ಕಡಬ:ಕೊಂಬಾರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ದಲಿತ ವ್ಯಕ್ತಿಗೆ ಹಲ್ಲೆ-ಬೆದರಿಕೆ ಪ್ರಕರಣ!! ಠಾಣೆಯಲ್ಲಿ ಇಬ್ಬರ ವಿರುದ್ಧ ಪ್ರಕರಣ ದಾಖಲು!! ಕೂಡಲೇ ಬಂಧಿಸದೇ ಇದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ!!

ಕಡಬ: ಕ್ಷುಲ್ಲಕ ಕಾರಣಕ್ಕೆ ದಲಿತ ಸಮುದಾಯದ ವ್ಯಕ್ತಿಯೊಬ್ಬರಿಗೆ ವ್ಯಕ್ತಿಗಳಿಬ್ಬರು ಹಲ್ಲೆ ನಡೆಸಿದ ಪ್ರಕರಣವೊಂದು ತಾಲೂಕಿನ ಕೊಂಬಾರು ಎಂಬಲ್ಲಿ ನಡೆದಿದ್ದು, ಹಲ್ಲೆಯಿಂದ ಗಾಯಗೊಂಡ ಕೊಂಬಾರು ಬೊಟ್ಟಡ್ಕ ನಿವಾಸಿ ಮಾಧವ ಎಂಬವರು ಕಡಬ ಆಸ್ಪತ್ರೆಗೆ ದಾಖಲಾಗಿದ್ದು, ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಕೊಂಬಾರು ಬೋಳ್ನಡ್ಕ ಎಂಬಲ್ಲಿರುವ ಅಂಗಡಿಯೊಂದರ ಸಮೀಪವೇ ಅಂಗಡಿ ಮಾಲೀಕ ಲಾವಪ್ಪ ಗೌಡ,ಹಾಗೂ ಅವರ ಮಗ ಗೋಪಾಲಕೃಷ್ಣ ಎಂಬವರು ಸೇರಿಕೊಂಡು ಕ್ಷುಲ್ಲಕ ಕಾರಣಕ್ಕಾಗಿ ಹಲ್ಲೆ ನಡೆಸಿದ್ದಾರೆ ಹಾಗೂ ದಲಿತ ಸಂಘಟನೆಗಳ ಬಗ್ಗೆ ಕೀಳಾಗಿ ಮಾತನಾಡಿದ್ದಲ್ಲದೇ, ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.ಘಟನೆಯ ಬಳಿಕ ಗಾಯಾಳು ಮಾಧವ ಅವರ ಸಂಬಂಧಿಯೊಬ್ಬರು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಿದ್ದರು.

ಈ ಬಗ್ಗೆ ದಲಿತ ಸಂಘಟನೆಗಳು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದು, ದಲಿತ ಸಂಘಟನೆಗಳ ಬಗೆಗೂ ಕೀಳಾಗಿ ಮಾತನಾಡಿದ್ದಲ್ಲದೆ, ದಲಿತ ಸಂಘಟನೆಗಳು ಏನನ್ನೂ ಮಾಡಲು ಸಾಧ್ಯವಿಲ್ಲ ಎನ್ನುವ ಸವಾಲು ಕೂಡಾ ಹಲ್ಲೆಯ ವೇಳೆ ಹಾಕಿದ್ದಾರೆ ಎಂಬ ವಿಚಾರವು ಗಂಭೀರ ಚರ್ಚೆಗೂ ಕಾರಣವಾಗಿತ್ತು.

ಸದ್ಯ ಪ್ರಕರಣ ಠಾಣೆಯ ಮೆಟ್ಟಿಲೇರಿದ್ದು, ಪೊಲೀಸರು ಹಲ್ಲೆ ನಡೆಸಿದ್ದಾರೆ ಎನ್ನಲಾದ ಲಾವಪ್ಪ ಗೌಡ ಹಾಗೂ ಗೋಪಾಲಕೃಷ್ಣ ಎಂಬಿಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು,ಕೂಡಲೇ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸದೇ ಇದ್ದಲ್ಲಿ ಠಾಣೆಯ ಮುಂದೆ ಧರಣಿ ಕೂರಲಾಗುವುದು ಎಂದು ದಲಿತ ಸಂಘಟನೆಯ ಪ್ರಮುಖರು ಮಾಧ್ಯಮದ ಮೂಲಕ ಎಚ್ಚರಿಸಿದ್ದಾರೆ.

Leave A Reply