Ayushman Card : ಆಯುಷ್ಮಾನ್ ಕಾರ್ಡ್ ಹೊಸ ಡಿಜಿಟಲ್ ಸೇವೆ | ದೇಶಾದ್ಯಂತ ಬಳಸಲು ಉಪಯುಕ್ತ

ಆಯುಷ್ಮಾನ್ ಭಾರತ್ ಯೋಜನೆ ಅಥವಾ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (PMJAY) ಭಾರತ ಸರ್ಕಾರವು ಆಯುಷ್ಮಾನ್ ಭಾರತ್ ಯೋಜನೆ ಕಾರ್ಡ್ ಮೂಲಕ ತುರ್ತು ಸಂದರ್ಭದಲ್ಲಿ ತನ್ನ ಫಲಾನುಭವಿಗಳಿಗೆ ಆಸ್ಪತ್ರೆ ವೆಚ್ಚಗಳ ವಿರುದ್ಧ ಹಣಕಾಸಿನ ಭದ್ರತೆಗಳನ್ನು ಒದಗಿಸಲು ಪ್ರಾರಂಭಿಸಿರುವ ಆರೋಗ್ಯ ವಿಮಾ ಯೋಜನೆಯಾಗಿದೆ. ದೇಶದಾದ್ಯಂತ ಆರೋಗ್ಯ ಸೇವೆಗಳನ್ನು ಒಂದೇ ವ್ಯವಸ್ಥೆಯ ಅಡಿಯಲ್ಲಿ ತರುವ ಉದ್ದೇಶದಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.
ದೇಶದ ಸಮಗ್ರ ಆರೋಗ್ಯ ವ್ಯವಸ್ಥೆಯನ್ನು ಡಿಜಿಟಲೀಕರಣಗೊಳಿಸಲು ಕೇಂದ್ರ ಸರಕಾರವು ಆಯುಷ್ಮಾನ್‌ ಭಾರತ್‌ ಡಿಜಿಟಲ್‌ ಮಿಷನ್‌ ಯೋಜನೆಯನ್ನು ಜಾರಿಗೆ ತಂದಿದ್ದು, ಈ ಯೋಜನೆಯ ಅಡಿಯಲ್ಲಿ, PMJAY ಅಡಿಯಲ್ಲಿ ಮಧುಮೇಹ, ಕ್ಯಾನ್ಸರ್, ಪಾರ್ಶ್ವವಾಯು ಮತ್ತು ಹೃದ್ರೋಗಗಳಿಗೆ ಹಣಕಾಸಿನ ನೆರವು ನೀಡಲಾಗುತ್ತದೆ.
ಆಯುಷ್ಮಾನ್ ಭಾರತ್ ಯೋಜನೆಯು ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆಗಳಲ್ಲಿ ಒಂದಾಗಿದ್ದು, ಸಮಾಜದ ದುರ್ಬಲ ವರ್ಗಕ್ಕೆ ಸೇರಿದ ಜನರಿಗೆ ಎಲ್ಲ ಆಸ್ಪತ್ರೆಗಳಲ್ಲಿ ಆಸ್ಪತ್ರೆಗೆ ಸಂಬಂಧಿಸಿದ ವೆಚ್ಚಗಳನ್ನು ಒಳಗೊಂಡಿದೆ. ಈ ಯೋಜನೆಯಡಿಯಲ್ಲಿ ಪ್ರತಿ ಬಡ ಕುಟುಂಬಕ್ಕೆ (ಬಿಪಿಎಲ್‌) ವಾರ್ಷಿಕ 5 ಲಕ್ಷ ರೂ. ಮೊತ್ತದ ವೈದ್ಯಕೀಯ ಚಿಕಿತ್ಸಾ ವೆಚ್ಚ ಉಚಿತವಾಗಿದ್ದು, ಬಡತನದ ರೇಖೆಗಿಂತ ಮೇಲೆ ಇರುವ ಎಪಿಎಲ್‌ ಕಾರ್ಡ್ ಹೊಂದಿದ ಕುಟುಂಬಕ್ಕೆ, ಚಿಕಿತ್ಸಾ ವೆಚ್ಚದ ಶೇ.30ರಷ್ಟು ನೆರವಿನ ಜೊತೆಗೆ ವಾರ್ಷಿಕವಾಗಿ ಗರಿಷ್ಠ 1.5 ಲಕ್ಷ ರೂ. ತನಕ ಸಿಗಲಿದೆ.

ನಾಲ್ಕು ವಿಧವಾದ ಆರೋಗ್ಯ ಸಂಬಂಧಿ ದಾಖಲೆಗಳ ಡಿಜಿಟಲೀಕರಣ ಇದೀಗ ಈ ಯೋಜನೆಯಡಿಯಲ್ಲಿ ನಡೆಯುತ್ತಿದೆ.

ಆಯುಷ್ಮಾನ್‌ ಭಾರತ್‌ ಹೆಲ್ತ್‌ ಕಾರ್ಡ್‌ (ಆಭಾ ಕಾರ್ಡ್‌)
ಈಗ ಬಳಕೆಯಾಗುತ್ತಿರುವ ಆಯುಷ್ಮಾನ್‌ ಭಾರತ್‌ ಹೆಲ್ತ್ ಕಾರ್ಡ್‌ ವಿತರಣೆ ಯಾಗುತ್ತಿರುವುದನ್ನು ಮುಂದಿನ ದಿನಗಳಲ್ಲಿ ನಿಲ್ಲಿಸಿ, ಇದರ ಬದಲಿಗೆ ಎಲ್ಲೆಡೆ ಉಪಯೋಗಿಸಬಲ್ಲ ಎಟಿಎಂ ಕಾರ್ಡ್‌ನಂತಹ ಡಿಜಿಟಲ್‌ ಮಾದರಿಯ ಆಭಾ ಕಾರ್ಡ್‌ ವಿತರಿಸಲಿದೆ. ಆಧಾರ್‌ ಕಾರ್ಡ್‌ನ ಮಾದರಿಯಲ್ಲಿ 14 ಡಿಜಿಟ್‌ನ ಪ್ರತ್ಯೇಕ ಗುರುತಿನ ಕಾರ್ಡ್ ಇದಾಗಿದೆ.

ಇದರ ನೋಂದಣಿ ಕಾರ್ಯವನ್ನು ಗ್ರಾಮ ಪಂಚಾಯತ್‌ನ ಗ್ರಾಮ ಒನ್‌ ಕೇಂದ್ರಗಳಲ್ಲಿ ಉಚಿತವಾಗಿ ಕೆಲವು ದಾಖಲೆಗಳನ್ನು ಸಲ್ಲಿಸಿ ಪಡೆಯಬಹುದಾಗಿದೆ. ದಾಖಲೆಗಳು ಆಧಾರ್‌ ಕಾರ್ಡ್‌ ಪ್ರತಿ, ಆಧಾರ್‌ ಕಾರ್ಡ್‌ ನೋಂದಣಿ ಮಾಡಿದ ಮೊಬೈಲ್‌ ನಂಬರ್‌ ಹಾಗೂ ರೇಷನ್‌ ಕಾರ್ಡ್‌ ಪ್ರತಿ ಬೇಕಾಗಿದ್ದು, ಇವೆಲ್ಲವನ್ನು ಸಲ್ಲಿಸಿ ನೋಂದಣಿ ಮಾಡಿಕೊಳ್ಳಬಹುದು.

ಈ ಡಿಜಿಟಲ್‌ ಕಾರ್ಡ್‌ ಹೊಂದಿದವರಿಗೆ ಮೊದಲಿನಂತೆಯೇ ನೋಂದಾಯಿತ ಆಸ್ಪತ್ರೆಗಳಲ್ಲಿ ಆಯುಷ್ಮಾನ್‌ ಭಾರತ್‌ ಸರಕಾರಿ ಯೋಜನೆ ಸೌಲಭ್ಯ ದೊರೆಯಲಿದೆ. ಬಿಪಿಎಲ್‌ ಕಾರ್ಡ್‌ ಹೊಂದಿದ ಕುಟುಂಬಕ್ಕೆ ವರ್ಷಕ್ಕೆ ಗರಿಷ್ಠ 5 ಲಕ್ಷ ರೂ.ವರೆಗೆ ರೋಗಕ್ಕೆ ಅನುಸಾರವಾಗಿ ಪ್ಯಾಕೇಜ್‌ ದರ ಉಚಿತವಾಗಿ ದೊರೆಯಲಿದ್ದು, ಎಪಿಎಲ್‌ ಕಾರ್ಡ್‌ ಹೊಂದಿದವರಿಗೆ ಪ್ಯಾಕೇಜ್‌ ದರದ ಶೇ. 30ರಷ್ಟು ಗರಿಷ್ಠ 1.5 ಲಕ್ಷ ರೂ. ವರೆಗೆ ನೆರವು ದೊರೆಯಲಿದೆ.
ಸಾಮಾನ್ಯ ದ್ವಿತೀಯ ಹಂತದ 291 ಚಿಕಿತ್ಸಾ ವಿಧಾನಗಳು, ಕ್ಲಿಷ್ಟಕರ ದ್ವಿತೀಯ ಹಂತದ 254 ಚಿಕಿತ್ಸಾ ವಿಧಾನಗಳು, ಮಾರಣಾಂತಿಕ ಕಾಯಿಲೆಗಳಾದ ಹೃದಯರೋಗ, ಕ್ಯಾನ್ಸರ್, ನರರೋಗ, ಮೂತ್ರಪಿಂಡದ ಕಾಯಿಲೆ, ನವಜಾತ ಶಿಶುಗಳ ಕಾಯಿಲೆ ಮುಂತಾದ ತೃತೀಯ ಹಂತದ 900 ಚಿಕಿತ್ಸಾ ವಿಧಾನಗಳು ಹಾಗೂ 169 ತುರ್ತು ಚಿಕಿತ್ಸೆಗಳು ಮತ್ತು 36 ಉಪಚಿಕಿತ್ಸಾ ವಿಧಾನಗಳು ಸೇರಿ ಒಟ್ಟು 1650 ಚಿಕಿತ್ಸೆಗಳು ಲಭ್ಯ. 169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೆ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು.

ಪ್ರಾಥಮಿಕ ಮತ್ತು ಸಾಮಾನ್ಯ ದ್ವಿತೀಯ ಚಿಕಿತ್ಸೆಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುತ್ತದೆ. ದ್ವಿತೀಯ ಕ್ಲಿಷ್ಟಕರ ಚಿಕಿತ್ಸೆಗಳು ಮತ್ತು ತೃತೀಯ ಹಂತದ ಕಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿದ್ದಲ್ಲಿ ಅಲ್ಲಿಯೇ ದೊರೆಯುತ್ತದೆ. ಇಲ್ಲದಿದ್ದರೆ, ರೆಫರಲ್ ನೀಡಲಾಗುತ್ತದೆ. ಈ ರೀತಿ ರೆಫರಲ್ ಪಡೆದುಕೊಂಡ ರೋಗಿಯು ತಾನು ಇಚ್ಚಿಸುವ ಯಾವುದೇ ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು.
ರಸ್ತೆ ಅಪಘಾತ ಸೇರಿದಂತೆ 169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೆ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು.ವೈದ್ಯಕೀಯ ದಾಖಲೆಗಳನ್ನು ವೈಯಕ್ತಿಕವಾಗಿ ಇಲೆಕ್ಟ್ರಾನಿಕ್ ಮೂಲಕ ಕಾರ್ಡಿನೊಂದಿಗೆ ಸಂಯೋಜಿಸಿದರೆ ಆ ವ್ಯಕ್ತಿಯು ದೇಶದ ಯಾವುದೇ ವೈದ್ಯರಲ್ಲಿ ಚಿಕಿತ್ಸೆಗೆ ಹೋದರೆ ಸಂಪೂರ್ಣ ಆರೋಗ್ಯ ಕೈಪಿಡಿಯ ಮಾಹಿತಿ ದೊರೆಯಲಿದೆ.

ಈ ಕಾರ್ಡ್‌ ಉಪಯೋಗಿಸಿ ಟೆಲಿ ಕನ್ಸಲ್ಟೇಷನ್ ಮತ್ತು ಈ-ಫಾರ್ಮಸಿ ಸೇವೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಆರೋಗ್ಯ ವಿಮೆ ನೀಡುವ ಕಂಪೆನಿಗಳಿಗೆ ಕ್ಲೇಮ್‌ ಗಳನ್ನು ತ್ವರಿತವಾಗಿ ನಡೆಸಲು ಅನುಕೂಲವಾಗಲಿದೆ. ಆಸ್ಪತ್ರೆಗೆ ದಾಖಲಾಗುವ ಸಮಯದಿಂದ ರೋಗಿ ಡಿಸ್ಚಾರ್ಜ್ ಆಗುವವರೆಗಿನ ಮಾಹಿತಿ, ವ್ಯಕ್ತಿಯ ಆರೋಗ್ಯದ ಎಲ್ಲ ಮಾಹಿತಿಗಳು ಕಾರ್ಡ್ ರೂಪದಲ್ಲಿ ಸಂಗ್ರಹಿಸಿಡಲಾಗುವುದು. ಪ್ರತೀ ಕಾಯಿಲೆ ಅದಕ್ಕೆ ಸಂಬಂಧಿಸಿದ ವೈದ್ಯಕೀಯ ಪರೀಕ್ಷೆಗಳು ವೈದ್ಯರ ಚೀಟಿ, ಅವರು ಸೂಚಿಸಿದ ಔಷಧಗಳ ಮಾಹಿತಿ ಎಲ್ಲವನ್ನೂ ಅದರಲ್ಲಿ ಸಂಗ್ರಹಿಸಬಹುದಾಗಿದೆ. ಇದಲ್ಲದೆ, ಆರೋಗ್ಯ ವರದಿಯೊಂದಿಗೆ ಆಯುಷ್ಮಾನ್‌ ಭಾರತ್‌ ಸರಕಾರಿ ಯೋಜನೆ ಸೌಲಭ್ಯ ಪಡೆಯಬಹುದಾಗಿದೆ.

ಆರೋಗ್ಯ ಸೇವೆ ಒದಗಿಸುವವರ ರಿಜಿಸ್ಟ್ರಿ (HPR) :
ಎಲ್ಲ ವಿಧಾನಗಳ ಚಿಕಿತ್ಸೆ ನೀಡುವ ವೈದ್ಯರು, ದಂತ ವೈದ್ಯರು, ನರ್ಸ್‌ ಗಳು, ಪ್ಯಾರಾಮೆಡಿಕಲ್‌ ಸಿಬಂದಿ ಸ್ವಯಂಪ್ರೇರಿತರಾಗಿ ತಮ್ಮ ಆಧಾರ್‌ ಕಾರ್ಡ್‌ ಹಾಗೂ ಕೌನ್ಸಿಲ್‌ನ ನೋಂದಣಿ ಪ್ರತಿಯೊಂದಿಗೆ ಈ ಡಿಜಿಟಲೀಕರಣದ ಸೇವೆಯಡಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ಇದರಿಂದ ಈ ವೃತ್ತಿಪರರ ಸಂಪೂರ್ಣ ಮಾಹಿತಿ ಈ ಡಿಜಿಟಲೀಕರಣ ವ್ಯವಸ್ಥೆಯಿಂದ ಸಾಮಾನ್ಯ ಜನರಿಗೆ ದೊರಕಲಿದೆ .
ತಮಗೆ ಸಮೀಪವಿರುವ ವೈದ್ಯರ ಹಾಗೂ ವೃತ್ತಿಪರರ ಸಂಪರ್ಕ ದೊರೆತು ವೈದ್ಯರೊಂದಿಗೆ ಸಂದರ್ಶನ, ಚಿಕಿತ್ಸೆ, ತುರ್ತು ಚಿಕಿತ್ಸೆ ಅಗತ್ಯ ಬಿದ್ದಲ್ಲಿ ಸಕಾಲದಲ್ಲಿ ಪಡೆಯಲು ಅಥವಾ ಟೆಲಿ ಸಂದರ್ಶನ ಪಡೆಯಲು ಸಹಾಯವಾಗಲಿದೆ. ಆರೋಗ್ಯ ಸೇವೆ ಒದಗಿಸುವವರು https://hpr.abdm.gov.in ಎಂಬ ಲಿಂಕ್‌ ಸಂದರ್ಶಿಸಿ ನೋಂದಣಿ ಮಾಡಿಕೊಳ್ಳಬಹುದು.

ಆರೋಗ್ಯ ಸೌಲಭ್ಯಗಳ ರಿಜಿಸ್ಟ್ರಿ (HFR):
ಈ ಡಿಜಿಟಲೀಕರಣ ವ್ಯವಸ್ಥೆಯಡಿ ಸ್ವಯಂಪ್ರೇರಿತವಾಗಿ ಎಲ್ಲ ಖಾಸಗಿ, ಸರಕಾರಿ ಆಸ್ಪತ್ರೆಗಳು, ಕ್ಲಿನಿಕ್‌, ಇಮೇಜಿಂಗ್‌ ಸೆಂಟರ್‌, ಬ್ಲಡ್ ಬ್ಯಾಂಕ್‌ ನೊಂದಣಿ ಮಾಡಿಕೊಳ್ಳಬಹುದಾಗಿದೆ. ಇದರಿಂದ ಎಲ್ಲ ಆರೋಗ್ಯ ಸೌಲಭ್ಯ ಒದಗಿಸುವವರು ಈ ವ್ಯವಸ್ಥೆಯಡಿಯಲ್ಲಿ ಎಲ್ಲರ ಸಂಪರ್ಕದಲ್ಲಿರುತ್ತಾರೆ. ಸಂಬಂಧ ಪಟ್ಟ ಸಂಸ್ಥೆಯ HFR ನೋಂದಣಿ ಮಾಡಿಕೊಂಡಿರುವ ವ್ಯಕ್ತಿಯು https://facility. ndhm.gov.in/ ಸಂದರ್ಶಿಸಿ ಸ್ವತಃ ನೊಂದಣಿ ಮಾಡಿಕೊಳ್ಳಬಹುದು.

ಆರೋಗ್ಯ ಸೇವೆಯ ಕೇಂದ್ರ ರಾಷ್ಟ್ರೀಯ ಕೇಂದ್ರೀಕೃತ ಡಿಜಿಟಲೀಕರಣಗೊಂಡು ದೇಶಾದ್ಯಂತ ಜನರ ಬಳಕೆಗೆ ಅವಕಾಶ ನೀಡಿದಂತಾಗುವುದು. ಇದರಿಂದಾಗಿ ಜನ ಸಾಮಾನ್ಯರಿಗೆ ತಮ್ಮ ಸಮೀಪವಿರುವ ಆಸ್ಪತ್ರೆಗಳು ಹಾಗೂ ಸೇವೆಗಳ ಸಂಪೂರ್ಣ ವಿವರ ಸಿಗಲಿದೆ. ತನ್ಮೂಲಕ ಅವರಿಗೆ ಬೇಕಾದ ಅಗತ್ಯ ಸೇವೆಗಳನ್ನು ಅಗತ್ಯಕ್ಕೆ ಅನುಗುಣವಾಗಿ ದೇಶಾದ್ಯಂತ ಬಳಸಿಕೊಳ್ಳಲು ಸಹಕಾರಿಯಾಗಿದೆ.

ಇಲೆಕ್ಟ್ರಾನಿಕ್‌ ವೈಯಕ್ತಿಕ ವೈದ್ಯಕೀಯ ದಾಖಲೆಗಳು (EPHR):
ಈ ಸೇವೆಯಡಿಯಲ್ಲಿ ರೋಗಿಯ ಎಲ್ಲ ವೈದ್ಯಕೀಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ ಹೊಸ ಆಯುಷ್ಮಾನ್‌ ಕಾರ್ಡ್‌ಗೆ ಸಂಯೋಜನೆಗೊಳಿಸಿದಾಗ ಆ ಕಾರ್ಡ್‌ನಲ್ಲಿ ಆ ವ್ಯಕ್ತಿಯ ಸಂಪೂರ್ಣ ಆರೋಗ್ಯ ಮಾಹಿತಿ ಲಭ್ಯವಿರಲಿದೆ. ಜತೆಗೆ ದೇಶಾದ್ಯಂತ ಯಾವುದೇ ನೊಂದಾಯಿತ ಆರೋಗ್ಯ ಕೇಂದ್ರಗಳಲ್ಲಿ ಆಭಾ ಕಾರ್ಡ್‌ ಮೂಲಕ ರೋಗಿಯ ಸಂಪೂರ್ಣ ಪೂರ್ವ ಮಾಹಿತಿ ಚಿಕಿತ್ಸೆ ನೀಡುವ ವೈದ್ಯರಿಗೆ ದೊರೆಯುವಂತೆ ಮಾಡಬಹುದಾಗಿದೆ. ಸರ್ಕಾರವು ಜನರ ಆರೋಗ್ಯ ಸೇವೆಗಳ ನೀಡಿ ನೆರವಾಗುತ್ತಿದ್ದು, ಮೇಲೆ ತಿಳಿಸಿದ ಮಾಹಿತಿ ಆಧರಿಸಿ ಅರೋಗ್ಯ ಕಾರ್ಡ್ ನ ಸದ್ಬಳಕೆ ಮಾಡಿಕೊಳ್ಳಬಹುದು.

Leave A Reply

Your email address will not be published.