ದ.ಕ ಒಕ್ಕೂಟದ ಹಾಲು ಉತ್ಪಾದಕರಿಗೆ ಗುಡ್ ನ್ಯೂಸ್ | ಲೀಟರ್‌ಗೆ ₹2.05 ಹೆಚ್ಚುವರಿ ಪ್ರೋತ್ಸಾಹ ಧನ ಘೋಷಣೆ

ಅ. 11ರಿಂದ ಅನ್ವಯವಾಗುವಂತೆ ಸಹಕಾರಿ ಸಂಘಗಳ ಮೂಲಕ ಹಾಲು ಒದಗಿಸುವ ಹೈನುಗಾರರಿಗೆ 2.05 ರೂ. ಹೆಚ್ಚುವರಿ ಪ್ರೋತ್ಸಾಹಧನ ನೀಡುವ ಕುರಿತು ಒಕ್ಕೂಟದ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ವ್ಯಾಪ್ತಿಯಲ್ಲಿ ಹಾಲು ಒಕ್ಕೂಟ 732 ಸಹಕಾರಿ ಸಂಘಗಳನ್ನು ಹೊಂದಿದ್ದು, ಪ್ರತಿನಿತ್ಯ 68 ಸಾವಿರ ಹೈನುಗಾರರು ಒಕ್ಕೂಟಕ್ಕೆ ಹಾಲು ನೀಡುತ್ತಿದ್ದಾರೆ. ಒಕ್ಕೂಟ ವಾರ್ಷಿಕ 962 ಕೋಟಿ ರೂ. ವಹಿವಾಟು ನಡೆಸುತ್ತಿದೆ. ದಿನಕ್ಕೆ ಸರಾಸರಿ 4.65 ಲಕ್ಷ ಲೀಟರ್‌ ಹಾಲು ಸಂಗ್ರಹವಾಗುತ್ತಿದ್ದು, ಕಳೆದ ಎರಡು ತಿಂಗಳಲ್ಲಿ ದಿನಕ್ಕೆ ಗರಿಷ್ಠ 5.65 ಲಕ್ಷ ಲೀಟರ್‌ ಜಾಸ್ತಿ ಹಾಲು ಸಂಗ್ರಹವಾಗಿದೆ. ಒಕ್ಕೂಟದಿಂದ 19 ಬಗೆಯ ಹಾಲಿನ ಉತ್ಪನ್ನ ಉತ್ಪಾದನೆಗೆ 5.30 ಲಕ್ಷ ಲೀಟರ್‌ ಹಾಲು ಬೇಕಾಗಿದ್ದು, ಆದರೆ ಪ್ರಸ್ತುತ ದೇಶಾದ್ಯಂತ ಅಗತ್ಯವಿರುವಷ್ಟು ಹಾಲು ಉತ್ಪಾದನೆಯಾಗುತ್ತಿಲ್ಲದೆ ಇರುವುದರಿಂದ ಹೈನುಗಾರರನ್ನು ಪ್ರೋತ್ಸಾಹಿಸಲು ಪ್ರೋತ್ಸಾಹಧನ ನೀಡಲು ಚಿಂತನೆ ನಡೆದಿದೆ.

ಈ ಹಾಲು ಒಕ್ಕೂಟವು ಮಂಗಳೂರಿನಲ್ಲಿ 4.30ಲಕ್ಷ ಲೀಟರ್ ಮತ್ತು ಮಣಿಪಾಲಿನಲ್ಲಿ 0.80ಲಕ್ಷ ಲೀಟರ್ ಹಾಲನ್ನು ಸಂಸ್ಕರಣೆ ಮಾಡುವ ಸಾಮರ್ಥ್ಯವುಳ್ಳ ಎರಡು ಡೈರಿ ಘಟಕಗಳನ್ನು ಹೊಂದಿದ್ದು ಈ ಎರಡೂ ಘಟಕಗಳು ಅವುಗಳ ಸಾಮರ್ಥ್ಯವನ್ನು ಮೀರಿದ ಬಳಕೆಯಲ್ಲಿವೆ.

ಈ ಒಕ್ಕೂಟವು ಪುತ್ತೂರಿನಲ್ಲಿ 40,000ಲೀಟರ್ ಸಾಮರ್ಥ್ಯದ ಶೀತಲಕೇಂದ್ರವನ್ನು ಹೊಂದಿದೆ. ಅಲ್ಲದೆ, ಒಕ್ಕೂಟದಲ್ಲಿ 100 ಬಲ್ಕ್ ಮಿಲ್ಕ್ ಕೂಲರ್ ಮತ್ತು 604 ಸ್ವಯಂಚಾಲಿತ ಹಾಲು ಶೇಖರಣೆ ಕೇಂದ್ರಗಳು ಕಾರ್ಯಾಚರಣೆಯಲ್ಲಿವೆ.

ಈ ಒಕ್ಕೂಟವು ಪ್ರತಿನಿತ್ಯ ಸರಾಸರಿ 4.75 ಲಕ್ಷ ಕೆ.ಜಿ ಹಾಲನ್ನು ಶೇಖರಣೆ ಮಾಡುತ್ತಲಿದ್ದು, ಸರಾಸರಿ 3.1 ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡುತ್ತಿದ್ದು, 0.45 ಲಕ್ಷ ಕೆ.ಜಿ. ಮೊಸರನ್ನು ಮಾರಾಟ ಮಾಡುತ್ತಿದೆ.

ಹೈನುಗಾರರಿಗೆ ಸದಾ ಬೆನ್ನೆಲುಬಾಗಿ ನಿಂತಿರುವ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ವತಿಯಿಂದ ಅ. 11ರಿಂದ ಅನ್ವಯವಾಗುವಂತೆ ಸಹಕಾರಿ ಸಂಘ ಮೂಲಕ ಹಾಲು ಒದಗಿಸುವ ಹೈನುಗಾರರಿಗೆ 2.05ರೂ. ಹೆಚ್ಚುವರಿ ಪ್ರೋತ್ಸಾಹಧನ ನೀಡಲಾಗುವುದರ ಕುರಿತಾಗಿ ಹಾಲಿನ ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಹೇಳಿದ್ದಾರೆ.

ಸದ್ಯ,ರಾಜ್ಯ ಸರಕಾರಕ್ಕೆ ಪ್ರೋತ್ಸಾಹ ಧನ ಹೆಚ್ಚಿಸುವ ಕುರಿತಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅದು ಜಾರಿಯಾಗುವವರೆಗೆ ಈ ಪ್ರೋತ್ಸಾಹ ದರ ಮುಂದುವರಿಯಲಿದೆ. ಪ್ರಸಕ್ತ ಪ್ರತಿ ಲೀಟರ್‌ ಹಾಲಿಗೆ ಕನಿಷ್ಠ ಖರೀದಿ ದರ ಲೀಟರ್‌ಗೆ 29.05ರೂ. ಇದ್ದು, ಅದಕ್ಕೆ ಅ. 11ರ ಬಳಿಕ 2.05ರೂ. ಸೇರಿಸಿ 32 ರೂ. ದರ ನೀಡುವ ಯೋಜನೆಯಿದ್ದು, ಈ ಮೂಲಕ ಹೈನುಗಾರರು ಗುಣಮಟ್ಟದ ಹಾಲು ಸಹಕಾರಿ ಸಂಘಕ್ಕೆ ನೀಡಲು ಅನುವು ಮಾಡಿಕೊಡುವ ಜೊತೆಗೆ ಹಾಲಿನ ಬೇಡಿಕೆಗೆ ತಕ್ಕಂತೆ ಪೂರೈಕೆ ಮಾಡುವ ಉದ್ದೇಶವನ್ನು ಹೊಂದಿದೆ.

ಪ್ರೋತ್ಸಾಹಧನ ನೀಡುವ ನಿರ್ಧಾರದಿಂದ ಒಕ್ಕೂಟಕ್ಕೆ ದಿನಕ್ಕೆ 10 ಲಕ್ಷ ರೂ.ನಂತೆ ಮಾಸಿಕ 3 ಕೋಟಿ ರೂ. ಹೆಚ್ಚುವರಿ ಹೊರೆಯಾದರೂ ಕೂಡ ಗ್ರಾಹಕರಿಗೆ ಪೂರೈಸುವ ಹಾಲಿನ ದರದಲ್ಲಿ ಏರಿಕೆ ಮಾಡುವುದಿಲ್ಲವೆಂದು ಒಕ್ಕೂಟದ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.

ಒಕ್ಕೂಟದಿಂದ 3 ಹೊಸ ಯೋಜನೆಯನ್ನು ಜಾರಿ ತರಲು ಚಿಂತನೆಗಳು ನಡೆಯುತ್ತಿದ್ದು, ಹೈನುಗಾರರ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ನೆರವಾಗಲು ಕೆಎಂಎಫ್‌ನ ‘ನಂದಿನಿ ಹಾಸ್ಟೆಲ್‌’ ಹಾಲು ಒಕ್ಕೂಟದ ಮಾದರಿಯಲ್ಲೇ ಉಚಿತ ಹಾಸ್ಟೆಲ್‌ ಸೌಲಭ್ಯ ಕಲ್ಪಿಸಲು ನಿರ್ಧರಿಸಲಾಗಿದೆ.

ಪ್ರಾರಂಭಿಕ ಹಂತದಲ್ಲಿ ಸುಮಾರು 50 ರಿಂದ 100 ಹೈನುಗಾರರ ಮಕ್ಕಳಿಗೆ ಉನ್ನತ ವ್ಯಾಸಂಗಕ್ಕೆ ನೆರವಾಗಲಿದ್ದು, ಹಾಸ್ಟೆಲ್‌ ಸೌಲಭ್ಯ ಉಚಿತವಾಗಿದ್ದು, ರಿಯಾಯಿತಿ ದರದಲ್ಲಿ ಆಹಾರಕ್ಕೆ ವ್ಯವಸ್ಥೆ ಮಾಡಲಾಗುವ ಯೋಜನೆ ರೂಪಿಸಲಾಗಿದೆ. ಈಗಾಗಲೇ ಬೆಂಗಳೂರಿನ ಶೆಟ್ಟಿ ಹಳ್ಳಿಯಲ್ಲಿ ಹಾಲು ಒಕ್ಕೂಟದ ನಂದಿನಿ ಹಾಸ್ಟೆಲ್‌ ಇದ್ದು, ಅಲ್ಲಿ ಸೇರ್ಪಡೆಯಾಗಲು ಬಯಸುವ ಹೈನುಗಾರ ಮಕ್ಕಳಿಗೆ ಇಲ್ಲಿಂದ ಶಿಫಾರಸು ಪತ್ರ ನೀಡಲಾಗುತ್ತದೆ.

ಮುಂದಿನ ದಿನಗಳಲ್ಲಿ ನಂದಿನಿ ಐಸ್‌ಕ್ರೀಂ ಉತ್ಪಾದನೆ ಮಾಡುವ ಕುರಿತು ಮಾತುಕತೆ ನಡೆಯುತ್ತಿದ್ದು, ಬೆಣ್ಣೆಯನ್ನು ಮಂಗಳೂರು ಹಾಲು ಒಕ್ಕೂಟದ ವತಿಯಿಂದ ಉತ್ಪಾದಿಸಿ ಚಿಲ್ಲರೆ ಮಾರುಕಟ್ಟೆಗೆ ಪೂರೈಕೆ ಮಾಡಲು ಉದ್ದೇಶಿಸಲಾಗಿದೆ.

ಈಗ ನಂದಿನಿ ಬೆಣ್ಣೆಯ ಕೊರತೆ ತಾತ್ಕಾಲಿಕವಾಗಿ ತಲೆದೋರಿದ್ದು, ಮುಂದಿನ ದಿನಗಳಲ್ಲಿ ಪೂರೈಕೆಯಾಗುವ ಮೂಲಕ ಸಮಸ್ಯೆ ಪರಿಹಾರ ಪಡೆಯಬಹುದು. ರಾಜ್ಯದಲ್ಲೇ ಇದೇ ಮೊದಲ ಬಾರಿಗೆ, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಹೈನುಗಾರರಿಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ 2.05ರೂ. ಪ್ರೋತ್ಸಾಹಧನ ಘೋಷಿಸಲಾಗಿದ್ದು, ಈ ಮೂಲಕ 1 ಲೀಟರ್‌ ಹಾಲಿಗೆ ದಿನಕ್ಕೆ 32ರೂ. ದೊರಕಲಿದ್ದು, ಸರಕಾರದಿಂದ 5 ರೂ. ಸೇರಿದಾಗ 37 ರೂ. ಸಿಗಲಿದೆ.

ರಾಜ್ಯದಲ್ಲಿ ಹೈನುಗಾರರಿಗೆ ಸಿಗುವ ಅತೀ ಹೆಚ್ಚು ಬೆಲೆ ಆಗಿದೆ. ಅದರಲ್ಲೂ ಗುಣಮಟ್ಟದ ಆಧಾರದಲ್ಲಿ ಬೆಲೆ ಹೆಚ್ಚಿಸಲಾಗುತ್ತದೆ. ಇದಲ್ಲದೇ, ದ.ಕ ಅತ್ಯಂತ ಹೆಚ್ಚಿನ ಹಾಲು ಉತ್ಪಾದಕ ಸದಸ್ಯರನ್ನು ಹೊಂದಿರುವ ಹೆಗ್ಗಳಿಕೆಯನ್ನು ಹೊಂದಿದೆ.

Leave A Reply

Your email address will not be published.