ಭಾರೀ ಅಗ್ನಿಅವಘಡ | ಬೆಂಕಿಯ ಕೆನ್ನಾಲಿಗೆಯಲ್ಲಿ ಸುಟ್ಟು ಭಸ್ಮವಾದ 700 ಕ್ಕೂ ಹೆಚ್ಚು ಅಂಗಡಿಗಳು!!!
ವಿಧಿ ಆಟಕ್ಕೆ ಹೊಣೆ ಯಾರು? ಬೆಂಕಿ ಜೊತೆ ಸರಸ ಇಟ್ಟುಕೊಳ್ಳಬಾರದು ಎಂಬ ಮಾತಿದೆ. ಯಾಕೆಂದರೆ ಚೂರು ಬೆಂಕಿ ಹತ್ತಿಕೊಂಡರೆ ಎಲ್ಲೆ ಇಲ್ಲದೆ ಗಾಳಿಯಂತೆ ಹರಡುತ್ತದೆ. ಅಲ್ಲದೆ ಬೆಂಕಿ ಮತ್ತು ನೀರಿಗೆ ದಾರಿ ಬೇಕಿಲ್ಲ. ಸಿಕ್ಕಿದ ಕಡೆ ಎಲ್ಲಾ ನುಗ್ಗುವುದು ಅದರ ಗುಣ.
ಅದೇ ರೀತಿ ಇಟಾನಗರ(ಅರುಣಾಚಲ ಪ್ರದೇಶ) ದ ನಹರ್ಲಗುನ್ ನ ಮಾರುಕಟ್ಟೆಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು 700 ಕ್ಕೂ ಹೆಚ್ಚು ಅಂಗಡಿಗಳು ಬೂದಿಯಾಗಿವೆ.
ಘಟನೆಯಲ್ಲಿ ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಬೆಂಕಿ ಅನಾಹುತಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ನಿಖರವಾದ ಆಸ್ತಿ ನಷ್ಟವನ್ನು ಇನ್ನೂ ಅಂದಾಜು ಮಾಡಿಲ್ಲ.
ವರದಿಗಳ ಪ್ರಕಾರ, ಭಾರಿ ಪ್ರಮಾಣದ ನಷ್ಟವಾಗಿದೆ. ಪ್ರಾದೇಶಿಕ ಅಗ್ನಿಶಾಮಕ ಇಲಾಖೆ ನಿರ್ಲಕ್ಷ್ಯ ವಹಿಸಿದೆ ಎಂದು ನಹರ್ಲಗುನ್ ಬಜಾರ್ ಸಮಿತಿ ಅಧ್ಯಕ್ಷೆ ಕಿರ್ಪಾ ನಾಯ್ ಆರೋಪಿಸಿದ್ದು, ಘಟನಾ ಸ್ಥಳವು ನಹರಲಗುನ್ ಅಗ್ನಿಶಾಮಕ ಇಲಾಖೆ ಕಚೇರಿಯಿಂದ ಸುಮಾರು 20 ಮೀಟರ್ ದೂರದಲ್ಲಿದ್ದರೂ, ಅಧಿಕಾರಿಗಳು ತಕ್ಷಣಕ್ಕೆ ಸೇವೆ ಒದಗಿಸುವಲ್ಲಿ ವಿಳಂಬ ಮಾಡಿದರು. ಬೆಂಕಿ ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದರು.
ಅಂಗಡಿಯವರು ಅಗ್ನಿಶಾಮಕ ದಳದ ನಿರ್ಲಕ್ಷ್ಯದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರದಿಂದ ಪರಿಹಾರ ನೀಡುವಂತೆ ಆಗ್ರಹಿಸಿದ್ದಾರೆ. ಆರಂಭದಲ್ಲಿ ಎರಡು ಅಂಗಡಿಗಳು ಎರಡು ಗಂಟೆಗಳ ಕಾಲ ಬೆಂಕಿಗೆ ಆಹುತಿಯಾಗಿದ್ದು, ಬೆಂಕಿ ಹರಡುವುದನ್ನು ನಿಯಂತ್ರಿಸುವಲ್ಲಿ ಅಗ್ನಿಶಾಮಕ ದಳ ವಿಫಲವಾಗಿದೆ.