Sprouts : ಎನರ್ಜಿಗೆ ಮೊಳಕೆ ಕಾಳು ತಿಂದರೆ ಬೆಸ್ಟ್!!!
ಆರೋಗ್ಯ ಕಾಪಾಡಿಕೊಳ್ಳಲು ನಮಗೆ ಒಳ್ಳೆಯ ಆಹಾರದ ಪೂರೈಕೆಯ ಅಗತ್ಯ ಇದೆ. ಹಾಗೆಯೇ ಆಹಾರಗಳಲ್ಲಿ ಯಾವ ಆಹಾರ ಉತ್ತಮ ಅನ್ನೋದು ಸಹ ನಮಗೆ ತಿಳಿದರೆ ನಮ್ಮ ಆರೋಗ್ಯ ಸಮಾನತೆಯನ್ನು ಕಾಪಾಡಿಕೊಳ್ಳಬಹುದು. ಅಂದರೆ ತರಕಾರಿ, ಹಣ್ಣು ಹಂಪಲು, ಮಾಂಸ, ಹಾಲು, ಮೊಟ್ಟೆ, ಸೊಪ್ಪು, ಬೇಳೆ ಕಾಳು ಹೀಗೆ ಹಲವು ಬಗೆಯ ಆಹಾರಗಳು ಇವೆ. ಅವುಗಳಲ್ಲಿ ನಾನಾ ರೀತಿಯ ಬೇಳೆ-ಕಾಳುಗಳಿಗೆ ಮೊದಲ ಸ್ಥಾನ ಇದೆ. ಹಾಗೆಯೇ ಬೇಳೆ-ಕಾಳುಗಳ ಬಳಕೆಯ ವಿಧಾನಗಳಲ್ಲೂ ನಾನಾ ರೀತಿ ಇವೆ .
ಮೊಳಗೆ ಕಾಳುಗಳು ಹಲವಾರು ಇವೆ ಅಂದರೆ ಹೆಸರು ಕಾಳು, ಹುರುಳಿ ಕಾಳು, ಕಡಲೆ ಕಾಳು, ಅಲಸಂಡೆ ಕಾಳು- ಹೀಗೆ ಹಲವು ರೀತಿಯ ಕಾಳುಗಳ ಮೊಳಕೆ ಬರಿಸಲಾಗುತ್ತದೆ. ಮೊಳಕೆ ಕಾಳುಗಳಿಂದ ಆರೋಗ್ಯಕ್ಕಾಗುವ ಲಾಭದ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.
ಆದರೆ ಬೇಳೆ ಕಾಳುಗಳನ್ನು ಅಡುಗೆಗೆ ನೇರವಾಗಿ ಬಳಸುವುದು ಮಾತ್ರವಲ್ಲದೆ, ಅವುಗಳನ್ನು ನೆನೆಸಿ ಮೊಳಕೆ ಬರಿಸಿ- ಹಸಿಯಾಗಿ ಮತ್ತು ಬೇಯಿಸಿ- ಎರಡೂ ರೀತಿಗಳಲ್ಲಿ ಉಪಯೋಗಿಸಲಾಗುತ್ತದೆ.
ಬೇಳೆ ಕಾಳುಗಳನ್ನು ಚೆನ್ನಾಗಿ ತೊಳೆದು ಶುದ್ಧ ಬಟ್ಟೆಯಲ್ಲಿ ನೀರು ಸಿಂಪಡಿಸಿ ಒಂದು ಅಥವಾ 2ದಿವಸ ಇಟ್ಟಾಗ ಬೇಳೆ ಕಾಳುಗಳು ಚೆನ್ನಾಗಿ ಮೊಳಕೆ ಬರುತ್ತವೆ. ನಂತರ ಹಸಿಯಾಗಿ ಅಥವಾ ಬೇಯಿಸಿ ಸಹ ತಿನ್ನಬಹುದಾಗಿದೆ.
ನೆನೆದು, ಉಬ್ಬಿ, ಮೊಳಕೆಯೊಡೆದು ಹಸಿರು-ಬಿಳಿ ಬಣ್ಣಗಳಲ್ಲಿ ಗೋಚರಿಸುವ ಹೆಸರು ಕಾಳುಗಳು ಪ್ರೊಟೀನ್ ತುಂಬಿರುವ ಆಹಾರ ಇದು. ಸಿ, ಇ ಮತ್ತು ಕೆ ವಿಟಮಿನ್‌ಗಳ ಆಗರವಾಗಿರುವ ಇವು, ನಿಜವಾಗಲೂ ಹಸಿಯಾಗಿ ತಿನ್ನಲೂ ಸಹ ರುಚಿಸುತ್ತವೆ. ಜೊತೆಗೆ ನೂರು ಗ್ರಾಂ ಹೆಸರು ಕಾಳಿನಲ್ಲಿ ಶೇ. 28 ರಷ್ಟು ಪ್ರೊಟೀನ್ ಇರುತ್ತದೆ. ಅಲ್ಲದೆ ಕಾರ್ಬೊಹೈಡ್ರೇಟ್, ಫೋಲೇಟ್‌ಗಳು, ಜಿಂಕ್, ಮೆಗ್ನೀಶಿಯಂ, ಪೊಟಾಶಿಯಂ ಇರುವ ಈ ಆಹಾರದಲ್ಲಿ ಕೊಬ್ಬಿನಂಶ ಇರುವುದಿಲ್ಲ.
ಮೊಳಕೆ ಕಡಲೆ ಕಾಳಿನಲ್ಲೂ ಅತಿ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್ ಲಭ್ಯವಿದೆ. ಹೆಚ್ಚಿನ ಪ್ರಮಾಣದಲ್ಲಿ ವಿಟಮಿನ್ ಎ ಹೊಂದಿರುವ ಈ ಕಾಳುಗಳಲ್ಲಿ ಶೇ. 20ರಷ್ಟು ಸಾರಜನಕ ಇದೆ. ಶರ್ಕರ ಪಿಷ್ಟಾದಿಗಳಿವೆ. ಕಡಲೆಯಲ್ಲಿ ಕ್ಯಾಲ್ಸಿಯಂ, ಕಬ್ಬಿಣ ಅಂಶ ದೊರೆಯುತ್ತದೆ. ಪೊಟಾಶಿಯಂ ಮತ್ತು ಮೆಗ್ನೀಶಿಯಂ ಅಂಶಗಳೂ ಸಹ ದೇಹಕ್ಕೆ ದೊರೆಯುತ್ತವೆ.
ಮೊಳಕೆ ಅಲಸಂಡೆ ಕಾಳು :
ಇದು ಪ್ರೊಟೀನ್ ಪ್ಯಾಕ್ ಇದ್ದಂತೆ. ನೂರು ಗ್ರಾಂ ಅಲಸಂಡೆ ಯಲ್ಲಿ ಶೇ. 25ರಷ್ಟು ಪ್ರೊಟೀನ್ ಮತ್ತು ಇದರ ಎರಡು ಪಟ್ಟು ಕಾರ್ಬೊಹೈಡ್ರೇಟ್ ದೊರೆಯುತ್ತದೆ. ಜೊತೆಗೆ, ನಾರು, ಕಬ್ಬಿಣ, ಮೆಗ್ನೀಶಿಯಂ, ಕ್ಯಾಲ್ಸಿಯಂ ಮತ್ತು ರಂಜಕ, ವಿಟಮಿನ್ ಬಿ ಹಾಗೂ ಥಿಯಾಮಿನ್ ಅಂಶಗಳನ್ನು ಈ ಕಾಳುಗಳು ಹೊಂದಿವೆ.
ಮೊಳಕೆ ಹುರುಳಿ ಕಾಳು:
ಪ್ರೊಟೀನ್ ಸಮೃದ್ಧವಾಗಿರುವ ಆಹಾರ ಆಗಿದೆ. ಇದು ಸತ್ವಯುತ ಆಹಾರ ಮಾತ್ರವಲ್ಲದೆ, ಹಲವಾರು ಔಷಧೀಯ ಗುಣಗಳನ್ನೂ ಹೊಂದಿದೆ. ನೂರು ಗ್ರಾಂ ಹುರುಳಿಯಲ್ಲಿ 22 ಗ್ರಾಂ ಪ್ರೊಟೀನ್, ಅಲ್ಲದೆ ಕಾರ್ಬೊಹೈಡ್ರೇಟ್, ನಾರು, ಕ್ಯಾಲ್ಶಿಯಂ ಮತ್ತು ಕಬ್ಬಿಣ ಅಂಶ ಹೊಂದಿದೆ. ಇದಲ್ಲದೆ ಕಿರು ಪೋಷಕಾಂಶಗಳನ್ನು ಸಾಕಷ್ಟು ಹೊಂದಿರುವ ಈ ಕಾಳನ್ನು ಶೀತ, ಕೆಮ್ಮು, ಬ್ರಾಂಕೈಟಿಸ್ ಮತ್ತು ಉಬ್ಬಸ ಮುಂತಾದ ಸಮಸ್ಯೆಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ.
ಆಹಾರ ತಜ್ಞರ ಪ್ರಕಾರ ದ್ವಿದಳ ಧಾನ್ಯಗಳು ಯಾವುದೇ ಇರಲಿ, ಮೊಳಕೆ ಬರಿಸಿ ಉಪಯೋಗಿಸುವುದು ಪ್ರಯೋಜನಕಾರಿ ಎನ್ನುತ್ತಾರೆ. ಮೊಳಕೆ ಬರಿಸುವುದರಿಂದ ಈ ಕಾಳುಗಳಲ್ಲಿರುವ ಫೀನಾಲ್‌ಗಳು ಮತ್ತು ಫೈಟೊನ್ಯೂಟ್ರಿಯೆಂಟ್ ಗಳ ಆಂಟಿ ಆಕ್ಸಿಡೆಂಟ್ ಚಟುವಟಿಕೆಯಲ್ಲಿ ಗಣನೀಯ ಹೆಚ್ಚಳ ಕಂಡುಬರುತ್ತದೆ. ಇದರಿಂದ ದೇಹಕ್ಕೆ ಹಾನಿ ಮಾಡುವ ಸ್ವತಂತ್ರ ರಾಡಿಕಲ್‌ಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ಬಂಧಿಸಲು ಸಾಧ್ಯವಿದೆ.
ಕೆಲವೊಂದು ಬಾರಿ ಕೆಲವು ಕಾಳುಗಳು ದೇಹಕ್ಕೆ ಒಗ್ಗದೆ ಇರಬಹುದು. ಯಾವ ಕಾಳಿನಿಂದ ಸಮಸ್ಯೆ ಉಂಟಾಗುತ್ತಿದೆ ಎಂಬ ಬಗ್ಗೆ ಗಮನ ಬೇಕಾಗುತ್ತದೆ. ಕೆಲವೊಮ್ಮೆ ಮೊಳಕೆ ಕಾಳುಗಳ ಅತಿಯಾದ ಸೇವನೆಯಿಂದ ಮಲಬದ್ಧತೆ, ಅಜೀರ್ಣದಂಥ ಸಮಸ್ಯೆಗಳು ಬರಬಹುದು. ಹೊಟ್ಟೆ ಉಬ್ಬರಿಸಿದಂತಾಗಬಹುದು. ಆದ್ದರಿಂದ ಮೊಳಕೆ ಕಾಳುಗಳನ್ನು ಹಸಿಯಾಗಿ ಸೇವಿಸುವ ಬದಲು ಬೇಯಿಸಿ, ಉಳಿದೆಲ್ಲಾ ಆಹಾರ ಪದಾರ್ಥಗಳ ಜೊತೆಗೂ ಸೇವಿಸಬಹುದು.
ಮೊಳಕೆ ಕಾಳು ಸೇವಿಸಿ ಉತ್ತಮ ಅರೋಗ್ಯವನ್ನು ಸಹ ಕಾಪಾಡಿಕೊಳ್ಳಬಹುದಾಗಿದೆ.