EPF ಗೆ ಸಂಬಂಧಿಸಿದ ಸಮಸ್ಯೆಗೆ ಆನ್ಲೈನ್ ಮೂಲಕ ದೂರು ನೀಡುವುದು ಹೇಗೆ?

ಹಣ ಹೂಡಿಕೆ ಮತ್ತು ಉಳಿತಾಯ ಭವಿಷ್ಯದ ದೃಷ್ಟಿಯಿಂದ ಉತ್ತಮ ಹವ್ಯಾಸವಾಗಿದ್ದು, ಯಾವುದೇ ರೀತಿಯ ಮುಗ್ಗಟ್ಟು ಎದುರಾದರೂ ಉಳಿತಾಯ ಮಾಡುವ ಪ್ರಕ್ರಿಯೆ ತೊಂದರೆ ಇಲ್ಲದೇ ಪರಿಸ್ಥಿತಿಯನ್ನು ನಿಭಾಯಿಸಲು ಆಪತ್ಕಾಲದಲ್ಲಿ ಆರ್ಥಿಕವಾಗಿ ನೆರವಾಗುತ್ತವೆ.

 

ಈ ಉಳಿತಾಯಕ್ಕೆ ಪ್ರಾವಿಡೆಂಟ್ ಫಂಡ್ ಸಹಕಾರಿಯಾಗಿದ್ದು, ಪಿಎಫ್‌ನಲ್ಲಿ ಹೂಡಿಕೆ ಮಾಡುವ ಮೂಲಕ ಬಡ್ಡಿದರವನ್ನು ಕೂಡಾ ಪಡೆಯಲು ಸಾಧ್ಯವಾಗುತ್ತದೆ.

ಆದರೆ ಪಿಎಫ್‌ ಸಂಬಂಧಿತ ಸಮಸ್ಯೆ ಉಂಟಾದಾಗ ಹೇಗೆ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು ಎಂಬ ಪ್ರಶ್ನೆ ಹಲವರನ್ನು ಕಾಡದಿರದು.

ಇಪಿಎಫ್‌ಒ ಅಧಿಕೃತ ವೆಬ್‌ಸೈಟ್ ಮೂಲಕ ಪಿಎಫ್ ಸಂಬಂಧಿತ ಕಾರ್ಯವನ್ನು ಮಾಡಲು ಸಾಧ್ಯವಾಗುವುದರ ಜೊತೆಗೆ ದೂರನ್ನು ನೀಡಲು ಸಾಧ್ಯವಾಗುತ್ತದೆ.

ಪಿಎಫ್ ಸಂಬಂಧಿತ ಯಾವುದೇ ಸಮಸ್ಯೆ ಉಂಟಾದಾಗ ಸಾಮಾನ್ಯವಾಗಿ ಪಿಎಫ್‌ನ ಕಾರ್ಯಗಳನ್ನು ಮಾಡುವ ಸೈಬರ್‌ಗೆ ಹೋಗಿ ತಿಳಿಸಿದ ಬಳಿಕ ಅಲ್ಲಿನ ಸಿಬ್ಬಂದಿಗಳ ಸಹಾಯದಿಂದ ಸಮಸ್ಯೆಯನ್ನು ಬಗೆಹರಿಸಲು ನೋಡುವುದು ಸಹಜ. ಹಾಗೆಯೇ ಟ್ರೇಡ್ ಯೂನಿಯನ್ ಸದಸ್ಯರ ಸಹಾಯವನ್ನು ಕೂಡಾ ಪಡೆಯಬಹುದು. ಆದರೆ ಇದನ್ನು ಹೊರತುಪಡಿಸಿ ಆನ್‌ಲೈನ್ ಮೂಲಕವೂ ಪಿಎಫ್ ಸಮಸ್ಯೆಯ ಬಗ್ಗೆ ದೂರು ನೀಡಬಹುದಾಗಿದ್ದು, ಅದಕ್ಕಾಗಿ ಇಪಿಎಫ್‌ ಕುಂದುಕೊರತೆ ನಿರ್ವಹಣಾ ವ್ಯವಸ್ಥೆ ಕಾರ್ಯ ನಿರ್ವಹಿಸುತ್ತದೆ.

ಇಪಿಎಫ್ ಕುಂದುಕೊರತೆ ನಿರ್ವಹಣಾ ವ್ಯವಸ್ಥೆ (EPF Grievance Management System), ಇಪಿಎಫ್‌ಒದ ಅಧಿಕೃತ ಪೋರ್ಟಲ್ ಆಗಿದೆ. ಇಪಿಎಫ್‌ಒ ಒದಗಿಸುವ ಸೇವೆಗಳಿಗೆ ಸಂಬಂಧಿಸಿದ ಕುಂದುಕೊರತೆಗಳು ಮತ್ತು ದೂರುಗಳನ್ನು ಪರಿಹರಿಸುವುದು ಇದರ ಮುಖ್ಯ ಕೆಲಸವಾಗಿದೆ.

ದೇಶದಲ್ಲಿ ಎಲ್ಲಿ ಬೇಕಾದರೂ ದೂರುಗಳನ್ನು ಸಲ್ಲಿಸಬಹುದಾಗಿದ್ದು, ದೂರು ಸಂಬಂಧಪಟ್ಟ ಕಚೇರಿಗೆ ಸಲ್ಲಿಕೆಯಾಗುತ್ತದೆ. ದೂರುಗಳನ್ನು ನೇರವಾಗಿ ಪ್ರಧಾನ ಕಛೇರಿ ಅಥವಾ ದೇಶಾದ್ಯಂತ ಇರುವ 135 ಕ್ಷೇತ್ರ ಕಚೇರಿಗಳಿಗೆ ಸಲ್ಲಿಸಬಹುದಾಗಿದೆ.

ಇಪಿಎಫ್ ಕುಂದುಕೊರತೆ ನಿರ್ವಹಣಾ ವ್ಯವಸ್ಥೆಯ ಫೀಚರ್ ದೂರು ಅಥವಾ ಕುಂದುಕೊರತೆಗಳನ್ನು ಪಿಎಫ್ ಸದಸ್ಯರು, ಇಪಿಎಸ್ ಪಿಂಚಣಿದಾರರು, ಉದ್ಯೋಗದಾತರು ಸಲ್ಲಿಕೆ ಮಾಡಬಹುದಾಗಿದೆ.

ರಿಮೈಂಡರ್ ಅನ್ನು ಸೆಂಡ್ ಮಾಡುವ ಆಯ್ಕೆ ಇದ್ದು, ಸಮಸ್ಯೆಗೆ ಸಂಬಂಧಿತ ದಾಖಲೆಗಳನ್ನು ಕೂಡಾ ಸಲ್ಲಿಕೆ ಮಾಡಬೇಕು.

ದೂರು ನೀಡಿದ ಬಳಿಕ ಸ್ಟೇಟಸ್ ಅನ್ನು ಚೆಕ್ ಮಾಡಬಹುದಾಗಿದೆ. ಇದರ ಹೊರತಾಗಿ ಫೀಡ್‌ಬ್ಯಾಕ್ ಅನ್ನು ಕೂಡಾ ನೀಡಬಹುದಾಗಿದೆ. ಇದಲ್ಲದೆ,ಉಮಾಂಗ್ ಆಪ್ ಮೂಲಕವೂ ಈ ಸೇವೆಯನ್ನು ಪಡೆಯಬಹುದಾಗಿದೆ.

ದೂರು ಸಲ್ಲಿಕೆ ಮಾಡುವ ವಿಧಾನ ಹೀಗಿದೆ:

ಅಧಿಕೃತ ವೆಬ್‌ಸೈಟ್‌ https://epfigms.gov.in/ ಗೆ ಭೇಟಿ ನೀಡಿದ ಬಳಿಕ register grievance ಅನ್ನು ಕ್ಲಿಕ್ ಮಾಡಬೇಕು. ನಂತರ, PF member, EPF pensioner ಮೊದಲಾದ ಸ್ಟೇಟಸ್ ಆಯ್ಕೆ ಮಾಡಿಕೊಳ್ಳಬೇಕು.

ಯುಎಎನ್ ಪಾಸ್‌ವರ್ಡ್, ಸೆಕ್ಯೂರಿಟಿ ಕೋಡ್ ಅನ್ನು ನಮೂದಿಸಬೇಕು. ಈ ಪ್ರಕ್ರಿಯೆಯ ಬಳಿಕ Get Details ಮೇಲೆ ಕ್ಲಿಕ್ ಮಾಡಿದರೆ, ಮಾಹಿತಿ ಲಭ್ಯವಾಗಲಿದೆ. ನಂತರ, Get OTP ಮೇಲೆ ಕ್ಲಿಕ್ ಮಾಡಿಕೊಂಡು ಇಮೇಲ್ ಅಥವಾ ಮೊಬೈಲ್‌ಗೆ ಬಂದ ಒಟಿಪಿ ನಮೂದಿಸಿ submit ಕ್ಲಿಕ್ ಮಾಡಬೇಕು. ಇದರ ಜೊತೆಗೆ ನಿಮ್ಮ ವೈಯಕ್ತಿಕ ದಾಖಲೆ ನಮೂದಿಸಿ ಪಿಎಫ್ ಖಾತೆ ಸಂಖ್ಯೆಯನ್ನು ಆಯ್ಕೆ ಮಾಡಬೇಕು. ಬಳಿಕ , ಸಮಸ್ಯೆಯ ಕ್ಯಾಟಗರಿ ಆಯ್ಕೆ ಮಾಡಿಕೊಂಡು ಸಮಸ್ಯೆ ಬಗ್ಗೆ ವಿವರಣೆ ನೀಡಬೇಕು.

ಅದಕ್ಕೆ ಪೂರಕ ದಾಖಲೆಗಳನ್ನು ಅಪ್‌ಲೋಡ್ ಮಾಡಿಕೊಂಡು , submit ಕ್ಲಿಕ್ ಮಾಡಿದರೆ ಪ್ರಕ್ರಿಯೆ ಪೂರ್ಣವಾಗುತ್ತದೆ.

ದೂರಿನ ಸ್ಟೇಟಸ್ ಅನ್ನು ಚೆಕ್ ಮಾಡುವ ವಿಧಾನ: ಅಧಿಕೃತ ವೆಬ್‌ಸೈಟ್‌ https://epfigms.gov.in/ ಗೆ ಭೇಟಿ ನೀಡಬೇಕು. ನಂತರ, View Status ಆಯ್ಕೆ ಮೇಲೆ ಕ್ಲಿಕ್ ಮಾಡಿಕೊಂಡು, ರಿಜಿಸ್ಟ್ರೇಷನ್ ಸಂಖ್ಯೆಯನ್ನು ನಮೂದಿಸಬೇಕು.

ಬಳಿಕ ಪಾಸ್‌ವರ್ಡ್ ಅಥವಾ ಮೊಬೈಲ್ ಸಂಖ್ಯೆ/ಇಮೇಲ್ ಐಡಿ ನಮೂದಿಸಬೇಕು.ಈ ಪ್ರಕ್ರಿಯೆಯ ಬಳಿಕ ಸೆಕ್ಯೂರಿಟಿ ಕೋಡ್ ಅನ್ನು ನಮೂದಿಸಿ submit ಕ್ಲಿಕ್ ಮಾಡಿದರೆ ಸ್ಟೇಟಸ್ ಲಭ್ಯವಾಗಲಿದೆ.

ದೂರಿನ ಬಗ್ಗೆ ರಿಮೈಂಡರ್ ಸಲ್ಲಿಸುವ ವಿಧಾನ:

ನಾವು ಯಾವುದೇ ಕಾರ್ಯವನ್ನು ಮಾಡುವುದನ್ನು ಮರೆತರೆ ಅದನ್ನು ನೆನಪಿಸಿಕೊಳ್ಳಲು ಅಲರಾಂ ಇಟ್ಟುಕೊಳ್ಳುವುದು ಅಥವಾ ಬೇರೆ ಯಾರಲ್ಲಾದರೂ ನೆನಪು ಮಾಡುವಂತೆ ಹೇಳುವುದು ಸಾಮಾನ್ಯವಾಗಿದೆ.

ಇಪಿಎಫ್ ದೂರಿನಲ್ಲಿಯೂ ಇದೇ ಆಯ್ಕೆ ಇದ್ದು, ನೀವು ಸಲ್ಲಿಸಿದ ದೂರಿಗೆ ಯಾವುದೇ ಪ್ರತಿಕ್ರಿಯೆ ಸಿಗದಿದ್ದರೆ ಅಥವಾ ಸಮಸ್ಯೆ ಬಗೆಹರಿಸದಿದ್ದರೆ ನೀವು 30 ದಿನಗಳ ಬಳಿಕ ರಿಮೈಂಡರ್ ಅನ್ನು ಸಲ್ಲಿಕೆ ಮಾಡುವ ಆಯ್ಕೆ ಕೂಡ ಲಭ್ಯವಿದೆ.

ಅದಕ್ಕಾಗಿ, ಅಧಿಕೃತ ವೆಬ್‌ಸೈಟ್‌ https://epfigms.gov.in/ ಗೆ ಭೇಟಿ ನೀಡಬೇಕು. ನಂತರ, reminder ಆಯ್ಕೆಯನ್ನು ಕ್ಲಿಕ್ ಮಾಡಿಕೊಂಡು ರಿಜಿಸ್ಟ್ರೇಷನ್ ಸಂಖ್ಯೆಯನ್ನು ನಮೂದಿಸಬೇಕು.

ಬಳಿಕ, ಪಾಸ್‌ವರ್ಡ್ ಅಥವಾ ಮೊಬೈಲ್ ಸಂಖ್ಯೆ/ಇಮೇಲ್ ಐಡಿ ನಮೂದಿಸಬೇಕು. ಬಳಿಕ, ಸೆಕ್ಯೂರಿಟಿ ಕೋಡ್ ಅನ್ನು ನಮೂದಿಸಿ submit ಕ್ಲಿಕ್ ಮಾಡಿದರೆ ರಿಮೈಂಡರ್ ಸಲ್ಲಿಕೆಯಾಗಲಿದೆ.

ಹಾಗಾಗಿ, ದೂರು ನೀಡಲು ಕಚೇರಿಗಳಿಗೆ ಅಲೆಯುವ ಬದಲಿಗೆ ಆನ್ಲೈನ್ ನಲ್ಲಿಯೇ ಪಿಎಫ್ ಕುರಿತಾದ ದೂರು ಸಲ್ಲಿಸಬಹುದಾಗಿದೆ.

Leave A Reply

Your email address will not be published.