ಮದುವೆ ಬಗ್ಗೆ ಕೇಳಿದ ಪ್ರಶ್ನೆ | ವಿದ್ಯಾರ್ಥಿ/ನಿ ಬರೆದ ಉತ್ತರಕ್ಕೆ ಟೀಚರ್ ಕೊಟ್ರು ಸೊನ್ನೆ ಮಾರ್ಕ್ |
ಶಾಲೆ, ಓದು ಇವೆಲ್ಲವೂ ಯಾಕಾದರೂ ಬಂತು?? ಸುಮ್ಮನೆ ಹಾಯಾಗಿ ಮನೆಯಲ್ಲಿ ಆಟ ಆಡಿಕೊಂಡು ಇರಲು ಕೂಡ ಬಿಡುವುದಿಲ್ಲ!! ಮನೆಯವರು ಓದು.. ಓದು ಎಂದು ಬೈದರೆ, ಶಾಲೆಯಲ್ಲಿ ಗುರುಗಳ ಕಾಟ.. ಒಮ್ಮೆ ರಜೆ ಸಿಕ್ಕರೆ ಸಾಕು ಎಂದು ಜಾತಕ ಪಕ್ಷಿಯಂತೆ ಬೈದುಕೊಂಡು ಕಾಯುವ ಅನೇಕ ಮಕ್ಕಳು ಹೀಗೆ ಮನದಲ್ಲಿ ಅಂದು ಕೊಳ್ಳುವುದು ಸಾಮಾನ್ಯ.
ಕೆಲವರಿಗೆ ಓದು ಎಂದರೆ ಒಂದು ರೀತಿಯ ಅಲರ್ಜಿ, ಸೋಮಾರಿತನ ಲಾಸ್ಯವಾಡಿದಾಗ ಓದಿನ ಕಡೆ ಗಮನವೇ ಹರಿಯುವುದಿಲ್ಲ. ಈಗಂತೂ ಮೊಬೈಲ್ ಎಂಬ ಮಾಯಾವಿ ಬಂದ ಮೇಲಂತೂ ಮೊಬೈಲ್ ಒಂದೇ ಪ್ರಪಂಚದಂತಾಗಿ ಓದಿನ ವಿಚಾರದಲ್ಲಿ ಮೆದುಳು ತುಕ್ಕು ಹಿಡಿದ ರೀತಿಯಾಗಿ ಬಿಟ್ಟಿದೆ.
ಪರೀಕ್ಷೆ ಎಂದರೆ ಸಾಕು ಮಕ್ಕಳು ಹೊಸ ಹೊಸ ನಾಟಕಗಳನ್ನು ಮಾಡುವುದು ಸಹಜ. ಸಮಾಜ ಅಧ್ಯಯನ ಪರೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ ವಿದ್ಯಾರ್ಥಿ ಬರೆದ ಉತ್ತರಕ್ಕೆ ಶಿಕ್ಷಕರು ಸೊನ್ನೆ ಕೊಟ್ಟಿದ್ದಾರೆ. ಅರೇ!!! ಇದೇಕೆ ಹೀಗೆ ಮಾಡಿದ್ದಾರೆ ಎಂದು ಆಶ್ಚರ್ಯವಾಗಬಹುದು.
ಹತ್ತು ಅಂಕದ ಸಮಾಜ ಅಧ್ಯಯನ ಪರೀಕ್ಷೆಯಲ್ಲಿ ಕೇಳಿರುವ ಪ್ರಶ್ನೆಗೆ ಸಂಕ್ಷಿಪ್ತವಾಗಿ ಉತ್ತರ ಬರೆಯಬೇಕಾಗಿತ್ತು. ಎಲ್ಲ ವಿದ್ಯಾರ್ಥಿಗಳು ಅವರವರ ತಿಳಿವಳಿಕೆಗೆ ಅನುಸಾರ ಉತ್ತರ ಬರೆದಿದ್ದಾರೆ. ಉತ್ತರ ಬರೆದ ಅನುಸಾರ ಮಕ್ಕಳು ಉತ್ತರಗಳಿಗೆ ಅಂಕಗಳನ್ನೂ ಪಡೆದುಕೊಂಡಿದ್ದಾರೆ.
ಆದರೆ ಒಬ್ಬ ವಿದ್ಯಾರ್ಥಿ ಮಾತ್ರ ಹತ್ತು ಅಂಕಕ್ಕೆ ಸೊನ್ನೆ ಗಳಿಸಿದ್ದಾರೆ. ಆ ಉತ್ತರ ಪತ್ರಿಕೆ ಇದೀಗ ವೈರಲ್ ಆಗುತ್ತಿದ್ದು, ನೆಟ್ಟಿಗರೆಲ್ಲ ಬಿದ್ದುಬಿದ್ದು ನಗುತ್ತಿದ್ದಾರೆ. ಆದರೆ ಹೀಗೆ ನಗಲು ಕಾರಣವೇನು ಎಂದು ಯೋಚಿಸುತ್ತಿದ್ದೀರಾ??
“ನೀನೀಗ ದೊಡ್ಡ ಹೆಣ್ಣುಮಗಳು, ನಿನ್ನನ್ನು ಪೋಷಿಸಲು ನಮಗೆ ಆಗದು, ಹಾಗಾಗಿ ನೀನೇ ನಿನ್ನ ಹುಡುಗನನ್ನು ಹುಡುಕಿಕೋ ಎಂದು ಹುಡುಗಿಯ ಅಪ್ಪ-ಅಮ್ಮ ಹೇಳುತ್ತಾರೆ. ನೀನೀಗ ದೊಡ್ಡವನಾಗಿದ್ದೀಯಾ ಹೋಗು ಮದುವೆಯಾಗು ಎಂದು ತಮ್ಮ ಮಗನ ಮೇಲೆ ಕೂಗಾಡುತ್ತಿರುವ ತಂದೆತಾಯಿಗಳ ಬಳಿ ಆಕೆ ಹೋಗುತ್ತಾಳೆ. ಹುಡುಗ ಮತ್ತು ಹುಡುಗಿ ಪರಸ್ಪರ ಖುಷಿಯಿಂದ ಒಪ್ಪಿಕೊಂಡು ಒಟ್ಟಿಗೆ ಬಾಳಲು ತೀರ್ಮಾನಿಸುತ್ತಾರೆ” . ಇದೇ ಮದುವೆ.
ಮದುವೆಯ ಬಗ್ಗೆ ವಿದ್ಯಾರ್ಥಿ ವ್ಯಾಖ್ಯಾನಿಸಿದುದರ ಸಾರಾಂಶವಾಗಿದ್ದು, ಓದಿದಾಗ ನಗು ಬರುವುದು ಸಹಜವಾದರು ಕೂಡ ಮದುವೆಯಂತಹ ಸಂಕೀರ್ಣ ವಿಷಯವನ್ನು ಸಣ್ಣ ವಯಸ್ಸಿನಲ್ಲೇ ವಿದ್ಯಾರ್ಥಿ ಅರ್ಥೈಸಿ ಕೊಂಡಿರುವ ಪರಿ. ನಿಜಕ್ಕೂ ವಿಸ್ಮಯ… ಮದುವೆ ಎಂಬ ವಿಷಯದ ಬಗ್ಗೆ ಗ್ರಹಿಸುವುದು, ವಿವರಿಸುವುದು ನಿಜಕ್ಕೂ ಇಂದಿನ ಕಾಲಮಾನದಲ್ಲಿ ಸುಲಭದ ಮಾತಲ್ಲ..
ಎಲ್ಲರಂತೆ ಪಠ್ಯದಲ್ಲಿಯ ವ್ಯಾಖ್ಯಾನವನ್ನಷ್ಟೇ ಬಾಯಿಪಾಠ ಮಾಡಿ ಬರೆದಿದ್ದರೆ ಆ ವಿದ್ಯಾರ್ಥಿ ಬಹುಶಃ ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತಿದ್ದರು. ಆದರೆ ಇದೀಗ ಉತ್ತರ ಪತ್ರಿಕೆ ಯ ವಿಡಿಯೋ ವೈರಲ್ ಆಗಿ ಸಿಕ್ಕಾಪಟ್ಟೆ ಟ್ರೆಂಡ್ ಆಗುತ್ತಿದೆ.
ಈ ಉತ್ತರದಲ್ಲಿ ಪ್ರಬುದ್ದತೆ ಎದ್ದು ಕಾಣುತ್ತದೆ. ಹೀಗೆ ಉತ್ತರ ಬರೆದಿದ್ದೂ ತಪ್ಪೆಂದು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಹಾಗೆಯೇ ಪಠ್ಯದಲ್ಲಿರುವ/ಸಾಮಾನ್ಯ ಗ್ರಹಿಕೆಯ ವಿಷಯವನ್ನು ಸ್ವಂತ ವ್ಯಾಖ್ಯಾನದಲ್ಲಿ ಬರೆಯಲು ಪ್ರೇರೇಪಿಸಿದ್ದು ಕೂಡ ಒಳ್ಳೆಯ ಸಂಗತಿಯೇ ಆದರೂ ಕೂಡ ಮಕ್ಕಳಿಗೆ ಮದುವೆ ಎಂಬುದು ಗಂಭೀರ ಮತ್ತು ಸೂಕ್ಷ್ಮ ವಿಷಯವಾಗಿದೆ.
ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಯಾವ ತಿಳಿವಳಿಕೆಗಳನ್ನು ಹೇಗೆ ನೀಡಬೇಕು ಎನ್ನುವುದು ಪೋಷಕರ ಮತ್ತು ಶಿಕ್ಷಕರ ಜವಾಬ್ದಾರಿ. ಇಲ್ಲವಾದಲ್ಲಿ ಕಂಡದ್ದೆ ಸತ್ಯ, ಗ್ರಹಿಸಿದ್ದೇ ತಿಳಿವಳಿಕೆ ಎಂಬ ರೀತಿಯಾಗುತ್ತದೆ.