ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ನಡೆದಿದೆ ಶಿಕ್ಷಕರ ನೇಮಕಾತಿ ಹಗರಣ | ಹೆಚ್ಚು ಅಂಕ ಪಡೆದವರನ್ನು ಕೈ ಬಿಟ್ಟು ಕಡಿಮೆ ಅಂಕ ಪಡೆದವರ ನೇಮಕ

ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ನಡೆದ ಶಿಕ್ಷಕರ ನೇಮಕಾತಿ ಹಗರಣದ ತನಿಖೆಯನ್ನು ರಾಜ್ಯ ಸರಕಾರ ಈಗ ಚುರುಕುಗೊಳಿಸಿದ್ದು, ಅಕ್ರಮವಾಗಿ ಉದ್ಯೋಗ ಪಡೆದವರ ಸಂಖ್ಯೆ 80 ಎಂಬ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.

 

ಆರಂಭದಲ್ಲಿ ಎಂಟು ಜನರು ಈ ರೀತಿ ಉದ್ಯೋಗ ಗಿಟ್ಟಿಸಿದ್ದಾರೆ ಎನ್ನಲಾಗಿತ್ತು. ಬಳಿಕ 12 ಜನರು ಎಂಬ ಮಾಹಿತಿ ಹೊರಬಿದ್ದಿತ್ತು.ಇದೀಗ ಸಿಐಡಿ ತನಿಖೆ ಚುರುಕುಗೊಳ್ಳುತ್ತಿದ್ದಂತೆ ಅಕ್ರಮವಾಗಿ ಶಿಕ್ಷಕರ ಹುದ್ದೆ ಗಿಟ್ಟಿಸಿದವರ ಸಂಖ್ಯೆ 80 ಕ್ಕೂ ಹೆಚ್ಚು ಇದೆ ಎನ್ನಲಾಗಿದೆ.ಇದು 100 ದಾಟುವ ಸಾಧ್ಯತೆ ಇದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

2014-15 ರಲ್ಲಿ ನಡೆದ ಶಿಕ್ಷಕರ ನೇಮಕಾತಿ ಅಕ್ರಮದಲ್ಲಿ ಅಂದಿನ ಶಿಕ್ಷಣ ಇಲಾಖೆ ಅಧಿಕಾರಿಗಳೇ ನೇರವಾಗಿ ಭಾಗಿಯಾಗಿದ್ದಾರೆ. ರಾಜಕೀಯ ಒತ್ತಡ ಕಾರಣಕ್ಕೆ ಈ ರೀತಿ ನೇಮಕ ನಡೆದಿದೆ ಎಂಬ ಆರೋಪ ವ್ಯಕ್ತವಾಗಿತ್ತು.

ಮುಖ್ಯ ಪಟ್ಟಿಯನ್ನು ಬಿಟ್ಟು ಹೆಚ್ಚುವರಿ ಆಯ್ಕೆ ಪಟ್ಟಿಯಲ್ಲಿ ಅಕ್ರಮವಾಗಿ ಶಿಕ್ಷಕರ ನೇಮಕಾತಿ ಮಾಡಲಾಗಿದೆ ಎಂಬ ಮಾತು ಕೇಳಿ ಬಂದಿತ್ತು.

ಸಿದ್ದರಾಮಯ್ಯ ಸರಕಾರದ ಕೊನೆ ಅವಧಿಯಲ್ಲಿ ಅಂದರೆ 2017-18 ರಲ್ಲಿ ನೇಮಕ ‌ಪ್ರಕ್ರಿಯೆ ಮುಕ್ತಾಯಗೊಂಡಿತ್ತು. ಆಗ ಅಕ್ರಮವಾಗಿ ನೇಮಕವಾದ ಶಿಕ್ಷಕರಿಗೆ ಆದೇಶ ಪತ್ರ ನೀಡಲಾಗಿತ್ತು. ಮುಖ್ಯ ಪಟ್ಟಿಯಲ್ಲಿ ಮೆರಿಟ್ ಲಿಸ್ಟ್ ಬಿಡುಗಡೆಯಾಗಿದ್ದು ಒಬ್ಬರ ಹೆಸರು. ಆದರೆ ಹೆಚ್ಚುವರಿ ಪಟ್ಟಿಯಲ್ಲಿ ನೇಮಕವಾಗಿದ್ದು ಇನ್ನೊಬ್ಬರ ಹೆಸರು ಇದ್ದದ್ದು ಅನುಮಾನಕ್ಕೆ ಕಾರಣವಾಗಿತ್ತು. ನೇಮಕಾತಿಗೆ ನಿಗದಿ ಮಾಡಿದ್ದ ಕಟಾಫ್ ಅಂಕವನ್ನೇ ಕಡಿತ ಮಾಡಿ ಶಿಕ್ಷಕರ ನೇಮಕಾತಿ ಮಾಡಲಾಗಿತ್ತು. ಹೆಚ್ಚು ಅಂಕ ಬಂದಿರುವ ಅಭ್ಯರ್ಥಿ ಬದಲಾಗಿ ಕಡಿಮೆ ಅಂಕ ಬಂದಿರುವ ಅಭ್ಯರ್ಥಿಗಳ ಹೆಸರು ಮೆರಿಟ್ ಲಿಸ್ಟ್ ನಲ್ಲಿ ಸೇರಿಸಿ ಆಯ್ಕೆ ಮಾಡಲಾಗಿತ್ತು ಎನ್ನಲಾಗಿದೆ.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿಧಾನಸಭೆಯಲ್ಲೇ ಈ ವಿಚಾರವನ್ನು ಅನಾವರಣಗೊಳಿಸಿದ್ದರು.

ಪರೀಕ್ಷೆ ಬರೆಯದೇ ಹೋದ ಅಭ್ಯರ್ಥಿಗೂ ಹೆಚ್ಚುವರಿ ಪಟ್ಟಿಯಲ್ಲಿ ಕೆಲಸ‌ ನೀಡಿದ್ದ ಅಂದಿನ ಸರ್ಕಾರ ಸಮಾಜಕ್ಕೆ ದೊಡ್ಡ ದ್ರೋಹ ಮಾಡಿದೆ ಎಂದು ಬಿಜೆಪಿ ಈಗ ಆರೋಪಿಸಿದೆ

Leave A Reply

Your email address will not be published.