Arecanut :ಅಡಿಕೆ ಕಳ್ಳಸಾಗಾಣಿಕೆ | ಅಡಿಕೆ ಬೆಳೆಗಾರರಿಗೆ ಸಂಕಷ್ಟ | ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಮಧ್ಯಪ್ರವೇಶಕ್ಕೆ ಒತ್ತಾಯ
ರೈತರಿಗೆ ಬೆಳೆ ಬೆಳೆದು ಇಳುವರಿ ಪಡೆಯುವ ನಡುವೆಯೇ ಬೆಲೆ ಇಳಿಕೆ, ಫಸಲಿನ ನಷ್ಟ, ಅಧಿಕ ಮಳೆಯಿಂದ ನಿರೀಕ್ಷಿತ ಫಸಲು ಪಡೆಯಲು ಸಾಧ್ಯವಾಗುತ್ತಿಲ್ಲ.
ಈ ನಡುವೆ ತೈವಾನ್, ಥೈಲ್ಯಾಂಡ್, ಮ್ಯಾನ್ಮಾರ್ ಮೊದಲಾದ ದೇಶಗಳಿಂದ ಅಡಿಕೆ ಕಳ್ಳಸಾಗಾಣಿಕೆ ಎಗ್ಗಿಲ್ಲದೆ ನಡೆಯುತ್ತಿರುವ ಕಾರಣದಿಂದ ತ್ರಿಪುರಾ ಹಾಗೂ ಮಿಜೋರಾಂ ಅಡಿಕೆ ಬೆಳೆಗಾರರಿಗೂ(Arecanut Growers) ಈಗ ಸಂಕಷ್ಟ ಎದುರಾಗಿದೆ.
ಹೀಗಾಗಿ ತಕ್ಷಣವೇ ತ್ರಿಪುರಾ, ಮಿಜೋರಾಂ ಮತ್ತು ಅಸ್ಸಾಂ ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ಅಡಿಕೆ ಬೆಳೆಗಾರರಿಗೆ ನೆರವಾಗಬೇಕಾಗಿದೆ.
ವಿದೇಶಿ ಅಡಿಕೆಯು ಮ್ಯಾನ್ಮಾರ್ ಮೂಲಕ ಅಸ್ಸಾಂ ಮಾರ್ಗದಲ್ಲಿ ಒಳದಾರಿಯ ಮೂಲಕ ಅಡಿಕೆ ಕಳ್ಳಸಾಗಾಟ ವಿಪರೀತವಾಗಿ ಸರಾಗವಾಗಿ ನಡೆಯುತ್ತಿದ್ದು ಹೀಗಾಗಿ ತ್ರಿಪುರಾ ಮತ್ತು ಮಿಜೋರಾಂನ ಅಡಿಕೆ ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಸಾಗಿಸಲು ಮತ್ತು ಮಾರಾಟ ಮಾಡಲು ತೊಂದರೆಗಳನ್ನು ಎದುರಿಸುವ ಸ್ಥಿತಿ ಎದುರಾಗಿದೆ.
ತ್ರಿಪುರಾ ಮತ್ತು ಮಿಜೋರಾಂನ ಕೃಷಿಕರಿಗೆ ಅಡಿಕೆ ಪ್ರಮುಖ ಬೆಳೆಯಾಗಿದೆ. ಈಗ ಪೊಲೀಸ್ ದಾಳಿ ಹಾಗೂ ಕೆಲವು ಕಡೆ ಗ್ರಾಮೀಣ ಭಾಗಗಳಲ್ಲಿಯೂ ಅಕ್ರಮ ದಾಸ್ತಾನು ಕಾರಣಗಳಿಂದ ಕೃಷಿಕರ ವಸ್ತುಗಳ ಮಾರಾಟಕ್ಕೂ ಸಂಕಷ್ಟವಾಗಿದೆ.
ಈಗಾಗಲೇ, ತ್ರಿಪುರಾ, ಮಿಜೋರಾಂ ಅಡಿಕೆ ಬೆಳೆಗಾರರು ತಮ್ಮ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರಲು ವಿವಿಧ ಪ್ರತಿಭಟನೆ, ಆಂದೋಲನ ಮಾಡಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ.
ಇದಕ್ಕೆ ಸಂಬಂಧ ಪಟ್ಟ ಇಲಾಖೆ ಕೃಷಿಕರಿಗೆ ಗುರುತಿನ ಚೀಟಿ ನೀಡುತ್ತದೆ ಎಂದೂ ಹೇಳಿತ್ತು ಆದರೆ ಯಾವುದೂ ಕೂಡ ಜಾರಿಯಾಗದೇ ಜನರು ಒದ್ದಾಡುವಂತಾಗಿದೆ.
ತ್ರಿಪುರಾ, ಮಿಜೋರಾಂ ಮತ್ತು ಅಸ್ಸಾಂ ಸರ್ಕಾರಗಳು ಕೃಷಿ ಚಟುವಟಿಕೆಯ ಬಗ್ಗೆ ಗಮನ ಹರಿಸದೆ ಇರುವುದರಿಂದ ಅಡಿಕೆ ಕೃಷಿ ಅಪಾಯವನ್ನು ಎದುರಿಸುತ್ತಿದೆ. ತ್ರಿಪುರಾ ಮತ್ತು ಮಿಜೋರಾಂ ರೈತರು ಅಡಿಕೆ ಬೆಳೆಯುತ್ತಿದ್ದು, ವ್ಯಾಪಾರಿಗಳು ಖರೀದಿಸಲು ಮತ್ತು ಮಾರಾಟ ಮಾಡಲು ಪರದಾಡುವಂತಾಗಿದೆ.
ಮಾರಾಟಕ್ಕಾಗಿ ಅಸ್ಸಾಂ ರಾಜ್ಯವನ್ನು ಬಳಸಬೇಕಾಗಿದ್ದು, ಸಾಗಾಟ ಮಾಡಲು ಅಡಚಣೆ ಇದ್ದು ಹೀಗಾಗಿ, ಅಡಿಕೆ ಹಾಳಾಗುವ ಸ್ಥಿತಿಗೆ ತಲುಪಿದೆ.
ಹಾಗಾಗಿ, ಅಡಿಕೆ ಬೆಳೆಗಾರರು ಮೂರು ರಾಜ್ಯಗಳ ಮುಖ್ಯಮಂತ್ರಿಗಳು ಈ ಸಂಕಷ್ಟವನ್ನು ಪರಿಹರಿಸಲು ನೆರವಾಗಬೇಕೆಂದು ಒತ್ತಾಯಿಸಿದ್ದಾರೆ.