ಓಮಿಕ್ರಾನ್ ಬಿಕ್ಯೂ ಹೊಸತಳಿ ಪತ್ತೆ : ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಸೂಚನೆ
ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಹೊಸ ಸೋಂಕು ಪ್ರಕರಣ ಇಳಿಕೆಯಾಗುತ್ತಿದ್ದರೂ, ಅಮೆರಿಕದಲ್ಲಿ ಓಮಿಕ್ರಾನ್ ಬಿಕ್ಯೂ.1 ಹಾಗೂ ಮಹಾರಾಷ್ಟ್ರದಲ್ಲಿ ಎಕ್ಸ್‌ಬಿಬಿ ಎಂಬ ಹೊಸ ತಳಿ ಪತ್ತೆಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲೂ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
ಬಿಎ 2.75 ಹಾಗೂ ಬಿಜೆ.1ನಿಂದ ಎಕ್ಸ್‌ಬಿಬಿ ಎಂಬ ಓಮಿಕ್ರಾನ್‌ನ ಹೊಸ ತಳಿ ಮಹಾರಾಷ್ಟ್ರದಲ್ಲಿ ಪತ್ತೆಯಾಗಿದ್ದು, ಆ ಭಾಗದಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ. ಅಮೆರಿಕದಲ್ಲಿ ಬಿಕ್ಯೂ.1 ಎಂಬ ಮತ್ತೂಂದು ಓಮಿಕ್ರಾನ್ ತಳಿ ಪತ್ತೆಯಾಗಿದೆ. ಇವೆರಡೂ ತಳಿಗಳಿಂದ ಕೋವಿಡ್ ಮಾದರಿಯಲ್ಲೇ ಸೋಂಕು ಹರಡುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಹೀಗಾಗಿ ದೀಪಾವಳಿ ಹಾಗೂ ಕನ್ನಡ ರಾಜ್ಯೋತ್ಸವ ಹಬ್ಬದ ವೇಳೆ ರಾಜ್ಯದ ಜನ ಎಚ್ಚರಿಕೆ ವಹಿಸಿ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಆರೋಗ್ಯ ಇಲಾಖೆ ಸಲಹೆ ನೀಡಿದೆ.
ಜ್ವರ, ಕೆಮ್ಮು, ಶೀತ, ಗಂಟಲು ನೋವು, ಉಸಿರಾಟದ ಸಮಸ್ಯೆ ಕಂಡು ಬಂದಲ್ಲಿ ಕೂಡಲೇ ಸ್ಥಳೀಯ ಆಸ್ಪತ್ರೆಗೆ ತೆರಳಿ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಿ. ರೋಗ ಗುಣಮುಖವಾಗುವವರೆಗೂ ಸ್ವಯಂ ಪ್ರೇರಿತವಾಗಿ ಮನೆಯಲ್ಲೇ ಉಳಿದುಕೊಳ್ಳಿ. ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸಿ ಓಡಾಡಿದರೆ ಉತ್ತಮ. ಹಬ್ಬದಂದು ಜನ ಸಂದಣಿ ನಡುವೆ ಅಂತರ ಕಾಯ್ದುಕೊಳ್ಳಿ. ಈಗಾಗಲೇ 2 ವ್ಯಾಕ್ಸಿನ್ ತೆಗೆದುಕೊಂಡವರು ಬೂಸ್ಟರ್ ಡೋಸ್ ತೆಗೆದುಕೊಳ್ಳಿ. 60 ವರ್ಷ ಮೇಲ್ಪಟ್ಟವರು ಈ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಕೋವಿಡ್ ರೋಗದ ಗುಣ ಲಕ್ಷಣ ಇರುವವರಿಂದ ಅಂತರ ಕಾಯ್ದುಕೊಂಡು ವ್ಯವಹರಿಸಬೇಕು. ಸಾರ್ವಜನಿಕರು ದೀಪಾವಳಿ ಹಬ್ಬದಂದು ಹಸಿರು ಪಟಾಕಿ ಬಳಸುವ ಮೂಲಕ ಪರಿಸರದ ಉಳಿವಿಗೆ ಒತ್ತು ಕೊಡಬೇಕು ಎಂದು ಆರೋಗ್ಯ ಇಲಾಖೆ ಸೂಕ್ತ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ತಿಳಿಸಿದೆ.