ಚುನಾವಣಾ ಅಖಾಡಕ್ಕೆ ಪ್ರಮೋದ್ ಮುತಾಲಿಕ್ ಎಂಟ್ರಿ | ಗುರು ಶಿಷ್ಯರ ಕದನ ಇನ್ನು ಶುರು

ಚುನವಾಣೆ ನಡೆಯಲು ಸಾಕಷ್ಟು ಕಾಲಾವಕಾಶ ಇದ್ದರೂ ಕೂಡ ಬಿರುಸಿನ ಚರ್ಚೆಗಳು ಗರಿಗೆದರಿದ್ದು, ಬಿಜೆಪಿ ಪಾಳಯದಲ್ಲಿ ಬಹು ನಿರೀಕ್ಷಿತ ಕರಾವಳಿಯಲ್ಲಿ ಯಾರನ್ನು ಕಣಕ್ಕೆ ಇಳಿಸುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.

 

ಬಿಜೆಪಿಯ ಭದ್ರಕೋಟೆ ಎಂದೇ ಖ್ಯಾತಿ ಪಡೆದಿರುವ ಕರಾವಳಿಯಲ್ಲಿ ಪ್ರಮೋದ್‌ ಮುತಾಲಿಕ್‌ 2023 ಚುನಾವಣೆಗೆ ಸ್ಪರ್ಧೆ ಮಾಡುವಂತೆ ಕಾರ್ಯಕರ್ತರಿಂದ ಬೇಡಿಕೆ ಹೆಚ್ಚಾಗಿದ್ದು, ಇದರ ಕುರಿತಾಗಿ ಭಾರಿ ದೊಡ್ಡ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ.

ಇತ್ತೀಚಿನ ದಿನಗಳಲ್ಲಿ ಕರಾವಳಿಯಲ್ಲಿ ನಡೆಯುತ್ತಿರುವ ಕೊಲೆ ಪ್ರಕರಣದ ಜೊತೆಗೆ ಇನ್ನಿತರ ಕಾರಣಗಳಿಂದ ಪಕ್ಷದ ಕಾರ್ಯಕರ್ತರಲ್ಲಿ ಅಸಮಾಧಾನದ ಭುಗಿಲೆದ್ದಿದ್ದು, ಶ್ರೀರಾಮಸೇನೆಯ ಮುಖ್ಯಸ್ಥರು ಸ್ಪರ್ಧೆ ಮಾಡಬೇಕೆನ್ನುವ ಅಹವಾಲು ಕೇಳಿ ಬರುತ್ತಿದೆ.

ಇದರ ಜೊತೆಗೆ ಯುಪಿ ಮಾಡೆಲ್‌ನ ವ್ಯಕ್ತಿಯಂತೆ ಪ್ರಮೋದ್‌ ಮುತಾಲಿಕ್‌ ವಿಧಾನ ಸೌಧದಲ್ಲಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬ ಅಭಿಪ್ರಾಯ ಬಿಜೆಪಿ ಕಾರ್ಯಕರ್ತರಲ್ಲಿ ಮೂಡಿದ್ದು, ಕಾರ್ಯಕರ್ತರ ಹಾಗೂ ಜನತೆಯ ದ್ವನಿಯಾಗಿ ಮುತಾಲಿಕ್ ಕಾರ್ಯ ವೈಖರಿಯ ಮೇಲೆ ಅತಿ ವಿಶ್ವಾಸ ಒಳಗೊಂಡಿರುವ ಅಭಿಮಾನಿಗಳು ಮುತಾಲಿಕ್ ಅವರನ್ನು ಕಣಕ್ಕಿಳಿಸಲು ಒತ್ತಾಯ ಮಾಡುತ್ತಿದ್ದಾರೆ.

ಈಗಾಗಲೇ ಪ್ರಮೋದ್‌ ಮುತಾಲಿಕ್‌ 5 ಕ್ಷೇತ್ರಗಳಲ್ಲಿ ಧಾರ್ಮಿಕ ಕಾರ್ಯಕ್ರಮದ ನಿಮಿತ್ತ ಪ್ರವಾಸ ಕೈಗೊಂಡಿದ್ದಾಗಲೂ ಕೂಡ ಆರ್‌ಎಸ್‌ಎಸ್‌, ಶ್ರೀರಾಮಸೇನೆ ಕಾರ್ಯಕರ್ತರು ಚುನಾವಣೆಗೆ ಸ್ಪರ್ಧಿಸುವಂತೆ ಒತ್ತಡ ಹಾಕಿದ್ದು, ಅಲ್ಲದೆ, ಜಿಲ್ಲೆಯ 5 ಕ್ಷೇತ್ರಗಳ ಪೈಕಿ ಒಂದನ್ನು ಆಯ್ಕೆ ಮಾಡಿ ಕಾರ್ಕಳದಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವಂತೆ ಮನವೊಲಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಈ ನಡುವೆ ಕಾರ್ಕಳ ಸುನಿಲ್‌ ಕುಮಾರ್‌ ಅವರ ಮತ ಕ್ಷೇತ್ರವಾಗಿರುವಲ್ಲಿ ಪ್ರವೋದ್‌ ಮುತಾಲಿಕ್‌ ಸ್ಪರ್ಧಿಸುವಂತೆ ಕೆಲ ಪಡೆಯಿಂದ ಮನವಿ ಬರುತ್ತಿದ್ದು, ಮುತಾಲಿಕ್ ಇಲ್ಲಿ ಸ್ಪರ್ಧಿಸಿದರೆ, ಗುರು – ಶಿಷ್ಯರ ನಡುವೆ ಜಿದ್ದಾ ಜಿದ್ದಿನ ರಣರಂಗಕ್ಕೆ ವೇದಿಕೆ ಕಲ್ಪಿಸಿದಂತೆ ಆಗುವುದರಲ್ಲಿ ಸಂಶಯವಿಲ್ಲ. ಈ ನಡುವೆ , ಕಾಂಗ್ರೆಸ್ ಹಾಗೂ ಜೆಡಿಎಸ್ ಯಾರನ್ನು ಕಣಕ್ಕೆ ಇಳಿಸಲು ಮುಂದಾಗಿದೆ ಎಂಬ ಬಗ್ಗೆ ಇನ್ನೂ ತಿಳಿದು ಬಂದಿಲ್ಲ.

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ 15 ವಿಧಾನಸಭಾ ಕ್ಷೇತ್ರವಿದ್ದು, ಇದರಲ್ಲಿ 12 ಸ್ಥಾನವನ್ನು ಬಿಜೆಪಿ ಗೆದ್ದು, ತನ್ನ ಸ್ಥಾನ ಭದ್ರ ಪಡಿಸಿಕೊಂಡಿದೆ. ಆದರೆ ಮುಂಬರುವ ಚುನಾವಣೆಯಲ್ಲಿ ಇತ್ತೀಚೆಗೆ ನಡೆದಿರುವ ಘಟನೆಯಿಂದ ರಾಜ್ಯದ ಜನತೆ ಯಾರ ಕಡೆಗೆ ಒಲವು ತೋರುತ್ತಾರೆ ಎಂದು ಕಾದು ನೋಡಬೇಕಾಗಿದೆ.

Leave A Reply

Your email address will not be published.