ಏರಿಕೆಯಾಗಲಿದೆ ಬಡ್ಡಿ ದರ ; ಸಾಲಗಾರರಿಗೆ ಬೀಳಲಿದೆಯೇ ದೊಡ್ಡ ಹೊಡೆತ?

ಆರ್‌ಬಿಐ ರೆಪೋ ದರವನ್ನು ಹೆಚ್ಚಳ ಮಾಡುತ್ತಲೇ ಬಂದಿದ್ದು, ಜನ ಸಾಮಾನ್ಯರಿಗೆ ಸಾಲದ ಬಡ್ಡಿ ಚಿಂತೆ ಹೆಚ್ಚಿಸಿದೆ. ಇದೀಗ ಮತ್ತೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (RBI) ಡಿಸೆಂಬರ್‌ನಲ್ಲಿ ಪ್ರಕಟಿಸಲಿರುವ ತನ್ನ ಹಣಕಾಸು ನೀತಿಯಲ್ಲಿ ಬಡ್ಡಿ ದರದಲ್ಲಿ 0.50% ಏರಿಕೆ ಮಾಡುವ ಸಾಧ್ಯತೆ ಇದೆ.

ಹಣದುಬ್ಬರ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ರೆಪೊ ದರ ಹೆಚ್ಚಳ ಮಾಡಲಿದೆ. ಇದರೊಂದಿಗೆ ರೆಪೊ ದರ ಆಧರಿತ ಎಲ್ಲ ಸಾಲಗಳ ಬಡ್ಡಿ ದರಗಳು ಕೂಡ ಮತ್ತೆ ಅರ್ಧ ಪರ್ಸೆಂಟ್‌ ತನಕ ಏರಿಕೆಯಾಗಲಿದೆ. ಹಣದುಬ್ಬರವು ಆರ್‌ಬಿಐ ಟಾರ್ಗೆಟ್‌ಗಿಂತ ಮೇಲಿರುವುದೇ ಈ ನಿರ್ಧಾರಕ್ಕೆ ಕಾರಣವಾಗಿದೆ.

ಆರ್‌ಬಿಐ ಪ್ರಕಾರ ಹಣದುಬ್ಬರವು 4%ಗಿಂತ 2% ಹೆಚ್ಚು ಅಥವಾ ಕಡಿಮೆ ಇದ್ದರೆ ಸುರಕ್ಷಿತ ಮಟ್ಟದಲ್ಲಿ ಇದೆ ಎಂದರ್ಥ. ಅಂದರೆ ಗರಿಷ್ಠ 6% ತನಕ ಇರಬಹುದು. ಸತತ 9 ತಿಂಗಳಿನಿಂದ ಹಣದುಬ್ಬರ ಆರ್‌ಬಿಐನ 2-6% ಮಟ್ಟಕ್ಕಿಂತ ಮೇಲಿದೆ. ಹಣದುಬ್ಬರ ನಿಯಂತ್ರಣ ನೀತಿ ಕುರಿತ ಚೌಕಟ್ಟಿನ ಪ್ರಕಾರ ಸತತ 9 ತಿಂಗಳಿನಿಂದ ಹಣದುಬ್ಬರವನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದರೆ, ಆಗ ಆರ್‌ಬಿಐ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಬೇಕಾಗುತ್ತದೆ. ಅದರಲ್ಲಿ ಬೆಲೆ ಏರಿಕೆ ನಿಯಂತ್ರಿಸಲು ಆಗದಿರುವುದಕ್ಕೆ ಕಾರಣಗಳನ್ನು ಹಾಗೂ ಪರಿಹಾರಗಳನ್ನು ಸೂಚಿಸಬೇಕಾಗುತ್ತದೆ.

ಆರ್‌ಬಿಐ ರೆಪೊ ದರ ಏರಿಕೆಯ ಪರಿಣಾಮ ಅದನ್ನು ಆಧರಿಸಿದ ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲ, ಕಾರ್ಪೊರೇಟ್‌ ಸಾಲಗಳ ಬಡ್ಡಿ ದರಗಳಲ್ಲಿ ಏರಿಕೆಯಾಗಲಿದೆ. ಇಎಂಐ ಹೊರೆ ಹೆಚ್ಚಲಿದೆ. ಠೇವಣಿದಾರರಿಗೆ ಕೂಡ ಅಲ್ಪ ಪ್ರಮಾಣದಲ್ಲಿ ಬಡ್ಡಿ ದರ ಏರಿಕೆಯ ಅನುಕೂಲ ಸಿಗಲಿದೆ.

ಅಲ್ಲದೆ, ಅಕ್ಟೋಬರ್‌ನಲ್ಲಿ ಅಕಾಲಿಕ ಮಳೆಯಾಗಿದ್ದು, ತರಕಾರಿಗಳು ಹಾನಿಗೀಡಾಗಿವೆ. ಇದು ತರಕಾರಿಗಳ ದರ ಏರಿಸಲಿವೆ. ಕಾರ್ಖಾನೆಗಳಲ್ಲಿ ಉತ್ಪಾದನೆ ಇಳಿಕೆಯಾಗಿರುವುದು, ಜಾಗತಿಕ ವಿದ್ಯಮಾನಗಳು ಆರ್‌ಬಿಐಗೆ ಮತ್ತಷ್ಟು ಸವಾಲುಗಳನ್ನೇ ಒಡ್ಡಿವೆ. ಆಹಾರ ವಸ್ತುಗಳ ದರ ಜಿಗಿತದೊಂದಿಗೆ, ರಿಟೇಲ್‌ ಹಣದುಬ್ಬರವು ಸೆಪ್ಟೆಂಬರ್‌ನಲ್ಲಿ 7.4%ಕ್ಕೆ ಏರಿಕೆಯಾಗಿದೆ. ಇದು ಕಳೆದ ಐದು ತಿಂಗಳಿನಲ್ಲಿಯೇ ಗರಿಷ್ಠ ಮಟ್ಟವಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಆರ್‌ಬಿಐಗೆ ರೆಪೊ ದರವನ್ನು ಏರಿಸದೆ ವಿಧಿ ಇಲ್ಲ ಎಂಬಂತಾಗಿದೆ.

Leave A Reply

Your email address will not be published.