ಪ್ರೇಮ ವೈಫಲ್ಯ | PUC ವಿದ್ಯಾರ್ಥಿನಿ ಆತ್ಮಹತ್ಯೆ

Share the Article

ಪಿಯುಸಿ ವಿದ್ಯಾರ್ಥಿನಿಯೋರ್ವಳು ಪ್ರೇಮ ವೈಫಲ್ಯದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಈ ಪ್ರಕರಣ ಬೆಂಗಳೂರಿನ ರಾಜಗೋಪಾಲನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಸಂಜನಾ (17) ಆತ್ಮಹತ್ಯೆಗೆ ಶರಣಾದವಳು. ಸೆ.28ರಂದು ಲಗ್ಗೆರೆಯ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ‌. ಸಂಜನಾ ಸಾವಿಗೆ ಆಕೆಯನ್ನು ಪ್ರೀತಿಸುತ್ತಿದ್ದ ಹರೀಶ್‌ ಎಂಬಾತನೇ ಕಾರಣ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ.

ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು ಸುಂಕದಕಟ್ಟೆಯ ಖಾಸಗಿ ಕಾಲೇಜಿನಲ್ಲಿ ಕಲಿಯುತ್ತಿದ್ದಳು. ಆಗಸ್ಟ್‌ 26ರಂದು ಕಾಲೇಜಿಗೆ ಹೋಗಿದ್ದ ಆಕೆ ವಾಪಸ್‌ ಮನೆಗೆ ಬಂದಿರಲಿಲ್ಲ. ಗಾಬರಿಗೊಂಡ ಪೋಷಕರು ಸ್ನೇಹಿತರ ಮನೆಗಳಲ್ಲಿ ಹುಡುಕಾಡಿದ್ದಾರೆ. ಕೊನೆಗೆ ಬ್ಯಾಡರಹಳ್ಳಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ್ದ ಪೊಲೀಸರು ಪರಿಚಯಸ್ಥ ಹರೀಶ್‌ ಎಂಬಾತನ ಜತೆ ಸಂಜನಾ ಇರುವುದನ್ನು ಪತ್ತೆಹಚ್ಚಿ ಠಾಣೆಗೆ ಕರೆತಂದಿದ್ದರು. ಬಳಿಕ ಸಂಜನಾಳನ್ನು ಪೋಷಕರ ವಶಕ್ಕೆ ನೀಡಿ ಕಳುಹಿಸಿದ್ದರು.

ಈ ಘಟನೆಯ ನಂತರ ಸಂಜನಾಳನ್ನು ಲಗ್ಗೆರೆಯಲ್ಲಿರುವ ಅವರ ಅಣ್ಣನ ಮನೆಯಲ್ಲಿ ಬಿಟ್ಟಿದ್ದರು. ಆದರೆ ಸೆ.28ರಂದು ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಸಂಜನಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಘಟನಾ ಸ್ಥಳದಲ್ಲಿ ಸಂಜನಾ ಸಾಯುವ ಮುನ್ನ ಬರೆದ ಡೆತ್‌ನೋಟ್‌ ಪತ್ತೆಯಾಗಿದ್ದು ‘ಲೈಫ್‌ ಈಸ್‌ ಪ್ರಾಬ್ಲಮ್ಸ್‌ ಮಿಸ್‌ ಯೂ ತಾತ’ ಎಂದು ಬರೆದಿದ್ದಾರೆ. ಯಾರ ಮೇಲೂ ಆರೋಪಗಳನ್ನು ಮಾಡಿಲ್ಲ. ಸಂಜನಾಗೆ ಅವರ ತಾತನೆಂದರೆ ಬಹಳ ಇಷ್ಟ. ಹೀಗಾಗಿ ತಾತನಿಗೆ ಅಂತಿಮ ಸಂದೇಶ ತಿಳಿಸಿದ್ದಾಳೆ’ ಎಂದು ಅವರ ಕುಟುಂಬಸ್ಥರು ವಿಚಾರಣೆ ವೇಳೆ ಹೇಳಿದ್ದಾರೆ. ಹರೀಶ್‌ನನ್ನು ಪ್ರೀತಿ ಮಾಡುತ್ತಿದ್ದ ಸಂಜನಾ ನಂತರ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆಯಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್‌

ನಾಗಮಂಗಲ ತಾಲೂಕಿಮ ಕರಡನಹಳ್ಳಿ ನಿವಾಸಿ ಹರೀಶ್. ಸಂಜನಾ ತಾಯಿಯದ್ದೂ ಅದೇ ಊರು. ಕಾಣೆಯಾದ ಸಂದರ್ಭದಲ್ಲಿ ಬ್ಯಾಡರಹಳ್ಳಿ ಠಾಣೆಯಿಂದ ಮಗಳನ್ನು ಮನೆಗೆ ಕರೆತಂದು ಕರಡನಹಳ್ಳಿಗೆ ಕರೆದೊಯ್ಯಲಾಗಿತ್ತು. ಈ ವೇಳೆ ಅಲ್ಲಿದ್ದ ಹರೀಶ್‌ ಹಾಗೂ ಅವರ ಚಿಕ್ಕಪ್ಪ ‘ನಿನ್ನನ್ನು ಇನ್ನು ಯಾರೂ ಮದುವೆ ಆಗುವುದಿಲ್ಲ. ನಾನೇ ಆಗಬೇಕು. ಇಲ್ಲದಿದ್ದರೆ ಪಾಳು ಬಾವಿಗೆ ಬಿದ್ದು ಸಾಯಬೇಕು’ ಎಂದು ಬೈದಿದ್ದರು. ಇದೇ ಕಾರಣಕ್ಕೆ ಮನನೊಂದು ಸಂಜನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಹೀಗಾಗಿ, ಹರೀಶ್‌ ಮತ್ತಿತರರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ಸಂಜನಾ ತಾಯಿ ದೂರು ನೀಡಿದ್ದಾರೆ. ಈ ನಿಟ್ಟಿನಲ್ಲಿ ಹೆಚ್ಚಿನ ತನಿಖೆ ನಡೆಸುತ್ತಿದ್ದು, ಆರೋಪಿಗಳ ವಿಚಾರಣೆ ನಡೆಸಲಾಗುವುದು ಎಂದು ಅಧಿಕಾರಿ ಹೇಳಿದರು.

Leave A Reply