ಡಾ| ಡಿ ವೀರೇಂದ್ರ ಹೆಗ್ಗಡೆ ವಿರುದ್ಧ ಸುಳ್ಳು ಆರೋಪ ಪ್ರಕರಣ:ನಾಗರಿಕ ಸೇವಾ ಟ್ರಸ್ಟ್ ನ ಅಧ್ಯಕ್ಷರ ಕ್ಷಮಾಪಣೆಯನ್ನೂ ತಿರಸ್ಕರಿಸಿದ ಸುಪ್ರಿಂ ಕೋರ್ಟ್
ಶ್ರೀ ಕ್ಷೇತ್ರ ಧರ್ಮಸ್ಥಳ ವಿರುದ್ಧ ಅಪಪ್ರಚಾರ ಮಾಡಿದ ಆರೋಪದಲ್ಲಿ ನಾಗರಿಕ ಸೇವಾ ಟ್ರಸ್ಟ್ ನ ಅಧ್ಯಕ್ಷರಿಗೆ 3 ತಿಂಗಳ ಸಜೆಯಲ್ಲದೆ, ಕ್ಷೇತ್ರಕ್ಕೆ 4.5ಲಕ್ಷ ರೂಪಾಯಿ ಪರಿಹಾರವನ್ನು ನೀಡಬೇಕು ಎಂಬ ಬೆಳ್ತಂಗಡಿ ನ್ಯಾ ಯಾಲಯದ ಆದೇಶವನ್ನು ಸುಪ್ರಿಂ ಕೋರ್ಟ್ ಎತ್ತಿ ಹಿಡಿದಿದ್ದು ಸೋಮನಾಥ ನಾಯಕ್ ಅವರು ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿ ಆದೇಶ ನೀಡಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಥವಾ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಅಲ್ಲಿಯ ಸಂಸ್ಥೆಗಳ ಕುರಿತು ಗೌರವಕ್ಕೆ ಚ್ಯುತಿ ತರುವ ಯಾವುದೇ ರೀತಿಯ ಬರವಣಿಗೆ ಅಥವಾ ಹೇಳಿಕೆ ನೀಡಬಾರದೆಂದು ಈ ಹಿಂದೆ ಬೆಳ್ತಂಗಡಿ ಸಿವಿಲ್ ನ್ಯಾಯಾಲಯವು ಸೋಮನಾಥ ನಾಯಕ್ ಮತ್ತು ಇತರ 5 ಮಂದಿಯ ವಿರುದ್ಧ ಪ್ರತಿಬಂಧಕಾಜ್ಞೆ ಮಾಡಿತ್ತು. ನ್ಯಾಯಾಲಯದ ಆದೇಶ ಇದ್ದರೂ ಹೆಗ್ಗಡೆಯವರ ವಿರುದ್ಧ ಸಾಮಾಜಿಕ ಜಾಲತಾಣಗಳ ಮುಖೇನ ಆರೋಪ ಮಾಡುತ್ತಲೇ ಇದ್ದರು . ಈ ವಿಚಾರವನ್ನು ಮತ್ತೆ ನ್ಯಾಯಾಲಯದಲ್ಲಿ ಮಂಡಿಸಿದ್ದು ಸುದೀರ್ಘ ವಿಚಾರಣೆ ನಡೆದು ಆರೋಪಿತ ವ್ಯಕ್ತಿ ದೋಷಿ ಎಂದು ಪರಿಗಣಿಸಿದ ನ್ಯಾಯಾಲಯ 3 ತಿಂಗಳ ಸಜೆಯಲ್ಲದೆ ಕ್ಷೇತ್ರಕ್ಕೆ 4.5 ಲಕ್ಷ ಪರಿಹಾರವನ್ನು ನೀಡಬೇಕು ಎಂದು ಆದೇಶಿಸಿ ನ್ಯಾಯಾಲಯ ನಾಯಕ್ ರ ಆಸ್ತಿಯನ್ನು ಸಹ ಮುಟ್ಟುಗೋಲು ಹಾಕಿಕೊಂಡಿತ್ತು.
ಈ ಆದೇಶದ ವಿರುದ್ಧ ಸೋಮನಾಥ ನಾಯಕ್ ಅಪೀಲು ಸಲ್ಲಿಸಿದ ಬಳಿಕ ಸುದೀರ್ಘ ವಾದ ವಿವಾದ ನಡೆದು ಅಪರ ನ್ಯಾಯಾಲಯ ಮಾ.22, 2022ರಲ್ಲಿ ನಾಯಕ್ ರವರ ಅಪೀಲಿನಲ್ಲಿ ನಿಜಾಂಶವಿಲ್ಲವೆಂದು ತೀರ್ಪಿತ್ತು, ತನಿಖಾ ನ್ಯಾಯಾಲಯ ನೀಡಿದ ಶಿಕ್ಷೆಯನ್ನು ಎತ್ತಿ ಹಿಡಿದು ಅಪೀಲು ವಜಾ ಮಾಡಿತ್ತು. ಬೆಳ್ತಂಗಡಿಯ ಹೆಚ್ಚುವರಿ ನ್ಯಾಯಾಲಯ 31.3.2022 ರಂದು ನ್ಯಾಯಾಲಯದ ಘನತೆಯನ್ನು ಎತ್ತಿ ಹಿಡಿಯುವ ಉದ್ದೇಶದಿಂದ ಸೋಮನಾಥ ನಾಯಕ್ ವಿರುದ್ಧ ಬಂಧನದ ವಾರೆಂಟ್ ಹೊರಡಿಸಿ ನಾಗರಿಕ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೆ ಸೋಮನಾಥ ನಾಯಕ್ ರವರನ್ನು ಬಂಧಿಸಿ 3 ತಿಂಗಳ ಅವಧಿಯ ಸೆರೆಮನೆ ವಾಸಕ್ಕೆ ಕಳುಹಿಸುವುದಕ್ಕೆ ಆದೇಶಿಸಿತ್ತು.
ಈ ಆದೇಶದ ವಿರುದ್ಧ ಸೋಮನಾಥ್ ನಾಯಕ್ ಭಾರತದ ಸರ್ವೋಚ್ಛ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಎರಡೂ ಕಡೆಯ ವಾದಗಳನ್ನು ಆಲಿಸಿದ ಸರ್ವೋಚ್ಚ ನ್ಯಾಯಾಲಯ ಕರ್ನಾಟಕ ಉಚ್ಚ ನ್ಯಾಯಾಲಯ ಹಾಗೂ ಬೆಳ್ತಂಗಡಿಯ ನ್ಯಾಯಾಲಯಗಳು ನೀಡಿದ ತೀರ್ಪುಗಳಿಗೆ ತಾನು ಮಧ್ಯ ಪ್ರವೇಶಿಸುವ ಯಾವುದೇ ಕಾರಣ ಕಂಡು ಬರುವುದಿಲ್ಲ. ನ್ಯಾಯಾಲಯದ ಪ್ರತಿಬಂಧಕಾಜ್ಞೆ ಊರ್ಜಿತದಲ್ಲಿದ್ದರೂ ಅರ್ಜಿದಾರ ಪದೇ ಪದೇ ನ್ಯಾಯಾಲಯದ ಆಜ್ಞೆಯನ್ನು ಉಲ್ಲಂಘಿಸಿರುವುದು ರುಜುವಾತುಗೊಂಡ ಕಾರಣಅವರು ನಿವೇದಿಸಿಕೊಂಡ ಕ್ಷಮಾಪಣೆಯನ್ನೂ ತಿರಸ್ಕರಿಸಿ ಅರ್ಜಿಯನ್ನು ವಜಾಗೊಳಿಸಲಾಗಿದೆ ಎಂದು ತೀರ್ಪು ನೀಡಿದೆ. ಇದೀಗ ಮೇಲ್ಮನವಿ ವಜಾ ಗೊಂಡಿರುವುದರಿಂದ ಸೋಮನಾಥ ನಾಯಕ್ ಅವರ ಬಂಧನ ಖಚಿತವಾಗಿದೆ.