ಜಾಕೆಟ್ ನಲ್ಲಿ ಇಯರ್ ಬಡ್ಸ್ ಪತ್ತೆ | ಭಾರತದ ಚೆಸ್ ಪಟು ವಿಶ್ವಚಾಂಪಿಯನ್ ಶಿಪ್ ನಿಂದ ಔಟ್!!!

ಅಂತಾರಾಷ್ಟ್ರೀಯ ಕ್ರೀಡಾಕೂಟದಲ್ಲಿ ಶರತ್ತು ಬದ್ಧ ನಿಯಮಗಳು ಇದ್ದೇ ಇರುತ್ತವೆ. ನಿಯಮ ಉಲ್ಲಂಘನೆ ಮಾಡಿದವರನ್ನು ಕೂಡಲೇ ಆಟದಿಂದ ಹೊರಗಿಡುತ್ತಾರೆ. ಆದ್ದರಿಂದ ನಮ್ಮ ದೇಶವನ್ನು ಪ್ರತಿನಿಧಿಸಿ ಆಟ ಆಡುವವರು ಅಷ್ಟೇ ಜವಾಬ್ದಾರಿಯಿಂದ ಆಟ ಆಡಬೇಕಾಗುತ್ತದೆ.

ಹಾಗೆಯೇ ವಿಶ್ವ ಚೆಸ್ ಫೆಡರೇಶನ್ ಪ್ರಕಾರ ಯಾವುದೇ ಆಟಗಾರ ನಿಯಮ ಉಲ್ಲಂಘನೆ ಮಾಡಿದರೆ, ಆತನನ್ನು ಕೂಡಲೇ ಆಟದಿಂದ ಹೊರಗಿಡಲಾಗುತ್ತದೆ ಅಥವಾ ಶಿಕ್ಷೆಯಾಗಿ ಆ ಆಟಗಾರ ಇಡೀ ಪಂದ್ಯಾವಳಿಯಿಂದಲೇ ಹೊರಗುಳಿಯಬೇಕಾಗುತ್ತದೆ ಎಂಬ ನಿಯಮವಿದೆ.

ಪ್ರಸ್ತುತ ಭಾರತದ ಮಹಿಳಾ ಗ್ರ್ಯಾಂಡ್‌ಮಾಸ್ಟರ್ ಮತ್ತು 7 ನೇ ಶ್ರೇಯಾಂಕದ ಪ್ರಿಯಾಂಕಾ ನುಟಕ್ಕಿ ಅವರನ್ನು ಇಟಲಿಯಲ್ಲಿ ನಡೆಯುತ್ತಿರುವ ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಿಂದ ಹೊರಹಾಕಲಾಗಿದೆ.

ಪ್ರಿಯಾಂಕಾ ಧರಿಸಿದ್ದ ಜಾಕೆಟ್‌ನ ಜೇಬಿನಲ್ಲಿ ಇಯರ್‌ಬಡ್ಸ್ ಪತ್ತೆಯಾಗಿದ್ದು, ಈ ಕಾರಣದಿಂದಾಗಿ ಅವರನ್ನು ವಿಶ್ವ ಚೆಸ್ ಚಾಂಪಿಯನ್‌ಶಿಪ್‌ನಿಂದ ಹೊರಗಿಟ್ಟಿರುವುದಾಗಿ ವಿಶ್ವ ಚೆಸ್ ಫೆಡರೇಶನ್ ಖಚಿತಪಡಿಸಿದೆ.

ಪಂದ್ಯಾವಳಿಯಲ್ಲಿ ನಿಷೇಧಿತ ವಸ್ತುಗಳಲ್ಲಿ ಇಯರ್‌ಬಡ್ಸ್ ಕೂಡ ಒಂದಾಗಿದ್ದು, ಪ್ರಿಯಾಂಕಾ ಜಾಕೆಟ್​ನಲ್ಲಿ ಇದು ಪತ್ತೆಯಾದ ಬಳಿಕ ಅವರನ್ನು ಚಾಂಪಿಯನ್‌ಶಿಪ್‌ನಿಂದ ಹೊರಗಿಡುವ ನಿರ್ಧಾರ ಕೈಗೊಳ್ಳಲಾಗಿದೆ.
ಆದರೆ ಉದ್ದೇಶ ಪೂರಿತವಾಗಿಯೇ ಪ್ರಿಯಾಂಕ ಈ ಇಯರ್‌ಬಡ್ಸ್​ಗಳನ್ನು ತಮ್ಮ ಜಾಕೆಟ್​ನಲ್ಲಿ ಇರಿಸಿಕೊಂಡಿದ್ದರು ಎಂಬುದಕ್ಕೆ ಯಾವುದೇ ಸಾಕ್ಷಿ ದೊರೆತಿಲ್ಲ ಎಂದು ವಿಶ್ವ ಚೆಸ್ ಫೆಡರೇಶನ್ ಹೇಳಿಕೆಯನ್ನು ಪ್ರಕಟಿಸುವ ಮೂಲಕ ಸ್ಪಷ್ಟಪಡಿಸಿದೆ.
ಹಾಗೆಯೇ ಪ್ರಿಯಾಂಕ ಅವರ ಅಜಾಗರೂಕತೆಯಿಂದ ಇಯರ್‌ಬಡ್ಸ್​ಗಳು ಜಾಕೆಟ್​ನಲ್ಲಿ ಉಳಿದುಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

ಈಗ ಈ ಚಾಂಪಿಯನ್‌ಶಿಪ್‌ನಿಂದ ಪ್ರಿಯಾಂಕಾ ನಿರ್ಗಮಿಸಿರುವುದು ಅವರ ಪ್ರತಿಸ್ಪರ್ಧಿಗೆ ಪ್ರಯೋಜನವಾಗಿದೆ. ವಾಸ್ತವವಾಗಿ, ಆರನೇ ಸುತ್ತಿನಲ್ಲಿ ಪ್ರಿಯಾಂಕ ಗಳಿಸಿದ ಅಂಕಗಳನ್ನು ಅವರ ಪ್ರತಿಸ್ಪರ್ಧಿ ಗೋವಾಹರ್ ಬೆದುಲೇವಾಗೆ ವರ್ಗಾಯಿಸಲಾಗಿದೆ.

ವಿಶ್ವ ಚೆಸ್ ಫೆಡರೇಶನ್​ನ ನಿರ್ಧಾರವನ್ನು ಮರುಪರಿಶೀಲಿಸುವಂತೆ ಭಾರತ ತಂಡ ಪಂದ್ಯಾವಳಿಯ ಮೇಲ್ಮನವಿ ಸಮಿತಿಯ ಮೊರೆ ಹೋಗಿತ್ತು. ಆದರೆ ಮೇಲ್ಮನವಿ ಸಮಿತಿ ಕೂಡ ವಿಶ್ವ ಚೆಸ್ ಫೆಡರೇಶನ್ ನಿರ್ಧಾರವನ್ನು ಎತ್ತಿಹಿಡಿದಿದೆ. ಈ ಟೂರ್ನಿಯಲ್ಲಿ ಆಡಿದ 5 ಸುತ್ತುಗಳಲ್ಲಿ ಪ್ರಿಯಾಂಕ 3 ಜಯ ಹಾಗೂ 2 ಡ್ರಾ ಸಾಧಿಸಿದ್ದರು.

ಫೇರ್‌ಪ್ಲೇ ನೀತಿಗಳ ಉಲ್ಲಂಘನೆ ಅಂದರೆ ಪಂದ್ಯಾವಳಿ ಸಮಯದಲ್ಲಿ ಇಯರ್‌ಬಡ್ಸ್​ಗಳನ್ನು ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹಾಗೆಯೇ ಆಟದ ಸಮಯದಲ್ಲಿ ಇಯರ್‌ಬಡ್ಸ್​ಗಳಂತಹ ಸಾಧನಗಳನ್ನು ಆಟಗಾರರು ತಮ್ಮ ಜೊತೆ ಒಯ್ಯುವುದು ಫೇರ್‌ಪ್ಲೇ ನೀತಿಗಳ ಉಲ್ಲಂಘನೆಯಾಗಿದೆ ಎಂದು ವರದಿ ಆಗಿದೆ.

Leave A Reply

Your email address will not be published.