ಟ್ರಿಪ್ ಗೆ ಹೋಗಿದ್ದ ಶಾಲಾ ಬಸ್ ಭೀಕರ ಅಪಘಾತ | 9 ಜನರ ದಾರುಣ ಸಾವು, 38 ಮಂದಿಗೆ ತೀವ್ರ ಗಾಯ
ಶಾಲಾ ಮಕ್ಕಳನ್ನು ಪ್ರವಾಸ ಕರೆದೊಯ್ಯುತ್ತಿದ್ದ ಪಾಲಕ್ಕಾಡಿನ ಬಸ್ಸೊಂದು ಅಪಘಾತಕ್ಕೀಡಾದ ಘಟನೆ ನಡೆದಿದೆ. ಕೇರಳ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಹಾಗೂ ಮಕ್ಕಳಿದ್ದ ಪ್ರವಾಸಿ ಬಸ್ ಮಧ್ಯೆ ಅಪಘಾತ ಸಂಭವಿಸಿದೆ.
ಅಪಘಾತದ ರಭಸಕ್ಕೆ ಎರಡೂ ಬಸ್ಗಳು ನಜ್ಜುಗುಜ್ಜಾಗಿದ್ದು, ಪರಿಣಾಮವಾಗಿ ಒಂಭತ್ತು ಜನರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಪಾಲಕ್ಕಾಡಿನ ವಡಕಂಚೇರಿಯ ಸಮೀಪದಲ್ಲಿ ಸಂಭವಿಸಿದೆ. ಪ್ರವಾಸಿ ಬಸ್ ಕಾರನ್ನು ಓವರ್ಟೇಕ್ ಮಾಡುವ ಭರದಲ್ಲಿ ಕೆಎಸ್ಆರ್ ಟಿಸಿ ಬಸ್ಸಿನ ಹಿಂಬದಿಗೆ ಡಿಕ್ಕಿ ಹೊಡೆದು ಘೋರ ಅನಾಹುತ ಸಂಭವಿಸಿದೆ.
ಎರ್ನಾಕುಲಂನ ಮುಲಂತುರುತಿ ಎಂಬಲ್ಲಿಯ ಬೆಸಿಲಿಯಸ್ ಶಾಲೆಯ 10, 11 ಹಾಗೂ 12ನೇ ತರಗತಿಯ ವಿದ್ಯಾರ್ಥಿಗಳನ್ನು ಊಟಿಗೆ ಪ್ರವಾಸಕ್ಕೆ ಕರೆದೊಯ್ಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದ್ದು, 26 ಬಾಲಕರು 16 ಬಾಲಕಿಯರು ಈ ಶಾಲಾ ಪ್ರವಾಸಿ ಬಸ್ಸಿನಲ್ಲಿದ್ದರು. ಶಾಲಾ ಬಸ್ಸಿನ ಅತಿಯಾದ ವೇಗದ ಜೊತೆಗೆ ಎಡಬಿಡದೆ ಸುರಿಯುತ್ತಿದ್ದ ಮಳೆಯೂ ಅಪಘಾತಕ್ಕೆ ಕಾರಣವೆಂದು ಹೇಳಲಾಗಿದೆ.
ರಾಜ್ಯ ಸಾರಿಗೆ ಬಸ್ಸಿಗೆ ಪ್ರವಾಸಿ ಬಸ್ಸು ಡಿಕ್ಕಿ ಹೊಡೆದ ಬಳಿಕ ಚಾಲಕನ ನಿಯಂತ್ರಣ ತಪ್ಪಿದ ಬಸ್ಸು ಸಮೀಪದ ಕೆಸರು ತುಂಬಿದ ಜೌಗು ಪ್ರದೇಶಕ್ಕೆ ಮಗುಚಿ ಬಿದ್ದಿದ್ದು, ಈ ಸಂದರ್ಭದಲ್ಲಿ ಒಂಭತ್ತು ಜನ ದಾರುಣವಾಗಿ ಸಾವನ್ನಪ್ಪಿದ್ದಾರೆ.
ರಾತ್ರಿ 12 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದ್ದು, ಘಟನೆಯ ಸಂದರ್ಭ ಪ್ರವಾಸಿ ಬಸ್ಸಿನಲ್ಲಿ 41 ವಿದ್ಯಾರ್ಥಿಗಳು, ಐದು ಶಿಕ್ಷಕರು ಹಾಗೂ ಇಬ್ಬರು ಬಸ್ಸಿನ ಸಿಬ್ಬಂದಿ ಇದ್ದರು. ಹಾಗೆಯೇ ರಾಜ್ಯ ಸಾರಿಗೆ ಬಸ್ಸಿನಲ್ಲಿ 49 ಪ್ರಯಾಣಿಕರಿದ್ದರು. ಅಂಜುಮೂರ್ತಿ ಮಂಗಲಮ್ ಬಸ್ ನಿಲ್ದಾಣದ ಸಮೀಪ, ವಲಯನ್ -ವಡಕೆಂಚೆರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಅನಾಹುತ ಸಂಭವಿಸಿದ್ದು, ಈ ಅವಘಡದಲ್ಲಿ 12 ಜನ ಗಂಭೀರ ಗಾಯಗೊಂಡರೆ, 28 ಜನ ಸಣ್ಣಪುಟ್ಟ ಗಾಯಗಳೊಂದಿಗೆ ಅದೃಷ್ಟವಶಾತ್ ಸಾವಿನ ದವಡೆಯಿಂದ ಪಾರಾಗಿದ್ದಾರೆ.
ಮೃತರಲ್ಲಿ ಮೂವರು ಕೆಎಸ್ಆರ್ ಟಿಸಿ ಬಸ್ ಪ್ರಯಾಣಿಕರಾಗಿದ್ದು ಇನ್ನುಳಿದ ಐವರು ಪ್ರವಾಸಿ ಬಸ್ಸಿನಲ್ಲಿದ್ದವರಾಗಿದ್ದಾರೆ. ಒಟ್ಟು ಆರು ಪುರುಷ ಹಾಗೂ 3 ಮಹಿಳೆಯರು ಈ ದುರಂತದಲ್ಲಿ ಅಸುನೀಗಿದ್ದಾರೆ.
ಮೃತರಲ್ಲಿ ಸಾರಿಗೆ ಬಸ್ನಲ್ಲಿ ಸಂಚರಿಸುತ್ತಿದ್ದ ತ್ರಿಶೂರಿನ 24 ವರ್ಷದ ರೋಹಿತ್ ರಾಜ್, ಕೊಲ್ಲಂನ 22 ವರ್ಷದ ಅನೂಪ್, ಶಾಲಾ ಸಿಬ್ಬಂದಿಯಾದ ನ್ಯಾನ್ಸಿ ಜಾರ್ಜ್, ವಿ ಕೆ ವಿಷ್ಣು ಎಂದು ಗುರುತಿಸಲಾಗಿದ್ದು, ಸಾವಿನ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಪೋಲಿಸ್ ಮೂಲಗಳು ತಿಳಿಸಿವೆ. ಗಾಯಾಳುಗಳನ್ನು ಪಾಲಕ್ಕಾಡಿನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೃತಪಟ್ಟವರ ಶರೀರವನ್ನು ಅಲ್ತೂರ್ ಹಾಗೂ ಪಾಲಕ್ಕಾಡಿನ ಆಸ್ಪತ್ರೆಯಲ್ಲಿ ಇರಿಸಲಾಗಿದೆ.