Health Care : ಹಲ್ಲು ನೋವನ್ನು ಕಮ್ಮಿ ಮಾಡುವ ಪವರ್ ಫುಲ್ ಮನೆ ಮದ್ದುಗಳು!!!
ಮುಖದಲ್ಲಿ ಮಂದಹಾಸ ಬಿರುವಾಗ ಮೆಲ್ಲಗೆ ಇಣುಕುವ ಹಲ್ಲುಗಳು ನೋಡಲು ಚೆನ್ನಾಗಿರಬೇಕು ಮತ್ತು ಆರೋಗ್ಯವಾಗಿ ಇರಬೇಕು ತಾನೇ. ಹೌದು ಹಲ್ಲು ಹುಳುಕು ಇದ್ದಾಗ ನಮಗೆ ಮಾತನಾಡಲು ಬಿಡಿ ಮುಗುಳ್ನಗೆ ಬೀರಲು ಸಹ ಕಷ್ಟವಾಗುತ್ತದೆ. ಯಾವ ನೋವನ್ನು ಬೇಕಾದರೂ ತಡೆದುಕೊಳ್ಳಬಹುದು, ಆದರೆ ಹಲ್ಲು ನೋವನ್ನು ಮಾತ್ರ ತಡೆದುಕೊಳ್ಳಲು ಆಗುವುದೇ ಇಲ್ಲ. ಒಂದು ತರ ಚಿತ್ರ ಹಿಂಸೆಯ ನೋವಿನ ಅನುಭವ ಆಗುತ್ತದೆ. ಈ ರೀತಿಯ ಮಾತುಗಳನ್ನು ನಾವು ಯಾರಿಂದಲಾದರೂ ಕೇಳಿಯೇ ಇರುತ್ತೇವೆ.
ನೋಡಲು ಚಿಕ್ಕ ಚಿಕ್ಕದಾಗಿ ಕಾಣುವ ಬಾಯಲ್ಲಿರುವ ಹಲ್ಲುಗಳು ತಮಗೆ ಕಾಯಿಲೆ ಬಂದಾಗ ಅದನ್ನು ತುಂಬಾ ನೋವಿನ ಮೂಲಕ ವ್ಯಕ್ತಪಡಿಸುತ್ತವೆ. ಹಲ್ಲು ನೋವಿಗೆ ಹಲವಾರು ಪರಿಹಾರಗಳು ಇವೆ. ಆದರೆ ನೈಸರ್ಗಿಕವಾಗಿ ಕೆಲವೊಂದು ಮನೆಮದ್ದುಗಳು ಅತ್ಯಂತ ಪರಿಣಾಮಕಾರಿ ಹಿರಿಯರ ಮೂಲಕ ತಿಳಿದುಕೊಳ್ಳಬಹುದು.
ಹಲ್ಲು ನೋವಿನ ನೈಸರ್ಗಿಕ ನಿವಾರಕಗಳು:
ಬೆಳ್ಳುಳ್ಳಿ ಬಳಸುವುದು:
ಹಲ್ಲು ನೋವಿಗೆ ಪರಿಹಾರ ಎಂದರೆ ಅದು ಹಸಿ ಬೆಳ್ಳುಳ್ಳಿ. ಹಲ್ಲು ನೋವು ಬಂದಂತಹ ಸಂದರ್ಭದಲ್ಲಿ ಒಂದೆರಡು ಹಸಿ ಬೆಳ್ಳುಳ್ಳಿ ಜಗಿದು ಅದರ ರಸ ಕುಡಿಯ ಬೇಕು. ಇದಲ್ಲದೆ, ಬೆಳ್ಳುಳ್ಳಿಯನ್ನು ಜಜ್ಜಿ ಅದರ ಜೊತೆ ಉಪ್ಪು ಮಿಶ್ರಣ ಮಾಡಿ ನೋವಿರುವ ಹಲ್ಲು ಮತ್ತು ವಸಡಿನ ಭಾಗಕ್ಕೆ ಹಚ್ಚಿ ಸ್ವಲ್ಪ ಹೊತ್ತು ಬಿಡಬೇಕು. ಬೆಳ್ಳುಳ್ಳಿಯನ್ನು ಆಂಟಿಬಯೋಟಿಕ್ ಆಗಿ ಹಲ್ಲು ನೋವಿಗೆ ಬಳಸಬಹುದಾಗಿದೆ. ಬೆಳ್ಳುಳ್ಳಿ ವಸಡಿನ ಭಾಗದಲ್ಲಿ ಇರುವಂತಹ ಬ್ಯಾಕ್ಟೀರಿಯಗಳ ಪ್ರಭಾವವನ್ನು ಕಡಿಮೆ ಮಾಡಬಲ್ಲದು.
ಈರುಳ್ಳಿಯ ಪ್ರಯೋಗ
ಹಲ್ಲು ಮತ್ತು ಒಸಡು ನೋವಿದ್ದರೆ ಈರುಳ್ಳಿಯನ್ನು ಜಜ್ಜಿ ಪೇಸ್ಟ್ ಮಾಡಿ ನೋವಿರುವ ಭಾಗಕ್ಕೆ ಹಚ್ಚಬೇಕು. ಬಹುತೇಕ ಒಗ್ಗರಣೆ ಸಂದರ್ಭದಲ್ಲಿ ಬಳಸಲಾಗುವ ಈರುಳ್ಳಿ ತನ್ನಲ್ಲಿ ಆಂಟಿ ಮೈಕ್ರೋಬಿಯಲ್ ಮತ್ತು ಆಂಟಿಸೆಪ್ಟಿಕ್ ಗುಣಲಕ್ಷಣಗಳನ್ನು ಹೇರಳವಾಗಿ ಹೊಂದಿದೆ. ಹಾಗಾಗಿ ಇದು ಕೇವಲ ಹಲ್ಲುನೋವನ್ನು ಮಾತ್ರ ಪರಿಹಾರ ಮಾಡುವುದಲ್ಲದೆ ನೋವಿಗೆ ಮತ್ತು ವಸಡುಗಳ ಸೋಂಕಿಗೆ ಕಾರಣವಾಗಿರುವ ಕೀಟಾಣುಗಳನ್ನು ಸಹ ಕೊಂದು ಹಾಕುತ್ತದೆ.
ನಿಮಗೆ ಒಂದು ವೇಳೆ ಹಲ್ಲು ನೋವು ಬಂದಂತಹ ಸಂದರ್ಭದಲ್ಲಿ ಹಸಿ ಈರುಳ್ಳಿ ತೆಗೆದುಕೊಂಡು ಅದನ್ನು ಸ್ವಲ್ಪ ಕಾಲ ಜಗಿದು ತಿನ್ನಬೇಕು. ಇದರಿಂದಾಗಿ ಹಲ್ಲು ನೋವಿನಿಂದ ಮುಕ್ತಿ ಪಡೆದುಕೊಳ್ಳಬಹುದು.
ಲವಂಗ ಬಳಕೆ:
ಲವಂಗ ಹಲ್ಲು ನೋವಿಗೆ ಮಾತ್ರವಲ್ಲ ಮಧುಮೇಹ, ಕ್ಯಾನ್ಸರ್ ಅಪಾಯವನ್ನು ತಡೆಯುತ್ತದೆ. ಲವಂಗ ಹಲ್ಲು ನೋವಿಗೆ ಮಾತ್ರವಲ್ಲ ಮಧುಮೇಹ, ಕ್ಯಾನ್ಸರ್ ಅಪಾಯವನ್ನು ತಡೆಯುತ್ತದೆ. ಲವಂಗ ಹಲ್ಲು ನೋವಿಗೆ ರಾಮಬಾಣ ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಷಯ. ಏಕೆಂದರೆ ಹಲ್ಲುನೋವನ್ನು ಉಪಶಮನ ಮಾಡುವಂತಹ ಗುಣ ಲಕ್ಷಣ ಲವಂಗದಲ್ಲಿ ಕಂಡು ಬರುತ್ತದೆ.
ಇದರಲ್ಲಿ ಆಂಟಿ ಇನ್ಫಾಮೇಟರಿ, ಆಂಟಿ ಬ್ಯಾಕ್ಟೀರಿಯಲ್ ಪ್ರಭಾವ ಇರುವುದರಿಂದ ಜೊತೆಗೆ ಆಂಟಿ ಆಕ್ಸಿಡೆಂಟ್ ಸಹ ಇರುವುದರಿಂದ ಹಲ್ಲು ನೋವಿನ ವಿಚಾರದಲ್ಲಿ ಹೆಚ್ಚು ಪ್ರಯೋಜನಗಳನ್ನು ಇದರಿಂದ ನಿರೀಕ್ಷೆ ಮಾಡಬಹುದು. ಕೇವಲ ಹಲ್ಲುಗಳ ನೋವು ಮಾತ್ರವಲ್ಲದೆ ವಸಡುಗಳ ಸೋಂಕನ್ನು ಸಹ ಲವಂಗ ಪರಿಹಾರ ಮಾಡುತ್ತದೆ.
ನೀವು ಒಂದೆರಡು ಲವಂಗಗಳನ್ನು ಹಲ್ಲು ನೋವು ಇರುವ ಜಾಗದಲ್ಲಿ ಇಟ್ಟುಕೊಂಡು ಸಣ್ಣದಾಗಿ ಜಗಿಯಬೇಕು. ಆಗ ಲವಂಗದಿಂದ ಬರುವ ರಸ ಹಲ್ಲುನೋವಿನ ಉಪಶಮನ ಮಾಡುವ ಕೆಲಸ ಮಾಡುತ್ತದೆ.
ಇದರ ಜೊತೆಗೆ ಇನ್ನೊಂದು ಪರಿಹಾರವನ್ನು ನೋಡುವುದಾದರೆ, ಒಂದು ಚೂರು ವೆಜಿಟೇಬಲ್ ಆಯಿಲ್ ಜೊತೆಗೆ ಒಂದೆರಡು ಲವಂಗ ಹಾಕಿಕೊಂಡು ಜಜ್ಜಿ ಪೇಸ್ಟ್ ತಯಾರು ಮಾಡಿ ಅದನ್ನು ನೋವಿರುವ ಜಾಗಕ್ಕೆ ಹಚ್ಚಬೇಕು ಅಥವಾ ಊದಿಕೊಂಡಿರುವ ವಸಡುಗಳ ಭಾಗಕ್ಕೆ ಹಚ್ಚಬೇಕು. ಎಂತಹ ನೋವಿದ್ದರೂ ಸಹ ಕಡಿಮೆ ಆಗುತ್ತದೆ.
ಬಿಸಿ ನೀರು ಮತ್ತು ಉಪ್ಪಿನ ಬಳಕೆ
ಒಂದು ಲೋಟ ಉಗುರು ಬೆಚ್ಚಗಿನ ನೀರಿಗೆ ಅರ್ಧ ಟೀ ಚಮಚ ಉಪ್ಪು ಹಾಕಿ ಅದರಿಂದ ಬಾಯಿ ಮುಕ್ಕಳಿಸಬೇಕು. ನೀವು ಅಡುಗೆ ಮನೆಯಲ್ಲಿ ರುಚಿಗಾಗಿ ಬಳಸುವ ಉಪ್ಪು ನಿಮ್ಮ ಹಲ್ಲು ನೋವಿನ ಉಪಶಮನಕ್ಕೆ ನೈಸರ್ಗಿಕವಾದ ರಾಮಬಾಣವಾಗಿ ಉಪಯೋಗಕ್ಕೆ ಬರುತ್ತದೆ. ದಿನದಲ್ಲಿ ಒಂದು ಮೂರು ನಾಲ್ಕು ಬಾರಿ ಈ ರೀತಿ ಮಾಡುವುದರಿಂದ ಕ್ರಮೇಣವಾಗಿ ಹಲ್ಲು ನೋವು ಮತ್ತು ವಸಡುಗಳ ಸಮಸ್ಯೆ ಪರಿಹಾರವಾಗುತ್ತದೆ.
ಐಸ್ ಬಳಕೆ:
ಹಲ್ಲುಗಳು ಸಾಕಷ್ಟು ಜನರಿಗೆ ಸೂಕ್ಷ್ಮವಾಗಿರುತ್ತವೆ. ಅಂತಹವರಿಗೆ ಹಲ್ಲು ನೋವಿನ ಸಮಸ್ಯೆ ಬಂದಾಗ ಅದನ್ನು ಪರಿಹಾರ ಮಾಡಲು ವಸಡುಗಳು ಮತ್ತು ನರಗಳನ್ನು ಉಪಶಮನ ಮಾಡಿ ನೋವನ್ನು ಕಡಿಮೆ ಮಾಡುವ ಲಕ್ಷಣಗಳು ಐಸ್ ಕ್ಯೂಬ್ ನಲ್ಲಿ ಕಂಡುಬರುತ್ತವೆ.
ಹಾಗಾಗಿ ಇಂತಹ ಸಂದರ್ಭದಲ್ಲಿ ರೆಫ್ರಿಜರೇಟರ್ ನಲ್ಲಿ ಇರುವಂತಹ ಐಸ್ ಕ್ಯೂಬ್ ಗಳನ್ನು ತೆಗೆದು ಕೊಂಡು ಒಂದು ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಹಾಕಿ ಅಥವಾ ಒಂದು ಬಟ್ಟೆಯಲ್ಲಿ ಸುತ್ತಿ ಗಲ್ಲದ ಬಳಿ ಇಟ್ಟು ತೆಗೆಯಬೇಕು. ಹೀಗೆ ಕೆಲವು ನಿಮಿಷಗಳು ಮಾಡುವುದರಿಂದ ಹಲ್ಲು ನೋವಿನ ಸಮಸ್ಯೆ ಪರಿಹಾರ ವಾಗುತ್ತದೆ.
ಒಂದು ವೇಳೆ ನಿಮಗೆ ಹಲ್ಲುನೋವು ವಿಪರೀತವಾಗಿದ್ದರೆ, ನೇರವಾಗಿ ಐಸ್ ಕ್ಯೂಬ್ ತೆಗೆದುಕೊಂಡು ಹಲ್ಲಿನ ಮೇಲೆ ಇಟ್ಟುಕೊಳ್ಳಬಹುದು.
ಅನಾದಿಕಾಲದಿಂದಲೂ ಹಿರಿಯರ ಪ್ರಕಾರ ಹಲ್ಲು ನೋವಿಗೆ ಶೀಘ್ರದಲ್ಲಿ ಈ ರೀತಿಯ ಮನೆಮದ್ದು ಮಾಡಿಕೊಳ್ಳಬಹುದು ಎಂದಿದ್ದಾರೆ.
ಆದರೆ ಹಲ್ಲು ನೋವಿನ ಉಪಶಮನಕ್ಕೆ ಮೇಲೆ ಹೇಳಿರುವ ಎಲ್ಲವೂ ಸಹ ತಾತ್ಕಾಲಿಕ ಪರಿಹಾರ ಮಾತ್ರ. ಒಂದು ವೇಳೆ ನಿಮಗೆ ಹಲ್ಲು ನೋವು ಬಿಟ್ಟು ಬಿಡದೆ ತುಂಬಾ ಸಮಯದಿಂದ ಇದ್ದರೆ ನೀವು ನಿಮ್ಮ ದಂತ ವೈದ್ಯರನ್ನು ಭೇಟಿಯಾಗಿ ಸೂಕ್ತ ಸಲಹೆ ಮತ್ತು ಚಿಕಿತ್ಸೆ ಪಡೆದುಕೊಳ್ಳುವುದು ಉತ್ತಮ. ನಮ್ಮ ದೇಹದ ಆರೋಗ್ಯ ರಕ್ಷಣೆಯ ಜೊತೆಗೆ ಹಲ್ಲಿನ ಆರೋಗ್ಯ ಸಹ ಮುಖ್ಯ ಆಗಿದೆ.