ಏಲಕ್ಕಿಯಲ್ಲಿ ಸಾಕಷ್ಟು ಪ್ರಮಾಣದ ಕ್ರಿಮಿನಾಶಕ ಪತ್ತೆ | 6.5 ಕೋಟಿ ಅಯ್ಯಪ್ಪ ಸ್ವಾಮಿ ಪ್ರಸಾದ ʼಅರಾವಣಂʼ ನಿರುಪಯುಕ್ತ
ಏಲಕ್ಕಿಯಲ್ಲಿ ಹೆಚ್ಚಿನ ಪ್ರಮಾಣದ ಕ್ರಿಮಿನಾಶಕ ಇರುವುದು ಪತ್ತೆಯಾದ ಹಿನ್ನೆಲೆ 6.5 ಕೋಟಿ ರೂ. ಮೌಲ್ಯದ ಅಯ್ಯಪ್ಪ ಸ್ವಾಮಿ ಪ್ರಸಾದ ‘ಅರಾವಣಂ’ ನಿಷ್ಪ್ರಯೋಜಕವಾಗಿದೆ ಎಂದು ತಿಳಿದುಬಂದಿದೆ. ನ್ಯಾಯಮೂರ್ತಿ ಅನಿಲ್ ಕೆ. ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿಜಿ ಅಜಿತ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಮಹತ್ವದ ನಿರ್ದೇಶನ ನೀಡಿದೆ. ಅರಾವಣಂ ಪ್ರಸಾದಕ್ಕೆ ಬಳಸಿದ ಏಲಕ್ಕಿಯಲ್ಲಿ 95 ಬಗೆಯ ಕ್ರಿಮಿನಾಶಕಗಳು ಇರುವುದು ಕೆಮಿಕಲ್ ಟೆಸ್ಟ್ನ ಮುಖೇನ ಖಚಿತವಾಗಿದ್ದು, ಹೀಗಾಗಿ, ಕೇರಳ ಹೈಕೋರ್ಟ್ ಅರಾವಣಂ ವಿತರಣೆಗೆ ತಕ್ಷಣವೆ ತಡೆ ಹಿಡಿದಿದೆ. ಅರಾವಣಂ ಇರುವ ಆರೂವರೆ ಲಕ್ಷ ಟಿನ್ಗಳನ್ನು ಪೂರೈಕೆ ಮಾಡುವ ನಿಟ್ಟಿನಲ್ಲಿ ಈ ಮೊದಲೇ ಸಂಗ್ರಹ ಮಾಡಲಾಗಿದ್ದು, ಈಗ ಹೈಕೋರ್ಟ್ ವಿತರಣೆ ಮಾಡದಂತೆ ಆದೇಶ ಹೊರಡಿಸಿದೆ.
ಏಳು ಟನ್ ಏಲಕ್ಕಿಯನ್ನು ಈ ಬಾರಿ 10. 9 ಲಕ್ಷ ರೂ.ಗೆ ಓಪನ್ ಟೆಂಡರ್ ಇಲ್ಲದೆ ಖರೀದಿ ಮಾಡಲಾಗಿದ್ದು ಆದರೆ, ಇದೀಗ ಏಲಕ್ಕಿ ಇಲ್ಲದ ಅರಾವಣಂ ಉತ್ಪಾದನೆ ನಿನ್ನೆ (ಜ.11) ರಾತ್ರಿಯಿಂದಲೇ ಶುರುವಾಗಿದೆ ಎಂದು ತಿಳಿದುಬಂದಿದೆ. ಹೀಗಾಗಿ, ಕೇವಲ ಎಂಟು ಗಂಟೆಗಳಲ್ಲಿಯೆ ವಿತರಣೆಗೆ ಅಣಿಯಾಗಲಿದೆ. ಏಲಕ್ಕಿ ರಹಿತ ಅರಾವಣಂ ಇಂದು (ಜ.12) ಬೆಳಗ್ಗೆಯಿಂದ ಕೌಂಟರ್‌ನಲ್ಲಿ ಲಭ್ಯವಿರಲಿದ್ದು ಎರಡೂವರೆ ಲಕ್ಷ ಟಿನ್ ಅರಾವಣಂ ಅನ್ನು ಏಕಕಾಲದಲ್ಲಿ ತಯಾರಿಸಬಹುದು. ದಿನಕ್ಕೆ ಸರಿಸುಮಾರು ಮೂರು ಲಕ್ಷ ಟಿನ್‌ಗಳು ಮಾರಾಟವಾಗುತ್ತವೆ.
ನಿನ್ನೆ ಸಂಜೆ 5 ಗಂಟೆಗೆ ಅರಾವಣಂ ಮಾರಾಟವನ್ನು ಶಬರಿಮಲೆಯಲ್ಲಿ ಸ್ಥಗಿತಗೊಳಿಸಲಾಗಿದೆ. ಹೀಗಾಗಿ, ಸಾವಿರಾರು ಯಾತ್ರಿಕರು ಅರಾವಣಂ ಪಡೆಯದೆ ಹಿಂತಿರುಗಿದ ಘಟನೆ ನಡೆದಿದೆ. ಅಯ್ಯಪ್ಪ ಸ್ವಾಮಿ ದೇವಸ್ವಂ ಮಂಡಳಿಯ ಪ್ರಕಾರ, 350 ಕೆಜಿ ಅರಾವಣಂನಲ್ಲಿ ಕೇವಲ 750 ಗ್ರಾಂ ಏಲಕ್ಕಿಯನ್ನು ಬಳಕೆ ಮಾಡಲಾಗುತ್ತದೆ. ಅರಾವಣಂನಲ್ಲಿ ಅಕ್ಕಿ ಮತ್ತು ಬೆಲ್ಲವೂ ಕೂಡ ಇದ್ದು, ಒಟ್ಟಾರೆ ಪದಾರ್ಥಗಳಲ್ಲಿ ಏಲಕ್ಕಿಯು ಕೇವಲ 0. 20 ರಷ್ಟು ಮಾತ್ರ ಉಪಯೋಗಿಸಲಾಗುತ್ತದೆ. ಈ ನಿಟ್ಟಿನಲ್ಲಿ 200 ಡಿಗ್ರಿಗಿಂತ ಹೆಚ್ಚಿನ ತಾಪಮಾನದಲ್ಲಿ ಅರಾವಣಂ ಅನ್ನು ತಯಾರಿಸುವ ಹಿನ್ನೆಲೆ ಅದು ಹಾನಿಕಾರಕವಲ್ಲ ಎನ್ನುವ ಮೂಲಕ ಮಂಡಳಿಯು ಕೋರ್ಟ್ ಗೆ ಹೇಳಿಕೆ ನೀಡಿದ್ದು, ಆದರೆ, ಈ ವಾದವನ್ನು ನ್ಯಾಯಾಲಯವು ಮಂಡಳಿಯ ಸ್ವೀಕರಿಸಲಿಲ್ಲ ಎನ್ನಲಾಗಿದೆ.
ಈ ಬಾರಿ ಮುಕ್ತ ಟೆಂಡರ್ ಕೈಬಿಟ್ಟು ಸ್ಥಳೀಯವಾಗಿ ಖರೀದಿ ಮಾಡಿರುವ ಕ್ರಮದ ವಿರುದ್ಧ ಮಾಜಿ ಗುತ್ತಿಗೆದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸದ್ಯ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉತ್ತರ ನೀಡುವುದಕ್ಕಾಗಿ ಅಫಿಡವಿಟ್ ಸಲ್ಲಿಸಲು ಎರಡು ವಾರಗಳ ಕಾಲಾವಕಾಶ ಕೋರಿದ ಬಳಿಕ ಅರ್ಜಿಯನ್ನು ಎರಡು ವಾರಗಳ ನಂತರ ಪರಿಶೀಲಿಸಿ ಪರಿಗಣನೆ ನಡೆಸಲು ಮುಂದೂಡಲಾಗಿದೆ.
ಈ ನಡುವೆ ಸಂಕ್ರಾಂತಿಗೆ ಕೆಲವೇ ದಿನ ಬಾಕಿ ಉಳಿದಿದ್ದು, ಅಯ್ಯಪ್ಪನ ಸನ್ನಿಧಿಯಲ್ಲಿ ಮಕರ ಜ್ಯೋತಿಯ ಸೊಬಗನ್ನು ಕಣ್ಣಾರೆ ಕಂಡು ಪುನೀತ ರಾಗಲು ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಶಬರಿಮಲೆಯಲ್ಲಿ ಬೀಡುಬಿಟ್ಟಿದ್ದು, ಇನ್ನು ಕೆಲವರು ಶಬರಿ ಮಲೆಗೆ ಪ್ರಯಾಣ ಬೆಳೆಸಲು ಅಣಿಯಾಗಿದ್ದಾರೆ.