ಕಾಫಿನಾಡಿನಲ್ಲಿ ದಲಿತರ ಮೇಲಿನ ದೌರ್ಜನ್ಯ-ಗರ್ಭಪಾತ ಪ್ರಕರಣ!! ದಲಿತರ ಮನೆಯಲ್ಲಿ ಉಣ್ಣುವ ಫೋಟೋ ಹಂಚಿಕೊಳ್ಳುವ ರಾಜಕಾರಣಿಗಳು ಮೌನ ವಹಿಸಿದ್ಯಾಕೆ!?
ಚಿಕ್ಕಮಗಳೂರು: ಜಿಲ್ಲೆಯ ಬಾಳೆಹೊನ್ನೂರು ಠಾಣಾ ವ್ಯಾಪ್ತಿಯ ಕಾಫಿ ಎಸ್ಟೇಟ್ ಮಾಲೀಕನೊಬ್ಬ ಅಮಾಯಕ ದಲಿತ ಸಮುದಾಯದ ಗರ್ಭಿಣಿ ಸಹಿತ 13 ಮಂದಿಯ ಮೇಲೆ ದೌರ್ಜನ್ಯ ಎಸಗಿದ ಪ್ರಕರಣ ಬೆಳಕಿಗೆ ಬಂದು ಮೂರು ದಿನ ಕಳೆದರೂ ಇನ್ನೂ ಆರೋಪಿಗಳ ಬಂಧನವಾಗದ ಹಿನ್ನೆಲೆಯಲ್ಲಿ ದಲಿತಪರ ಸಂಘಟನೆಗಳು ಪ್ರತಿಭಟನೆಗೆ ಸಜ್ಜಾಗಿವೆ ಎನ್ನುವ ಮಾಹಿತಿಯೊಂದು ಮೂಲಗಳಿಂದ ತಿಳಿದುಬಂದಿದೆ.
ಇಲ್ಲಿನ ಕಾಫಿ ಎಸ್ಟೇಟ್ ಒಂದರ ಮಾಲೀಕ, ಬಿಜೆಪಿ ಮುಖಂಡನೆನ್ನಲಾದ ಜಗದೀಶ್ ಗೌಡ ಎಂಬಾತ ತನ್ನ ಮಗನೊಂದಿಗೆ ಸೇರಿಕೊಂಡು ದಲಿತ ಸಮುದಾಯದ ಮಹಿಳೆಯರು ಮಕ್ಕಳ ಸಹಿತ ಇತರರನ್ನು ಕೋಣೆಯಲ್ಲಿ ಕೂಡಿಹಾಕಿದ್ದು, ಬಳಿಕ ಎಲ್ಲರ ಮೊಬೈಲ್ ಕಿತ್ತುಕೊಂಡಿದ್ದಾನೆ ಎನ್ನಲಾಗಿದೆ. ಈ ವೇಳೆ ದೌರ್ಜನ್ಯಕ್ಕೊಳಗಾದವರಲ್ಲಿ ಓರ್ವ ಗರ್ಭಿಣಿ ಮಹಿಳೆಯೂ ಇದ್ದು, ಮೊಬೈಲ್ ಕೊಡಲು ನಿರಾಕರಿಸಿದಾಗ ಆಕೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರಲಾಗಿದೆ.
ಹಲ್ಲೆಯ ಸಹಿತ ಅವಾಚ್ಯ ಶಬ್ದಗಳಿಂದ ನಿಂದಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಗರ್ಭಿಣಿ ಮೇಲೆ ಹಲ್ಲೆ ನಡೆದು ಗರ್ಭಪಾತಕ್ಕೆ ಆರೋಪಿ ಜಗದೀಶ್ ಗೌಡ ಕಾರಣನಾಗಿದ್ದಾನೆ ಎಂದು ದೂರಲಾಗಿದೆ. ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿ ದಿನ ಕಳೆದರೂ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವ ಆರೋಪದ ಜೊತೆಗೆ ದಲಿತಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಶೀಘ್ರ ಆರೋಪಿಗಳ ಬಂಧನಕ್ಕೆ ಪಟ್ಟು ಹಿಡಿಯಲಾಗಿದೆ.
ಪ್ರಕರಣದ ಬಗ್ಗೆ ದೂರು ದಾಖಲಾದ ಬಾಳೆಹೊನ್ನೂರು ಠಾಣೆಯ ಪಿ.ಎಸ್.ಐ ಉಡಾಫೆಯ ಉತ್ತರಗಳನ್ನು ನೀಡುತ್ತಿದ್ದಾರೆ ಎನ್ನುವ ಗಂಭೀರ ಆರೋಪಗಳು ಕೇಳಿಬಂದಿದ್ದು, ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ ಎನ್ನುವ ಉತ್ತರಗಳಿಂದ ಕೆರಳಿದ ದಲಿತಪರ ಸಂಘಟನೆಗಳಲ್ಲಿ ಒಂದಾದ ಅಂಬೇಡ್ಕರ್ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಪಿ. ಸುಂದರ್ ಪಾಟಾಜೆ ಶೀಘ್ರ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳದೇ ಇದ್ದಲ್ಲಿ ಠಾಣೆಯ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ.