಜಕೀಯವಾಗಿ ಅತ್ಯುನ್ನತ ಸ್ಥಾನ ತಲುಪುತ್ತಾರೆ ಎಂಬ ಕುತೂಹಲ ಕೆರಳಿಸಿ ಅದರ ಕುರಿತಾದ ಚರ್ಚೆಗಳು ನಡೆಯುತ್ತಿದ್ದವು.
ರಾಜ್ಯದಲ್ಲಂತೂ ಮುಖ್ಯಮಂತ್ರಿ ಬದಲಾವಣೆಯಾಗಿ ಯುವ ನಾಯಕರೊಬ್ಬರು ಸಿಎಂ ಸ್ಥಾನವನ್ನು ಅಲಂಕರಿಸಬಹುದೇನೋ ಎಂಬ ಊಹೆಯೂ ಮೂಡಿ ರಾಜಕೀಯ ಲೆಕ್ಕಾಚಾರಗಳು ಬಿರುಸಾಗಿ ನಡೆಯುತ್ತಿತ್ತು.
ಅ. 4ರಂದು ಈ ಕಾರ್ಣಿಕ ನುಡಿಯಲಾಗಿದ್ದು, ಅದಾಗಿ ಮೂರು ವಾರ ಕಳೆಯುವಷ್ಟರಲ್ಲಿ ಬ್ರಿಟನ್ನ ಪ್ರಧಾನಿಯಾಗಿ ಭಾರತೀಯ ಮೂಲದ, ಅದರಲ್ಲೂ ಕರ್ನಾಟಕದ ಇನ್ಫೊಸಿಸ್ನ ನಾರಾಯಣಮೂರ್ತಿ-ಸುಧಾಮೂರ್ತಿ ದಂಪತಿಯ ಅಳಿಯ ರಿಷಿ ಸುನಕ್ ಆಯ್ಕೆ ಆಗಿದ್ದಾರೆ.
ಕಾರ್ಣಿಕದ ಪ್ರಕಾರ ಯುವಕನಿಗೆ ರಾಜಕೀಯದಲ್ಲಿ ಅತ್ಯುನ್ನತ ಸ್ಥಾನ ಸಿಗಲಿದೆ ಎನ್ನುವ ಮಾತು ನಿಜವಾಗಿದ್ದು, ಅದರಂತೆ ಬ್ರಿಟನ್ ಪ್ರಧಾನಿಯಾಗಿ ಆಯ್ಕೆ ಆಗಿರುವ 42 ರ ಹರೆಯದ ರಿಷಿ ಸುನಕ್ ಬ್ರಿಟನ್ನಲ್ಲಿ ಪ್ರಧಾನಿಯಾಗಿ ಪಟ್ಟಕ್ಕೇರಿದವರ ಪೈಕಿ ಅತಿ ಕಿರಿಯವರು, ಮಾತ್ರವಲ್ಲ ಏಷ್ಯಾ ಮೂಲದ ಮೊದಲಿಗರಾಗಿದ್ದಾರೆ.
ಈ ಅಂಶವನ್ನು ಪರಿಗಣಿಸಿ ಜನರು, ಕಾರ್ಣಿಕದ ಭವಿಷ್ಯ ನಿರೀಕ್ಷೆ ಮೀರಿ ನಿಜವಾಗಿದ್ದು, ಜನರು ಭವಿಷ್ಯ ನುಡಿದ ಇನ್ನುಳಿದ ವಿಚಾರಗಳು ಆದಷ್ಟು ಬೇಗ ಜರುಗಲಿದೆ ಎಂಬ ನಂಬಿಕೆಯಲ್ಲಿದ್ದಾರೆ.