Fasting And Weight Loss : ನಿಮ್ಮ ತೂಕ ಇಳಿಕೆಗೆ ಡಯಟ್ ಪ್ಲಾನ್ ನಲ್ಲಿ ಈ ಆಹಾರ ಖಂಡಿತಾ ಇರಲಿ!

ನವರಾತ್ರಿ ಹಬ್ಬದ ಕಳೆ ಪ್ರತಿ ಮನೆಯಲ್ಲೂ ರಾರಾಜಿಸುವ ದಸರಾ ಹಬ್ಬದಲ್ಲಿ ನಾನಾ ಹಬ್ಬದ ಖಾದ್ಯಗಳನ್ನೂ ದೇವರಿಗೆ ಅರ್ಪಿಸಿ ಪೂಜೆ ಮಾಡಿ ಆಚರಿಸುವುದು ವಾಡಿಕೆ. ಇದರ ಜೊತೆಗೆ ಹಬ್ಬದ ಸಮಯದಲ್ಲಿ ಉಪವಾಸ ಮಾಡಿ ವ್ರತಾಚರಣೆ ಮಾಡುವ ಪರಿಪಾಠವು ಕೂಡ ಇದೆ. ಇದರ ನಡುವೆಯೂ ತೂಕ ಇಳಿಸುವ ನಿಟ್ಟಿನಲ್ಲಿ ಡಯಟ್ ಮಾಡುತ್ತಿದ್ದರೆ, ಸರಿಯಾದ ವಿಧಾನ ಅನುಸರಿಸುವುದು ಒಳ್ಳೆಯದು.
ತೂಕ ಇಳಿಕೆಯ ಪ್ರಯತ್ನಗಳಲ್ಲಿ ಆಹಾರ ಕ್ರಮದಲ್ಲಿ ಕಟ್ಟುಪಾಡು ಅಗತ್ಯವಾಗಿದೆ. ಆಧ್ಯಾತ್ಮಿಕ ವಿಷಯದ ಹೊರತಾಗಿಯೂ ಉಪವಾಸ ಮಾಡುವುದು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

ಅಧಿಕ ಕೊಲೆಸ್ಟ್ರಾಲ್, ಹೃದ್ರೋಗ, ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳನ್ನು ತಡೆಯಲು ಉಪವಾಸ ಪ್ರಯೋಜನಕಾರಿ ಆಗಿದೆ. ಇದು ತೂಕ ನಷ್ಟಕ್ಕೆ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಹೆಚ್ಚಿನ ನಾರಿನಂಶವಿರುವ ಮತ್ತು ಕಡಿಮೆ ಕ್ಯಾಲೋರಿಗಳಿರುವ ಆಹಾರಗಳನ್ನು ಮಿತಪ್ರಮಾಣದಲ್ಲಿ ದಿನಕ್ಕೆ ಆರು ಬಾರಿ ಸೇವಿಸಿ ಸಾಕಷ್ಟು ವ್ಯಾಯಮ ಮಾಡಿದರೆ ಉತ್ತಮ ಫಲ ದೊರಕಬಹುದು.

ನವರಾತ್ರಿಯ ಸಮಯದಲ್ಲಿ ತೂಕ ಇಳಿಕೆಯನ್ನು ಬೆಂಬಲಿಸುವ ಆಹಾರ ಸೇವನೆ ಹೀಗೆ ಮಾಡಬಹುದು.
ಊಟದಲ್ಲಿ ಪ್ರೊಟೀನ್ ಮೂಲ, ಕೊಬ್ಬಿನ ಮೂಲ, ತರಕಾರಿಗಳು, ಧಾನ್ಯಗಳಂತಹ ಸಣ್ಣ ಭಾಗ ಸಂಕೀರ್ಣ ಕಾರ್ಬೋಹೈಡ್ರೆಟ್‍ಗಳು ಇರಲೇಬೇಕು.ಚಿಯಾ ಬೀಜಗಳನ್ನು ರಾತ್ರಿ ಹಾಲಿನಲ್ಲಿ ನೆನೆಸಿ ಬೆಳಿಗ್ಗೆ ಸೇವನೆ ಮಾಡಬಹುದು. ಜೊತೆಗೆ ಜೇನುತುಪ್ಪವನ್ನೂ ಸೇರಿಸಬಹುದು. ಈ ಬೀಜಗಳು ದೇಹವನ್ನು ಸಾಕಷ್ಟು ಹೈಡ್ರೀಕರಿಸುವುದರ ಜೊತೆಗೆ ದೇಹಕ್ಕೆ ಉತ್ತಮ ಪ್ರಮಾಣದ ಫೈಬರ್ ಅನ್ನು ಒದಗಿಸುತ್ತದೆ.
ಊಟಕ್ಕೂ ಸುಮಾರು ಅರ್ಧ ಘಂಟೆಗೂ ಮುನ್ನ ನೀರು ಕುಡಿಯುವಂತೆ ಆಯುರ್ವೇದವೂ ಸಲಹೆ ಮಾಡುತ್ತದೆ.

ಈ ಮೂಲಕ ಹಸಿವಿನ ಭಾವನೆಯನ್ನು ಆದಷ್ಟೂ ಮಟ್ಟಿಗೆ ತಗ್ಗಿಸಬಹುದು ಹಾಗೂ ದೇಹಕ್ಕೆ ಅಗತ್ಯ ಆರ್ದ್ರತೆಯನ್ನೂ ಒದಗಿಸಲು ಸಾಧ್ಯವಾಗುತ್ತದೆ. ನೀರಿನ ಬದಲಿಗೆ ಗಿಡಮೂಲಿಕೆಗಳ ಟೀ, ಲಿಂಬೆರಸ ಬೆರೆಸಿದ ನೀರು ಮೊದಲಾದವುಗಳನ್ನೂ ಸೇವಿಸಬಹುದು.
ಬೇಯಿಸಿದ ಆಲೂಗಡ್ಡೆಯನ್ನು ದೇಸಿ ತುಪ್ಪದಲ್ಲಿ ಸ್ವಲ್ಪ ಜೀರಿಗೆಯೊಂದಿಗೆ ಹುರಿದು ತಿನ್ನಬಹುದು. ಅಲ್ಲದೆ ಒಣ ಹಣ್ಣುಗಳ ಜೊತೆಗೆ ತುಪ್ಪವನ್ನು ಸೇವಿಸಬಹುದು. ಈ ಉಪಹಾರವು ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳ ಪರಿಪೂರ್ಣ ಸಂಯೋಜನೆಯಾಗಿದೆ.

ಇದು ದಿನವಿಡೀ ಶಕ್ತಿಯುತವಾಗಿರಲು ಪ್ರೋತ್ಸಾಹಿಸುತ್ತದೆ.
ಆರೋಗ್ಯ ಮತ್ತು ಸ್ನಾಯುಗಳ ದೃವ್ಯರಾಶಿಯನ್ನು ಕಾಪಾಡಲು ಪ್ರೊಟೀನ್ ತಿನ್ನುವುದು ಅತ್ಯಂತ ಅಗತ್ಯ. ಸೂಕ್ತ ಪ್ರಮಾಣದ ಪ್ರೊಟೀನ್ ತಿನ್ನುವುದರಿಂದ ಕಾರ್ಡಿಯೋ ಮೆಟಬಾಲಿಕ್ ಅಪಾಯದ ಅಂಶಗಳನ್ನು, ಹಸಿವು ಮತ್ತು ದೇಹದ ತೂಕವನ್ನು ಸುಧಾರಿಸಬಹುದು.

ಬಕ್‌ವೀಟ್ ಹಿಟ್ಟಿನಿಂದ ಚಿಲ್ಲಾ ತಯಾರಿಸಿ ನೀವು ಅದನ್ನು ಮೊಸರಿನೊಂದಿಗೆ ತಿನ್ನಬಹುದು. ಮೊಸರು ಜೀರ್ಣಾಂಗ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಬಾಳೆಹಣ್ಣು ಮತ್ತು ಕಡಲೆಕಾಯಿ ಸ್ಮೂಥಿಗಳು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇದರಲ್ಲಿರುವ ಕಡಲೆಕಾಯಿ ಮತ್ತು ಬಾಳೆಹಣ್ಣುಗಳು ಪ್ರೋಟೀನ್ ಮತ್ತು ಫೈಬರ್‌ನ ಉತ್ತಮ ಮೂಲವಾಗಿದೆ.

ಸಾಬುದಾನ ಖಿಚಡಿಯ ಜೊತೆಗೆ ಸ್ವಲ್ಪ ಆಲೂಗಡ್ಡೆ ಮತ್ತು ಬೇಳೆ ಕಾಳು ಸೇರಿಸಿ ಮತ್ತು ಸೌತೆಕಾಯಿ ರೈಟಾ ಅಥವಾ ಸಾದಾ ಮೊಸರಿನೊಂದಿಗೆ ಸವಿಯಬಹುದು.ಇದು ತೂಕ ಇಳಿಕೆಗೆ ಅಲ್ಲದೆ ಆರೋಗ್ಯಕ್ಕೆ ಒಳ್ಳೆಯದು. ಇದರಿಂದ ದೀರ್ಘ ಕಾಲದವರೆಗೆ ಹೊಟ್ಟೆ ತುಂಬಿರುತ್ತದೆ. ಇದು ಉತ್ತಮ ಪ್ರಮಾಣದ ಫೈಬರ್ ಹೊಂದಿದೆ. ಜೀರಿಗೆ ಮತ್ತು ಟೊಮೆಟೊ ಸಲಾಡ್ ಸೇವಿಸಬಹುದು.

ಆಲೂಗೆಡ್ಡೆ, ತರಕಾರಿ, ರೊಟ್ಟಿ ಸೇವಿಸಬಹುದು. ಇದು ಡಯಟ್ ಪ್ಲಾನ್ ಗೆ ಸಹಕಾರಿಯಾಗಿದೆ. ಆಲೂಗೆಡ್ಡೆ ಕರಿ, ರಾಜಗಿರಾ ರೊಟ್ಟಿ ಪ್ರೋಟೀನ್ ಅನ್ನು ಹೊಂದಿದ್ದು, ಆಲೂಗಡ್ಡೆ ಸರಿಯಾದ ಪ್ರಮಾಣದಲ್ಲಿ ಕಾರ್ಬೋಹೈಡ್ರೇಟ್ ಅನ್ನು ಒಳಗೊಂಡಿದೆ.
ಆಲಿವ್ ಎಣ್ಣೆ ಮತ್ತು ಅವಕಾಡೋ ಎಣ್ಣೆಯ ಬಳಕೆ ಈ ವಿಷಯದಲ್ಲಿ ಒಳ್ಳೆಯ ಆಯ್ಕೆ. ಬೆಣ್ಣೆ ಮತ್ತು ತೆಂಗಿನ ಎಣ್ಣೆಯಲ್ಲಿ ಅಧಿಕ ಸ್ಯಾಚುರೇಟೆಡ್ ಕೊಬ್ಬು ಇರುವುದರಿಂದ ಒಂದು ಸೂಕ್ತ ಪ್ರಮಾಣದಲ್ಲಿ ಅವುಗಳನ್ನು ಸೇವಿಸುವುದು ಒಳ್ಳೆಯದು.
ಹಬ್ಬದ ಸಮಯದಲ್ಲಿ ಅಲ್ಲದೆ ದಿನನಿತ್ಯ ತೂಕ ಕಡಿಮೆ ಮಾಡಲು ಆಹಾರ ಕ್ರಮದಲ್ಲಿ ಮುಂಜಾಗ್ರತೆ ವಹಿಸುವುದು ಅಗತ್ಯ.
ಹಸಿರು ಸೊಪ್ಪು ತರಕಾರಿಗಳಲ್ಲಿ ಯಥೇಚ್ಛ ಪೋಷಕಾಂಶಗಳಿದ್ದು, ಬ್ರೊಕೋಲಿ, ಹೂಕೋಸು, ಪಾಲಕ್, ಟೊಮ್ಯಾಟೋ, ಕಾಲೆ, ಬ್ರುಸೆಲ್ಸ್ ಮೊಳಕೆಗಳು, ಎಲೆಕೋಸು, ಲೆಟ್ಟಸ್, ಸೌತೆಕಾಯಿ ಮುಂತಾದವುಗಳನ್ನು ಕಡಿಮೆ ಕಾರ್ಬ್ ಅಥವಾ ಕಡಿಮೆ ಕ್ಯಾಲೋರಿ ಆಹಾರ ಕ್ರಮದಲ್ಲಿ ಸೇರಿಸಿಕೊಳ್ಳಬಹುದು. ಆಹಾರ ಕ್ರಮದ ಜೊತೆಗೆ ಸಣ್ಣ ಪ್ರಮಾಣದ ವ್ಯಾಯಾಮ ಕೂಡ ಆರೋಗ್ಯಕ್ಕೆ ಅವಶ್ಯ. ನಡಿಗೆ, ಜಾಗಿಂಗ್, ಓಡುವುದು, ಸೈಕಲ್ ಓಡಿಸುವುದು ಅಥವಾ ಈಜುವುದು ತೂಕ ಇಳಿಕೆ ಮಾಡಲು ನೆರವಾಗುತ್ತವೆ.

Leave A Reply

Your email address will not be published.