ಒಂದು ತುಂಡು ಭೂಮಿಗಾಗಿ ಅಪ್ಪ-ಅಮ್ಮ, ಅಣ್ಣ-ತಂಗಿ, ಒಡಹುಟ್ಟಿದವರು, ಕರುಳಬಂಧ,ಯಾವ ಸಂಬಂಧಗಳಿಗೂ ಬೆಲೆ ಕೊಡದೆ ಪರಸ್ಪರ ಹೊಡೆದಾಡೊ ಈ ಯುಗದಲ್ಲಿ ಒಂದು ಆಶ್ಚರ್ಯ ಸಂಗತಿ ತಿಳಿಯಲೇ ಬೇಕು.
ಹೌದು ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಸುಮಾರು 32 ಎಕರೆ ಭೂಮಿಯನ್ನು ಮಂಗಗಳ ಹೆಸರಿಗೆ ನೋಂದಾಯಿಸಲಾಗಿದೆ. ಮಹಾರಾಷ್ಟ್ರದ ಉಸ್ಮಾನಾಬಾದ್ ಜಿಲ್ಲೆಯ ಉಪಳ ಗ್ರಾಮ ಪಂಚಾಯಿತಿ ಬಳಿ ಪತ್ತೆಯಾದ ಭೂ ದಾಖಲೆಗಳಲ್ಲಿ 32 ಎಕರೆ ಜಮೀನು ಗ್ರಾಮದಲ್ಲಿ ವಾಸಿಸುತ್ತಿರುವ ಎಲ್ಲ ಕೋತಿಗಳ ಹೆಸರಿನಲ್ಲಿದೆ ಎಂದು ಸ್ಪಷ್ಟವಾಗಿ ನಮೂದಿಸಲಾಗಿದೆ.
ಇದು ಅಚ್ಚರಿಯಾದರೂ ನಿಜ. ಅರಣ್ಯ ಇಲಾಖೆಯ ಜಮೀನಿನಲ್ಲಿ ನೆಡುತೋಪು ಕಾಮಗಾರಿ ನಡೆಸಲಾಗಿದೆ. ನಿವೇಶನದಲ್ಲಿ ಪಾಳು ಬಿದ್ದ ಮನೆಯೂ ಇದ್ದು, ಈಗ ಕುಸಿದು ಬಿದ್ದಿದೆ. ಆ ನಿವೇಶನದಲ್ಲಿ ಹೆಚ್ಚಿನ ಮಂಗಗಳು ವಾಸವಾಗಿವೆ. ಈ ಹಿಂದೆ ಗ್ರಾಮದಲ್ಲಿ ಮದುವೆ ನಡೆದಾಗಲೆಲ್ಲಾ ಕೋತಿಗಳಿಗೆ ಮೊದಲು ಉಡುಗೊರೆ ನೀಡಿ ನಂತರವೇ ಸಮಾರಂಭ ಆರಂಭವಾಗುತ್ತಿತ್ತು. ಈಗ ಎಲ್ಲರೂ ಈ ಅಭ್ಯಾಸವನ್ನು ಅನುಸರಿಸುತ್ತಿದ್ದಾರೆ. ಹೀಗಾಗಿ ಮಂಗಗಳು ಮನೆಬಾಗಿಲಿಗೆ ಬಂದಾಗಲೆಲ್ಲ ಗ್ರಾಮಸ್ಥರು ಅವುಗಳಿಗೆ ಆಹಾರ ನೀಡಿ ಸತ್ಕರಿಸುತ್ತಾರೆ. ಅವುಗಳಿಗೆ ಯಾವುದೇ ರೀತಿಯ ತೊಂದರೆ ನೀಡುವುದಿಲ್ಲ, ಅಲ್ಲದೆ ಮಂಗಗಳು ಸಹ ಗ್ರಾಮದಲ್ಲಿರುವವರಿಗೆ ಯಾವುದೇ ರೀತಿಯ ತೊಂದರೆ ಮಾಡಿಲ್ಲ’ವೆಂದು ಗ್ರಾಮದ ಸರಪಂಚ್ ಹೇಳಿದ್ದಾರೆ.
ಅಲ್ಲಿನ ಉಪಳ ಗ್ರಾಮದ ಸರಪಂಚ್ ಬಪ್ಪಾ ಪಡವಾಲ್ ಅವರ ಪ್ರಕಾರ , ‘ದಾಖಲೆಗಳಲ್ಲಿ ಒಟ್ಟು 32 ಎಕರೆ ಜಮೀನು ಮಂಗಳಿಗೆ ಸೇರಿದೆ ಎಂದು ಸ್ಪಷ್ಟವಾಗಿದೆ ಎಂದಿದ್ದಾರೆ. ಆದರೆ ಈ ಪ್ರಾಣಿಗಳಿಗೆ ಯಾರು ಮತ್ತು ಯಾವಾಗ ಈ ವ್ಯವಸ್ಥೆ ಮಾಡಿದ್ದಾರೆಂಬುದು ಮಾಹಿತಿ ತಿಳಿದಿಲ್ಲ.
ಈ ಹಿಂದೆ ಗ್ರಾಮದಲ್ಲಿ ನಡೆಯುವ ಎಲ್ಲ ಆಚರಣೆಗಳಲ್ಲಿ ಮಂಗಗಳು ಸೇರುತ್ತಿದ್ದವಂತೆ. ಗ್ರಾಮದಲ್ಲಿ ಈಗ ಸುಮಾರು 100 ಮಂಗಗಳು ವಾಸವಾಗಿವೆ. ಮತ್ತು ಪ್ರಾಣಿಗಳು ಒಂದೇ ಸ್ಥಳದಲ್ಲಿ ದೀರ್ಘಕಾಲ ಉಳಿಯದ ಕಾರಣ ಅವುಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿದೆ. ಹೀಗಾಗಿ ಊರಿನ ಗ್ರಾಮಸ್ಥರು ಇಲ್ಲಿನ ಮಂಗಗಳಿಗೆ ವಿಶೇಷ ಗೌರವ ನೀಡುತ್ತಾರೆ’ ಎಂದು ತಿಳಿಸಿದ್ದಾರೆ.