ಕೂಡಿ ಬಂದ ಕಂಕಣ ಭಾಗ್ಯ | ಪಿಎಂ ಸಿಎಂರನ್ನು ಮದುವೆಗೆ ಆಹ್ವಾನಿಸಲಿರುವ ಮೂರಡಿ ಎತ್ತರದ ಯುವಕ |
ಮೂರು ಅಡಿ ಎರಡು ಇಂಚು ಎತ್ತರದ ಅಜೀಂ ಮನ್ಸೂರಿಗೆ ಕೊನೆಗೂ ಮದುವೆ ಯೋಗ ಕೂಡಿ ಬಂದಿದ್ದು, ಎರಡು ಅಡಿ ಎತ್ತರದ ಯುವತಿಯೊಂದಿಗೆ ಅಜೀಂ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ಈ ಹಿಂದೆ ಕುಬ್ಜ ಅಜೀಂ ತನಗೆ ಮದುವೆಯಾಗಲು ವಧುವನ್ನು ಹುಡುಕಿಕೊಡಿ ಎಂದು ಉತ್ತರಪ್ರದೇಶದ ಪೊಲೀಸರಲ್ಲಿ ಮನವಿ ಮಾಡಿದ್ದ ವಿಚಾರ ಎಲ್ಲರಿಗೂ ನೆನಪಿರಬಹುದು.
ಕೊನೆಗೂ ಅಜೀಂ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ನವೆಂಬರ್ 7 ರಂದು ಅದ್ಧೂರಿಯಾಗಿ ಬುಶ್ರಾ ಅವರನ್ನು ವರಿಸಲಿದ್ದಾರೆ.
ಶಾಮ್ಲಿ ಜಿಲ್ಲೆಯ 27 ವರ್ಷದ ಅಜೀಂ ಮನ್ಸೂರಿ ಕೇವಲ 3 ಅಡಿ 2 ಇಂಚು ಎತ್ತರವಿರುವ ಕಾರಣದಿಂದ ಮದುವೆಯಾಗಲೂ ಯಾರು ಒಪ್ಪದೇ ಇದ್ದಾಗ ನೊಂದ ಯುವಕ ಸಹಾಯಕ್ಕಾಗಿ ಮಹಿಳಾ ಪೊಲೀಸ್ ಠಾಣೆಯ ಮೊರೆ ಹೊಕ್ಕಿದ್ದು ಮಾತ್ರವಲ್ಲ ಮಾಧ್ಯಮಗಳಲ್ಲಿಯೂ ಕೂಡ ವಧುವಿಗಾಗಿ ಮನವಿ ಮಾಡಿ ದೊಡ್ದ ಮಟ್ಟದಲ್ಲಿ ಪ್ರಚಾರ ಗಿಟ್ಟಿಸಿಕೊಂಡಿದ್ದರು.
6 ಮಂದಿ ಸಹೋದರರಲ್ಲಿ ಒಬ್ಬನಾದ ಅಜೀಂ ಮೊದಲಿನಿಂದಲೂ ಗಿಡ್ಡವಾಗಿದ್ದು, ಇವರನ್ನು ವರಿಸಲು ಯಾರು ಮುಂದಾಗದೆ ಇದ್ದುದರಿಂದ, ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಸೇರಿ, ಉನ್ನತಾಧಿಕಾರಿಗಳಿಗೂ ಪತ್ರ ಮುಖೇನ ಮನವಿ ಕೂಡ ಮಾಡಿದ್ದರು.
ಕೈರಾನಾದಲ್ಲಿ ಅಜೀಂ ಮನ್ಸೂರ್ ಅಂಗಡಿಯನ್ನು ಇಟ್ಟುಕೊಂಡಿದ್ದು, ಮುಂದಿನ ರಂಜಾನ್ ಒಳಗೆ ಮದುವೆಯಾಗಬೇಕೆಂಬ ಅಭಿಲಾಷೆಯನ್ನು ಕೂಡ ಹೊಂದಿದ್ದರು. ಮದುವೆಯಾದರೆ ಪತ್ನಿಯನ್ನು ಹನಿಮೂನ್ಗಾಗಿ ಗೋವಾ, ಕುಲ್ಲು-ಮನಾಲಿ, ಶಿಮ್ಲಾಗೆ ಕರೆದುಕೊಂಡು ಹೋಗುವುದಾಗಿ ಈ ಹಿಂದೆ ತಿಳಿಸಿದ್ದರು.
ಇವರ ಕತೆ ಕೇಳಿದ ಮಹಿಳಾ ಪೊಲೀಸ್ ಠಾಣೆಯ ಅಧಿಕಾರಿಗಳು ವಧು ಅನ್ವೇಷಣೆಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು. ಕಳೆದ ಕೆಲವು ತಿಂಗಳುಗಳಿಂದ ಅಜೀಂ ತನಗೆ ಸೂಕ್ತ ಸಂಗಾತಿ ಸಿಗದ ಕಾರಣ ತೀವ್ರ ಬೇಸರಗೊಂಡಿದ್ದರು.
ಆದರೆ, ಅಜೀಂ ಅವರಿಗೆ ಮದುವೆಗೆ ಇದೀಗ ಶುಭ ಮುಹೂರ್ತ ಕೂಡಿ ಬಂದಿದ್ದು, ಅಜೀಂ ಮದುವೆಯ ತಯಾರಿಯಲ್ಲಿ ನಿರತರಾಗಿದ್ದಾರೆ.
ತಮ್ಮ ಕನಸು ಈಗ ನನಸಾಗುತ್ತಿರುವುದಕ್ಕೆ ಅತೀವ ಸಂತಸ ವ್ಯಕ್ತ ಪಡಿಸಿರುವ ಅಜೀಂ ತನ್ನ ಮದುವೆಗೆ ಪ್ರಭಾವಿ ವ್ಯಕ್ತಿಗಳು ಘಟಾನುಘಟಿ ನಾಯಕರಿಗೂ ಆಹ್ವಾನ ನೀಡುವ ಯೋಜನೆಯಲ್ಲಿ ಇದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕರೆಸಿ ಅದ್ದೂರಿ ಸಮಾರಂಭದಲ್ಲಿ ಸತಿ -ಪತಿ ಗಳಾಗುವ ತಯಾರಿಯಲ್ಲಿದ್ದಾರೆ.
ಇನ್ನು ವಿಶೇಷವಾದ ಶೆರ್ವಾನಿ ಮತ್ತು ತ್ರಿಪೀಸ್ ಸೂಟ್ ಅನ್ನು ಸ್ವತಃ ಅವರೇ ಹೊಲಿಯುತ್ತಿದ್ದಾರೆ. ಉಳಿದ ಸಿದ್ಧತೆಗಳನ್ನು ಅವರ ಕುಟುಂಬದವರು ನೋಡಿಕೊಳ್ಳುತ್ತಿದ್ದಾರೆ. ಈ ಮದುವೆಯ ಸಂತಸದ ನಡುವೆಯೂ ಮುಲಾಯಂ ಸಿಂಗ್ ಯಾದವ್ ನಿಧನರಾಗಿರುವುದರಿಂದ ವಿವಾಹ ಕಾರ್ಯಕ್ರಮಕ್ಕೆ ಅವರನ್ನು ಕೂಡ ಕರೆಸಬೇಕೆಂಬ ಅಭಿಲಾಷೆ ನೆರವೇರುತ್ತಿಲ್ಲ ಎಂಬ ಬೇಸರವನ್ನು ಕೂಡ ಅಜೀಂ ಹೊರ ಹಾಕಿದ್ದಾರೆ.