ರಸ್ತೆಯಲ್ಲಿ ನಿಂತ ನೀರಲ್ಲೇ ಮೀನುನೂ ಹಿಡಿದ್ರು ಬಟ್ಟೇನೂ ಒಗೆದ್ರು | ಯಾರೀ ವ್ಯಕ್ತಿ? ಇವರ್ಯಾಕೆ ಹಿಂಗೇ?
ವ್ಯಕ್ತಿಯೊಬ್ಬರು ರಸ್ತೆಯಲ್ಲಿ ಮೀನು ಹಿಡಿಯುವುದರಿಂದ ಹಿಡಿದು ದೈನಂದಿನ ಕ್ರಿಯೆಯನ್ನು ರಸ್ತೆಯಲ್ಲಿ ಮಾಡುವಂತಹ ವೀಡಿಯೋ ವೈರಲ್ ಆಗಿದೆ. ಆದ್ರೆ, ಇದು ನೀವು ಅಂದುಕೊಂಡ ರೀತಿ ಆತ ಮನೆಯಿಲ್ಲದೇ ಇರೋ ಅಲೆಮಾರಿ ಅಂತೂ ಅಲ್ಲ, ಹುಚ್ಚನೂ ಅಲ್ಲ. ಆತನೊಬ್ಬ ಜನರಿಗಾಗಿ ಪ್ರತಿಭಟಿಸೋ ಮಹಾನುಭಾವ. ಆತನ ಕೆಲಸದಿಂದಾದರೂ ಅಧಿಕಾರಿಗಳು ಕಣ್ ತೆರೆಯಲಿ ಎಂಬುದೇ ಉದ್ದೇಶ.
ಕರ್ನಾಟಕ ತಮಿಳುನಾಡು ನಡುವಿನ ರಾಷ್ಟ್ರೀಯ ಹೆದ್ದಾರಿ ಚಾಮರಾಜನಗರ ತಾಲೂಕು ಕೋಳಿಪಾಳ್ಯದ ಬಳಿ ಈ ಘಟನೆ ನಡೆದಿದ್ದು, ಸರ್ಕಾರದ ಅವ್ಯವಸ್ಥೆಯಿಂದ ಬೇಸತ್ತ ಗ್ರಾಮಸ್ಥರೊಬ್ಬರು ರಾಷ್ಟ್ರೀಯ ಹೆದ್ದಾರಿಯಲ್ಲೇ ಮೀನು ಹಿಡಿದು, ಬಟ್ಟೆ ಒಗೆದಿದ್ದಾರೆ.
ರಸ್ತೆಯಲ್ಲಿ ನೀರು ನಿಂತು ಕೆರೆಯಂತಾಗಿದೆ. ಇದರಿಂದ ಅಪಘಾತಗಳು ನಡೆದರೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮಾತ್ರ ಗಮನ ಹರಿಸಲೇ ಇಲ್ಲ. ಇವರ ನಿರ್ಲಕ್ಷ್ಯದಿಂದ ಬೇಸತ್ತ ಕೋಳಿಪಾಳ್ಯ ನಿವಾಸಿಗಳು ಈ ರೀತಿಯ ಪ್ರತಿಭಟನೆಗೆ ನಿಂತಿದ್ದಾರೆ. ನಿಂತ ನೀರಿನಲ್ಲಿ ಮೀನು ಹಿಡಿದು, ಬಟ್ಟೆ ಒಗೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರಿಂದಾದರೂ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಾರೋ ಎಂದು ನಿರೀಕ್ಷೆಯಲ್ಲಿ ಅಲ್ಲಿನ ಜನರಿದ್ದಾರೆ.