ಪ್ರಬಲ ನೆಲೆ ಹೊಂದಿದ್ದ ಕೇರಳದಲ್ಲೂ ಪಿಎಫ್‌ಐಗೆ ಸಿಗದ ಬೆಂಬಲ | ಮೌನಕ್ಕೆ ಶರಣಾದ ಮುಖಂಡರು

ಕೇರಳದಲ್ಲಿ ಪ್ರಬಲ ನೆಲೆ ಹೊಂದಿದ್ದು, ಅಲ್ಲಿಯೇ ಕಠಿಣ ಕ್ರಮಗಳಿಂದ ತತ್ತರಿಸಿರುವ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ ತನ್ನ ಸಮುದಾಯದಿಂದಲೂ ನಿರೀಕ್ಷಿತ ಬೆಂಬಲ ವ್ಯಕ್ತವಾಗದ ಕಾರಣ ಸದ್ಯ ಮೌನಕ್ಕೆ ಶರಣಾದಂತಿದೆ.

ಏಕಕಾಲಕ್ಕೆ ಹಲವು ರಾಜ್ಯಗಳಲ್ಲಿ ಪಿಎಫ್‌ಐ ಮೇಲೆ ನಡೆದ ಎನ್‌ಐಎ, ಪೊಲೀಸರ ಸಂಘಟಿತ ಕಾರ್ಯಾಚರಣೆ, ಆ ಬಳಿಕ ಸರಕಾರ ಸದ್ದಿಲ್ಲದೆ ಪಿಎಫ್‌ಐ ಹಾಗೂ ಅದರ ಸಹವರ್ತಿ ಸಂಘಟನೆಗಳ ನಿಷೇಧಕ್ಕೆ ಮುಂದಾಗಿರುವುದು ಹಾಗೂ ಅದರ ಪೂರ್ವಭಾವಿಯಾಗಿ ಗಲಭೆ ಎಬ್ಬಿಸುವಂತಹ ಅದರ ನಾಯಕರನ್ನು ವಶಕ್ಕೆ ಪಡೆದಿರುವುದು ಎಲ್ಲವೂ ವ್ಯವಸ್ಥಿತ ವಾಗಿ ನಡೆದಿವೆ.

ಕೇರಳದಲ್ಲಿ ಬಂದ್‌ ಮೂಲಕ ಗಲಭೆಗೆ ಪ್ರೇರಣೆ ನೀಡಿದ್ದ ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಅಬ್ದುಲ್‌ ಸತ್ತಾರ್‌ ಎಂಬಾತನನ್ನು ಬಂಧಿಸಲಾಗಿದೆ.

ಬಂದ್‌ ವೇಳೆ ಉಂಟಾದ ಎಲ್ಲ ಗಲಭೆಯ ಪ್ರಕರಣದಲ್ಲೂ ಆತನನ್ನು ಆರೋಪಿ ಮಾಡುವಂತೆ ಹೈಕೋರ್ಟ್‌ ಆದೇಶಿಸಿದೆ.

ಅಲ್ಲದೆ ಬಂಧಿಸಲ್ಪಟ್ಟ ನಾಯಕರನ್ನು ಬಿಡುಗಡೆ ಮಾಡಬೇಕಾದರೆ ಪಿಎಫ್‌ಐ ಹರತಾಳದಿಂದ ಉಂಟಾದ ನಾಶನಷ್ಟಕ್ಕೆ ಪರಿಹಾರವಾಗಿ 5.2 ಕೋಟಿ ರೂ. ಪಾವತಿ ಮಾಡುವಂತೆಯೂ ಆದೇಶಿಸಿರುವುದು ಸಂಘಟನೆಗೆ ಹಿನ್ನಡೆಯುಂಟು ಮಾಡಿದೆ.

ಗುಪ್ತಚರ ಮೂಲಗಳ ಪ್ರಕಾರ ಪಿಎಫ್‌ಐ ನಿರೀಕ್ಷಿಸಿದ್ದ ಮಟ್ಟಿಗೆ ತಮ್ಮದೇ ಸಮುದಾಯದಿಂದಲೂ ಬೆಂಬಲ ಸಿಕ್ಕಿಲ್ಲ. ಹಾಗಾಗಿ ಯಾವುದೇ ರೀತಿಯ ಬಂಡಾಯದ ಕ್ರಮಗಳಿಗೆ ಮುಂದಾಗಿಲ್ಲ.

Leave A Reply

Your email address will not be published.