ತನ್ನ ಇಷ್ಟದ ಯೂಟ್ಯೂಬರನ್ನು ಭೇಟಿ ಮಾಡಲು 13 ವರ್ಷದ ಬಾಲಕ 250 ಕಿಮೀ ಸೈಕಲ್ ತುಳಿದ | ನಂತರ ನಡೆದದ್ದು ರೋಚಕ
ಈಗಿನ ಕಾಲದ ಮಕ್ಕಳಿಗೆ ಬೇಕಾ ಬೇಕಾದ ವಸ್ತುಗಳು ಕೈ ಬೆರಳು ತೋರಿಸಿದಾಗ ಎಷ್ಟು ಕಷ್ಟ ಆದರೂ ಹೆತ್ತವರು ತಂದುಕೊಡುತ್ತಾರೆ. ಹಾಗಿರುವಾಗ ಅದೇ ಪರಿಸ್ಥಿತಿಗೆ ಮಕ್ಕಳು ಸಹ ಒಗ್ಗಿಕೊಳ್ಳುತ್ತಾರೆ. ಅಂದರೆ ತಮಗಿಷ್ಟ ಬಂದಂತೆ ಇರಲು ಮಕ್ಕಳು ಸಹ ಬಯಸುತ್ತಾರೆ. ಹಾಗೆಯೇ ಇಲ್ಲೊಬ್ಬ 13 ವರ್ಷದ ಬಾಲಕ ಪಂಜಾಬ್‌ನ ಪಟಿಯಾಲದಿಂದ ತನ್ನ ನೆಚ್ಚಿನ ಯೂಟ್ಯೂಬ್ ಸ್ಟಾರ್‌ನನ್ನು ಭೇಟಿ ಮಾಡಲು ಮೂರು ದಿನಗಳ ಕಾಲ 250 ಕಿಲೋಮೀಟರ್ ಸೈಕಲ್ ತುಳಿದು ದೆಹಲಿಗೆ ತೆರಳಿ ಮನೆಯವರ ಚಿಂತೆಗೆ ಕಾರಣವಾದ ಪ್ರಕರಣ ಬೆಳಕಿಗೆ ಬಂದಿದೆ.
ಹಾಸ್ಯ ಮತ್ತು ವಿಡಂಬನಾತ್ಮಕ ಚಾನೆಲ್ ‘ಟ್ರಿಗ್ಗರ್ಡ್ ಇನ್ಸಾನ್’ ಚಾನೆಲ್ ನಡೆಸುತ್ತಿರುವ ಯೂಟ್ಯೂಬರ್ ನಿಶ್ಚಯ್ ಮಲ್ಹಾನ್ ನ ವಿಡಿಯೋ ಗಳಿಗೆ ಸುಮಾರು 1.7 ಕೋಟಿ ಚಂದಾದಾರರನ್ನು ಹೊಂದಿದ್ದನು. ಈತನ ವಿಡಿಯೋಗಳಿಗೆ ಮನಸೋತ ಎಂಟನೇ ತರಗತಿಯ ಬಾಲಕನೊಬ್ಬ ಯೂಟ್ಯೂಬರ್ ನನ್ನು ಭೇಟಿಯಾಗಲು ಮನೆಯವರಿಗೆ ಹೇಳದೆ ಸೈಕಲ್ ಹಿಡಿದು ಪಂಜಾಬ್ ನಿಂದ ದೆಹಲಿಗೆ ಹೊರಟಿದ್ದಾನೆ, ನಿರಂತರವಾಗಿ ಮೂರು ದಿನಗಳಲ್ಲಿ 250 ಕಿಲೋಮೀಟರ್ ದೂರ ಕ್ರಮಿಸಿದ ಬಾಲಕ ದೆಹಲಿಯಲ್ಲಿರುವ ಯೂಟ್ಯೂಬರ್ ನ ಅಪಾರ್ಟ್ಮೆಂಟ್ ಗೆ ತಲುಪಿರುತ್ತಾನೆ ಆದರೆ ಅಲ್ಲಿ ಬಾಲಕನಿಗೆ ಯೂಟ್ಯೂಬರ್ ಕಾಣಸಿಗಲಿಲ್ಲ. ಆತನು ಅಷ್ಟೋತ್ತಿಗಾಗಲೇ ದುಬೈಗೆ ತೆರಳಿದ್ದನು.
ಅದಾಗಲೇ ಬಾಲಕನ ಮನೆಯಲ್ಲಿ ಶಾಲೆಗೆ ಹೋದ ಬಾಲಕ ನಾಪತ್ತೆಯಾಗಿದ್ದಾನೆ ಎಂದು ಪೋಷಕರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ, ದೂರು ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರ ತಂಡ ಬಾಲಕನ ಪತ್ತೆಗೆ ಶಾಲೆಯ ಮಾರ್ಗದ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ, ಆದರೆ ಬಾಲಕ ಶಾಲೆಯ ಕಡೆ ಹೋಗದೆ ಬೇರೆ ತಿರುವಿನಲ್ಲಿ ಸಂಚರಿಸಿರುವುದು ಕಂಡುಬಂದಿದೆ, ಈ ವೇಳೆ ಪೋಷಕರು ತನ್ನ ಮಗ ನಾಪತ್ತೆಯಾಗಿರುವ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ, ಪೊಲೀಸರು ಬಾಲಕನ ಪತ್ತೆಗೆ ಎಲ್ಲಾ ಕಡೆಯ ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಆತ ದೆಹಲಿಗೆ ಹೋಗಿರುವುದು ಕಂಡು ಬಂದಿದೆ. ಕೊನೆಗೆ ಆತ ಯೂಟ್ಯೂಬರ್ ನ ಅಪಾರ್ಟ್ಮೆಂಟ್ ಬಳಿ ಸೈಕಲ್ ನಿಲ್ಲಿಸಿರುವುದು ಕಂಡು ಬಂದಿದೆ. ಕೂಡಲೇ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿ ಪೋಷಕರ ಸಮೇತ ಪೋಲೀಸರ ತಂಡ ದೆಹಲಿಗೆ ಹೊರಟಿದ್ದು , ಅಷ್ಟೋತ್ತಿಗಾಗಲೇ ದೆಹಲಿ ಪೊಲೀಸರು ಬಾಲಕನನ್ನು ಪತ್ತೆ ಹಚ್ಚಿ ವಿಚಾರಿಸಿದಾಗ ತಾನು ‘ಟ್ರಿಗ್ಗರ್ಡ್ ಇನ್ಸಾನ್’ ಯೂಟ್ಯೂಬರ್ ಅಭಿಮಾನಿಯಾಗಿದ್ದು ಆತನನ್ನು ಭೇಟಿಯಾಗಬೇಕೆಂದು ಬಂದಿದ್ದೇನೆ ಎಂದು ಹೇಳಿದ್ದಾನೆ. ಕೊನೆಗೆ ದೆಹಲಿ ಪೊಲೀಸರು ಬಾಲಕನನ್ನು ಪಟಿಯಾಲ ಪೊಲೀಸರ ಸಮ್ಮುಖದಲ್ಲಿ ಪೋಷಕರಿಗೆ ಒಪ್ಪಿಸಿದ್ದಾರೆ.
ಕೊನೆಗೂ ಬಾಲಕನನ್ನು ಪತ್ತೆಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿರುತ್ತಾರೆ. ಬಾಲಕನ ಪತ್ತೆಯಿಂದ ಪೋಷಕರು ನಿಟ್ಟುಸಿರು ಬಿಡುವಂತಾಗಿದೆ.