ಫೇಸ್ಬುಕ್ ಬಳಕೆದಾರರಿಗೆ ‘ಮೆಟಾ’ದಿಂದ ಎಚ್ಚರಿಕೆ | ಈ ಕೆಲಸ ಪೂರ್ಣಗೊಳಿಸದಿದ್ರೆ ಕಾದಿದೆ ಅಪಾಯ!!
ಫೇಸ್ಬುಕ್ ಬಳಕೆದಾರರ ಸಂಖ್ಯೆ ಹೆಚ್ಚೇ ಇದ್ದು, ಹಲವು ಮಂದಿ ಈ ಸೋಶಿಯಲ್ ಮೀಡಿಯಾ ಮೂಲಕ ಕಾಲ ಕಳೆಯುತ್ತಾರೆ. ಆದ್ರೆ, ಫೇಸ್ಬುಕ್ ಬಳಕೆದಾರರು ಎಚ್ಚರಿಕೆಯಿಂದ ಇರುವುದು ಸೂಕ್ತ. ಯಾಕಂದ್ರೆ, ಫೇಸ್ಬುಕ್ ಡೇಟಾವನ್ನು ಕದಿಯೋ ಗ್ಯಾಂಗ್ ಒಂದು ಹುಟ್ಟಿಕೊಂಡಿದೆ.
ಹೌದು. ಫೇಸ್ಬುಕ್ ಬಳಕೆದಾರರು ತಕ್ಷಣವೆ ಪಾಸ್ವರ್ಡ್ ಚೇಂಜ್ ಮಾಡಿಕೊಳ್ಳಲು ಮೆಟಾ ತಿಳಿಸಿದೆ. ಪಾಸ್‌ವರ್ಡ್‌ಗಳನ್ನು ಕದಿಯಲು ವಿನ್ಯಾಸಗೊಳಿಸಲಾದ ಸ್ಮಾರ್ಟ್‌ಫೋನ್ ಅಪ್ಲಿಕೇಶನ್‌ಗಳ ಬಗ್ಗೆ ಫೇಸ್‌ಬುಕ್‌ನ ಮಾಲೀಕ ಸಂಸ್ಥೆ ‘ಮೆಟಾ’ ಶುಕ್ರವಾರ ಎಚ್ಚರಿಕೆ ನೀಡಿದೆ.
ವರದಿಯ ಪ್ರಕಾರ, ಒಂದು ದಶಲಕ್ಷಕ್ಕೂ ಹೆಚ್ಚು ಫೇಸ್ಬುಕ್ ಬಳಕೆದಾರರ ಡೇಟಾ ಸೋರಿಕೆಯಾಗಿದೆ ಎಂದು ಮೆಟಾ ಶುಕ್ರವಾರ ಎಚ್ಚರಿಕೆ ನೀಡಿದೆ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳ ಮೂಲಕ ಈ ಡೇಟಾವನ್ನು ಕದಿಯಲಾಗಿದೆ. ಈಗ ಈ ದತ್ತಾಂಶವು ಅಪರಿಚಿತ ಜನರ ಕೈಗಳನ್ನು ತಲುಪಿದ್ದು, ಅದನ್ನು ದುರುಪಯೋಗಪಡಿಸಿಕೊಳ್ಳಬಹುದು. ಆದ್ದರಿಂದ, ಫೇಸ್ಬುಕ್ ಖಾತೆಗಳನ್ನು ನಿರ್ವಹಿಸುವ ಜನರು ತಕ್ಷಣವೇ ತಮ್ಮ ಪಾಸ್ವರ್ಡ್ ಅನ್ನು ಬದಲಾಯಿಸಬೇಕು.
‘ಈ ವರ್ಷ ಇಲ್ಲಿಯವರೆಗೆ 400 ಕ್ಕೂ ಹೆಚ್ಚು ‘ದುರುದ್ದೇಶಪೂರಿತ’ ಅಪ್ಲಿಕೇಶನ್‌ಗಳನ್ನು ನಾವು ಗುರುತಿಸಿದ್ದೇವೆ. ಅವುಗಳನ್ನು ಆಪಲ್ ಅಥವಾ ಆಯಂಡ್ರಾಯ್ಡ್ ಸಾಫ್ಟ್‌ವೇರ್ ಚಾಲಿತ ಫೋನ್‌ಗಳಿಗೆ ಹೊಂದಿಕೆಯಾಗುವಂತೆ ರೂಪಿಸಲಾಗಿದೆ. ಆಪಲ್ ಮತ್ತು ಗೂಗಲ್ ಅಪ್ಲಿಕೇಶನ್ ಸ್ಟೋರ್‌ಗಳಲ್ಲಿ ಅವುಗಳು ಲಭ್ಯವಿವೆ’ ಎಂದು ಮೆಟಾದ ‘ಬೆದರಿಕೆ/ ಅಡಚಣೆ ನಿವಾರಣಾ ವಿಭಾಗ’ದ ನಿರ್ದೇಶಕ ಡೇವಿಡ್ ಅಗ್ರನೋವಿಚ್ ಹೇಳಿದ್ದಾರೆ.
‘ಈ ಅಪ್ಲಿಕೇಶನ್‌ಗಳು ಗೂಗಲ್ ಪ್ಲೇ ಸ್ಟೋರ್ ಮತ್ತು ಆಯಪಲ್ ಆಪ್ ಸ್ಟೋರ್‌ಗಳಲ್ಲಿ ಲಭ್ಯವಿವೆ. ಅಂತರ್ಜಾಲ ಬಳಕೆದಾರರನ್ನು ಆಕರ್ಷಿಸಲು ಅವುಗಳನ್ನು ಫೋಟೋ ಎಡಿಟರ್, ಗೇಮ್, ವಿಪಿಎನ್ ಸರ್ವಿಸ್, ಬ್ಯುಸಿನೆಸ್ ಅಪ್ಲಿಕೇಶನ್‌ಗಳಂತೆ ಮರೆಮಾಚಲಾಗಿದೆ’ ಎಂದು ಮೆಟಾ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದೆ.
‘ಹೆಚ್ಚಿನ ವೈಶಿಷ್ಟ್ಯಗಳ ಆಮಿಷ ಒಡ್ಡುವ ಆಯಪ್‌ಗಳು ಅದಕ್ಕಾಗಿ, ಫೇಸ್‌ಬುಕ್ ಖಾತೆಗೆ ಲಾಗಿನ್ ಆಗುವಂತೆ ಬಳಕೆದಾರರನ್ನು ಕೇಳುತ್ತದೆ. ಹಾಗೇನಾದರೂ ಲಾಗಿನ್ ಆದರೆ, ಯೂಸರ್ ನೇಮ್ ಮತ್ತು ಪಾಸ್‌ವರ್ಡ್‌ಗಳನ್ನು ಆಯಪ್ ಕದಿಯುತ್ತದೆ’ ಎಂದು ಮೆಟಾದ ಭದ್ರತಾ ತಂಡ ಹೇಳಿದೆ.
‘ಲಾಗಿನ್ ಮಾಹಿತಿಯನ್ನು ನಮೂದಿಸಲು ಗ್ರಾಹಕರನ್ನು ಪ್ರೇರೇಪಿಸಿ ಹ್ಯಾಕರ್‌ಗಳು ಖಾತೆಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ,’ ಎಂದು ಮೆಟಾ ಹೇಳಿದೆ. ಹೀಗಾಗಿ, ಫೇಸ್ಬುಕ್ ಬಳಕೆದಾರರು ತಕ್ಷಣವೆ ಪಾಸ್ವರ್ಡ್ ಚೇಂಜ್ ಮಾಡುವುದು ಸೂಕ್ತ..