ಇದೇನಿದು ವಿಚಿತ್ರ | ಸೊಸೆ ಇಟ್ಟ ಬೇಡಿಕೆ ಕಂಡು ಕಂಗಾಲಾದ ಅತ್ತೆ, ಮಾವ!!

ಈ ಹಿಂದೆ ವಸುದೈವ ಕುಟುಂಬಕಂ ಎಂಬ ಮಾತಿಗೆ ಅನುಗುಣವಾಗಿ ತುಂಬು ಸಂಸಾರದ ನಡುವೆ ಅನ್ಯೋನ್ಯತೆಯಿಂದ ಅದೆಷ್ಟೇ ಕಷ್ಟಗಳು ಎದುರಾದರೂ ಮೆಟ್ಟಿ ಜೊತೆಯಾಗಿ ನಿಲ್ಲುವ ಪರಿಪಾಠವಿತ್ತು. ಆದರೆ, ಇಂದು ಕಾಲ ಬದಲಾಗಿದೆ. ತಾನಾಯಿತು ತನ್ನ ಪಾಡಿನ ಕೆಲಸವಾಯಿತು ಎನ್ನುವ ಮಟ್ಟಿಗೆ ಪರಿಸ್ಥಿತಿ ಬದಲಾಗಿ ಹೆತ್ತವರನ್ನೆ ಮಕ್ಕಳು ಅನಾಥಾಶ್ರಮಕ್ಕೆ ನೂಕುವಷ್ಟು ಜನರ ಯೋಚನಾ ಲಹರಿ ಬದಲಾಗಿರುವುದು ವಿಪರ್ಯಾಸ.

ಜನರ ಚಿಂತನಾ ಶೈಲಿ ಎಷ್ಟರ ಮಟ್ಟಿಗೆ ಮಾನವೀಯತೆಯ ದೃಷ್ಟಿಯಿಂದ ಮಾರು ದೂರ ಹೋಗಿ ನಿಂತಿದೆ ಎಂಬುದನ್ನು ಪುಷ್ಟೀಕರಿಸುವ ನಿದರ್ಶನದಂತೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಸೊಸೆಯೊಬ್ಬಳ ಬೇಡಿಕೆ ಕೇಳಿದ ಕುಟುಂಬಸ್ಥರು ದಂಗಾಗಿದ್ದು, ಆ ಬೇಡಿಕೆ ಕೇಳಿದವರಿಗೆ ಅಚ್ಚರಿ ಮೂಡಿಸಿದೆ.

ಅತ್ತೆ , ಮಾವ ಹಾಗೂ ಪತಿಯನ್ನು ಮನೆಯೊಳಗೆ ಸೇರಿಸಲು ಸೊಸೆಯೊಬ್ಬಳು 25 ಲಕ್ಷ ರೂಪಾಯಿ ಹಣವನ್ನು ಕೊಡುವಂತೆ ಡಿಮ್ಯಾಂಡ್ ಮಾಡಿದ ಘಟನೆ ಬಿಹಾರದ ಭಾಗಲ್ಪುರದಲ್ಲಿ ನಡೆದಿದೆ.

ಭಾಗಲ್ಪುರದ ಗೋಪಿನಾಥ್​ ಅನಾರೋಗ್ಯದ ನಿಮಿತ್ತ ಸೊಸೆಯನ್ನು ಮನೆಯಲ್ಲಿ ಬಿಟ್ಟು ಕುಟುಂಬದವರೊಂದಿಗೆ ದೆಹಲಿ ಆಸ್ಪತ್ರೆಗೆ ತೆರಳಿದ್ದಾರೆ. ಗೋಪಿನಾಥ್ ಚಿಕಿತ್ಸೆ ಮುಗಿಸಿ ಮನೆಗೆ ಮರಳಿದಾಗ ಇಡೀ ಕುಟುಂಬಕ್ಕೆ ಸೊಸೆ ಸೋನಿ ಕುಮಾರಿ ಶಾಕ್​ ನೀಡಿದ್ದಾರೆ.

ಸಾಮಾನ್ಯವಾಗಿ ಹೊರಗಿನವರ ಬಳಿ ಹಣ ವಸೂಲಿ ಮಾಡಲು ನಾನಾ ಟೆಕ್ನಿಕ್ ಬಳಸುವುದು ಹೆಚ್ಚು. ಆದರೆ ಇಲ್ಲಿ ಸೊಸೆ ತನ್ನ ಮನೆಯವರನ್ನೇ ಒಳಗಡೆ ಸೇರಿಸಲು 25 ಲಕ್ಷದ ಬೃಹತ್ ಮೊತ್ತವನ್ನು ಡಿಮ್ಯಾಂಡ್ ಮಾಡಿ , ಅಷ್ಟು ಹಣ ಕೊಟ್ಟರೆ ಮಾತ್ರ ಬಾಗಿಲನ್ನು ತೆಗೆಯುವೆ ಎಂದು ಬೇಡಿಕೆಯನ್ನು ಇಟ್ಟು ಅತ್ತೆಗೊಂದು ಕಾಲವಿದ್ದರೆ, ಸೊಸೆಗೊಂದು ಕಾಲ ಎಂಬುದನ್ನು ನಿರೂಪಿಸಿದ್ದಾರೆ.

ಸೊಸೆಯ ಬೇಡಿಕೆಯನ್ನು ಕೇಳಿ ಕುಟುಂಬಸ್ಥರು ನಿಜಕ್ಕೂ ಶಾಕ್​​ ಆಗಿದ್ದರೆ, ಬಾಗಿಲನ್ನು ಮುರಿದು ಮನೆ ಒಳಗಡೆ ಅಡಿ ಇಟ್ಟ ಕುಟುಂಬಕ್ಕೆ ಮತ್ತೊಂದು ಅಚ್ಚರಿ ಎದುರಾಗಿದೆ.

ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ಎರಡು ಲಕ್ಷ ರೂಪಾಯಿ ಹಣವನ್ನು ದೋಚಿ ಸೊಸೆ ಪರಾರಿಯಾಗಿದ್ದಾಳೆ.

ಸದ್ಯ ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದ್ದು, ಸೊಸೆಯ ವರ್ತನೆಯನ್ನು ಕಂಡು ಟೀಕೆಗಳ ಮಹಾಪೂರವೇ ಹರಿದಾಡುತ್ತಿದೆ.

Leave A Reply