Indian Hotels: ಈ ಹೋಟೆಲ್ ಗಳು ದಂಪತಿಗಳಿಗಾಗಿ ಮಾತ್ರ | ಮಕ್ಕಳನ್ನು ಕರೆದುಕೊಂಡು ಹೋಗಲು ಅವಕಾಶವಿಲ್ಲ ; ಯಾಕೆ ಅಂತೀರಾ?

ಇಂದಿನ ಜೀವನ ಶೈಲಿಯು ಮೊದಲಿನಂತೆ ಇರದೆ, ಬದಲಾವಣೆಯೇ ಜಗದ ನಿಯಮ ಎಂಬ ಮಾತಿಗೆ ಅನುಗುಣವಾಗಿ ಕೆಲಸ ಮತ್ತು ತನ್ನ ಮನೆ ಎಂಬ ಚೌಕಟ್ಟಿನ ಒಳಗೆಯೆ ಕೇಂದ್ರೀಕರಿಸಿ ಹೊರಗಿನ ಪ್ರಪಂಚದ ಆಗು ಹೋಗುಗಳ ಬಗ್ಗೆಯಾಗಲಿ, ಕುಟುಂಬದ ಜೊತೆ ಕಾಲ ಕಳೆಯಲು ಕೂಡ ಸಮಯವಿಲ್ಲದ ಸ್ಥಿತಿ ಎದುರಾಗಿದೆ.

ವಸುದೈವ ಕುಟುಂಬಕಂ ಎಂಬ ಮಾತಿಗೆ ತಕ್ಕಂತೆ ಹಳೆಯ ಕಾಲದ ಜೀವನ ನಡೆಸುವ ಪದ್ಧತಿ ಈಗ ಕಣ್ಮರೆಯಾಗಿ, ಒತ್ತಡಯುತ ಜೀವನ ಶೈಲಿಯ ನಡುವೆ ತಮ್ಮ ಮನೆಯವರೊಂದಿಗೆ ಸಂತೋಷವಾಗಿ ಕಾಲ ಕಳೆಯಲು ಬಯಸುವವರು ಅನೇಕ ಮಂದಿ ಇದ್ದಾರೆ. ರಜೆ ಸಿಗುವುದನ್ನು ಜಾತಕ ಪಕ್ಷಿಯಂತೆ ಕಾದು, ಕೆಲಸದ ನಡುವೆ ನೆಮ್ಮದಿಯ ನಿಟ್ಟುಸಿರ ಬಿಡಲು ಸುಂದರ ಪರಿಸರದ ಜೊತೆಗೆ ಮನರಂಜನೆಯ ನೀಡುವ ಪ್ರದೇಶವನ್ನು ಅರಸುವವರಿಗಾಗಿ ಮಾಹಿತಿ ಇಲ್ಲಿದೆ.

ಪ್ರವಾಸ ಇಲ್ಲವೇ ಟ್ರಿಪ್ ಹೋಗುವಾಗ ಸ್ನೇಹಿತರ ಜೊತೆಗೋ ಇಲ್ಲವೇ ಕುಟುಂಬದವರೆಲ್ಲರು ಜೊತೆಯಾಗಿ ತೆರಳಿ ಸಂತೋಷದ ಕ್ಷಣಗಳನ್ನು ಅನುಭವಿಸಲು ಬಯಸುವುದು ಸಹಜ. ಪ್ರವಾಸದಿಂದ ಕೇವಲ ಮನರಂಜನೆ ಮಾತ್ರವಲ್ಲದೇ, ಊರಿನ ಅನುಸರಿಸುವ ಆಚರಣೆ, ಆಹಾರ ಶೈಲಿ, ಮಾತನಾಡುವ ಶೈಲಿ ಎಲ್ಲದರಲ್ಲೂ ಬದಲಾವಣೆಗಳಿದ್ದು, ಇವೆಲ್ಲದರ ಮಾಹಿತಿ ಪಡೆಯಬಹುದಾಗಿದೆ. ತಿಳಿದುಕೊಳ್ಳುವ ಕುತೂಹಲ, ಆಸಕ್ತಿ ಇದ್ದರೆ, ಅನೇಕ ಸಂಗತಿಗಳನ್ನು ತಿಳಿಯಬಹುದು.

ಪ್ರವಾಸ ಮಾಡಲು ಬಯಸುವವರ ಅಭಿರುಚಿಗೆ ತಕ್ಕಂತೆ ಪ್ರದೇಶಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಹೀಗೆ ಪ್ರವಾಸ ಹೋದಾಗ ಹೋಟೆಲ್ಗಳಲ್ಲಿ ತಂಗುವ, ಇಲ್ಲವೇ ರೆಸ್ಟೋರೆಂಟ್ ಉಳಿದುಕೊಳ್ಳುವ ವ್ಯವಸ್ಥೆ ಮಾಡುವುದು ಅತ್ಯಗತ್ಯ.

ವಯಸ್ಕ ದಂಪತಿಗಳಿಗೆ ಕೆಲವೊಮ್ಮೆ ರಜೆ ದಿನಗಳ ಅವಶ್ಯಕತೆ ಖಂಡಿತ ಇರುತ್ತದೆ. ಮಕ್ಕಳು ಪ್ರೀತಿಯಿಂದ ನೋಡಿಕೊಂಡರೂ ಕೂಡ ಕೆಲವೊಮ್ಮೆ ವಯಸ್ಸಾದಂತೆ ಸ್ಥಳ ಬದಲಾವಣೆಯ ಅವಶ್ಯಕತೆಯ ಜೊತೆಗೆ ಸ್ವಲ್ಪ ಖಾಸಗಿ ಸಮಯ ಬೇಕಾಗುತ್ತದೆ.

ಮಕ್ಕಳ ಸಮೇತ ಅದೆಷ್ಟೋ ಬಾರಿ ಪ್ರವಾಸ ಮಾಡಿದ್ದರೂ ಕೂಡ ಒಮ್ಮೆಯಾದರೂ ತಮ್ಮಿಷ್ಟದಂತೆ ಏಕಾಂತವಾಗಿ ಪ್ರವಾಸ ಮಾಡಿದಾಗ ಉತ್ಸಾಹ, ಚೈತನ್ಯ ದ್ವಿಗುಣ ವಾಗುವುದರಲ್ಲಿ ಸಂದೇಹವಿಲ್ಲ. ಹಾಗಾಗಿ, ಭಾರತದಲ್ಲಿ ಕೆಲವು ವಯಸ್ಕ ಸ್ನೇಹಿ ಹೋಟೆಲ್ ಗಳಿದ್ದು, ಮತ್ತೊಂದು ವಿಶೇಷವೆಂದರೆ ಇಲ್ಲಿ ಮಕ್ಕಳನ್ನು ಒಳಕ್ಕೆ ಹೋಗಲು ಅನುಮತಿ ನೀಡುವುದಿಲ್ಲ. ಹೊಸ ವಾತಾವರಣದಲ್ಲಿ ಕಾಲ ಕಳೆಯುವ ಹೊಸ ಅನುಭೂತಿ, ಅನುಭವವಾಗುವುದು ಖಚಿತ.

ಗೋವಾದಲ್ಲಿ ಈ ರೀತಿಯ ಕೆಲ ಸ್ಥಳಗಳಿದ್ದು, ದಿ ಪಾರ್ಕ್ ಬಾಗಾ ರಿವರ್ ಗೋವಾ ಒಂದು ಅತುತ್ತಮ ಅನುಭವ ನೀಡುವ ಪ್ರವಾಸಿ ಖ್ಯಾತಿಯ ಹೋಟೆಲ್ ಆಗಿದ್ದು , ಕೇವಲ ವಯಸ್ಕರಿಗಾಗಿಯೇ ವಿಶೇಷವಾಗಿ ರೂಪಿಸಲಾಗಿದೆ.

ಇಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಪ್ರವೇಶಿಸಲು ಅನುಮತಿ ಸಿಗುವುದಿಲ್ಲ. ನವದಂಪತಿಗಳಿಗೆ ಸುಂದರ ರಸಮಯ ಕ್ಷಣಗಳನ್ನು ಕಳೆಯಲು ಆದರ್ಶಮಯ ತಾಣವಾಗಿದೆ. ಗೋವಾದಲ್ಲಿರುವ ಬಾಗಾ ನದಿಯ ತಟದಲ್ಲಿ ಈ ಹೋಟೆಲ್ ಇದ್ದು,ದ್ದು ಚಿಕ್ಕ ಲಗೂನ್ ಒಂದಕ್ಕೆ ಅಭಿಮುಖವಾಗಿದ್ದು, ಪ್ರಕೃತಿಯ ಸೊಬಗನ್ನು ಕಣ್ಣಾರೆ ಸವಿಯಬಹುದು.

ಉತ್ತರಾಖಂಡ್ ರಾಜ್ಯದ ರಿಷಿಕೇಶ್ ಪಟ್ಟಣದಲ್ಲಿರುವ ಆನಂದಾ ಇನ್ ದಿ ಹಿಮಾಲಯಾಸ್ ಅದ್ಭುತ ಐಷಾರಾಮಿ ರೆಸಾರ್ಟ್ ಆಗಿದ್ದು ವಯಸ್ಕರಿಗೆ ಅವಕಾಶ ಕಲ್ಪಿಸಿದ್ದು, ಈ ರೆಸಾರ್ಟ್ ನ ನಿಯಮದ ಅನ್ವಯ 14 ವರ್ಷಕ್ಕಿಂತ ಕಡಿಮೆಯಿರುವವರಿಗೆ ಒಳಗೆ ಪ್ರವೇಶ ಕಲ್ಪಿಸಿಲ್ಲ.

ವೆಲ್ನೆಸ್ ಚಿಕಿತ್ಸೆಗೆ ಹೇಳಿ ಮಾಡಿಸಿದಂತಹ ರೆಸಾರ್ಟ್ ಇದಾಗಿದ್ದು ಭಾರತದ ಅತ್ಯುತ್ತಮ ವೆಲ್ನೆಸ್ ರಿಸಾರ್ಟುಗಳ ಪೈಕಿ ಒಂದಾಗಿದೆ. ಈ ರೆಸಾರ್ಟ್ ಪ್ರಶಾಂತತೆಯಿಂದ ಕೂಡಿದ್ದು, ಅದನ್ನು ಕಾಪಾಡಿಕೊಳ್ಳುವ ಉದ್ದೇಶದಿಂದಲೇ ಇಲ್ಲಿ ಮಕ್ಕಳಿಗೆ ಅವಕಾಶ ನೀಡಿಲ್ಲ.

ದಿ ತಾಮರ ಕೂರ್ಗ್ , ಈ ಹೋಟೆಲ್ ಕರ್ನಾಟಕದ ಕಾಫಿ ನಾಡಾದ ಮಂಜಿನ ನಗರಿ ಕೊಡಗಿನ ಮಡಿಕೇರಿಯಲ್ಲಿ ಪಶ್ಚಿಮ ಘಟ್ಟಗಳ ಸುಂದರ ಕಾನನದಲ್ಲಿ ನೆಲೆಸಿರುವ ಈ ಹೋಟೆಲ್ ಪ್ರಕೃತಿಯ ವೈಭವೋಪೇತ ದೃಶ್ಯವನ್ನು ಅತಿಥಿಗಳಿಗೆ ಉಣ ಬಡಿಸುತ್ತದೆ.

ಕಾಡಿನ ಕಠಿಣಕರವಾದ ವಾತಾವರಣದ ಮಧ್ಯೆ ನೆಲೆಸಿರುವುದರಿಂದ ಮಕ್ಕಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಇಲ್ಲಿ 12 ವರ್ಷ ಕ್ಕಿಂತ ಕಡಿಮೆಯಿರುವವರಿಗೆ ಅವಕಾಶ ಕಲ್ಪಿಸಿಲ್ಲ. ವಯಸ್ಕರು ಇಲ್ಲಿ ಅದ್ಭುತ ಕ್ಷಣಗಳ ಜೊತೆಗೆ ಮನರಂಜನೆ ಗಾಗಿ ಟ್ರೆಕ್ಕಿಂಗ್, ಹೊರಾಂಗಣ ಕೊಳದಲ್ಲಿ ಈಜಾಡುವಿಕೆ, ಹೊರಾಂಗಣ ಊಟ ಮುಂತಾದವುಗಳನ್ನು ಇಲ್ಲಿ ಮಾಡಬಹುದಾಗಿದೆ.

ಅಲ್ಮೋರಾದ ಗಿರಿಧಾಮದಲ್ಲಿ ನೆಲೆಸಿರುವ ವಾತ್ಸಾಯನ – ಎ ಹಿಮಾಲಯನ್ ಬೊಟಿಕ್ ಅದ್ಭುತ ಹೋಟೆಲ್ ಆಗಿದ್ದು, ಸ್ವರ್ಗಕ್ಕೆ ಇಳಿದ ಅನುಭವ ತಂದು ಕೊಡುವ ಈ ಹೋಟೆಲ್ ವಯಸ್ಕ ಸ್ನೇಹಿಯಾಗಿದ್ದು ಹಿಮಾಲಯ ಪರ್ವತಗಳ ಕಣ್ಮನ ಸೆಳೆಯುವಂತಹ ಪ್ರದೇಶವನ್ನು ಹೊಂದಿದೆ .

ಅಲ್ಲದೆ ಶ್ರೀಮಂತ ಪ್ರಕೃತಿ ಸೌಂದರ್ಯವಿರುವ ಪ್ರದೇಶದ ಪ್ರಶಾಂತತೆಯು ಹೊಸ ಜೋಡಿಗಳಿಗೆ ಹೇಳಿ ಮಾಡಿಸಿದಂತೆ ಇದೆ ಎಂದರೆ ತಪ್ಪಾಗದು. ಪ್ರವಾಸ ಹೋಗುವ ಯೋಜನೆಯಲ್ಲಿ ಇದ್ದರೆ, ಮೇಲೆ ತಿಳಿಸಿದ ಸುಂದರ ಪರಿಸರದ ನಡುವೆ ಇರುವ ಹೊಟೇಲ್ಗಳಿಗೆ ಭೇಟಿ ನೀಡಿ ಸಂತೋಷದ ಕ್ಷಣಗಳನ್ನು ಅನುಭವಿಸಲು ಅವಕಾಶವಿದೆ.

Leave A Reply

Your email address will not be published.