ರಾಜ್ಯದ ದೇವಾಲಯಗಳಲ್ಲಿ ಸೆ.30 ರಂದು ಸಾಮೂಹಿಕ ಕುಂಕುಮಾರ್ಚನೆ ; ಶಶಿಕಲಾ ಜೊಲ್ಲೆ ಸೂಚನೆ
ಹಿಂದೂ ಧರ್ಮದ ಆಚರಣೆಗಳ ಪ್ರಕಾರ ನವರಾತ್ರಿಗೆ ವಿಶೇಷ ಸ್ಥಾನವಿದ್ದೂ, ದೈವೀ ಸ್ವರೂಪಿಣಿಯನ್ನು ಭಕ್ತಿಯಿಂದ ಆರಾಧಿಸುವ ಪರಂಪರೆ ಹಿಂದಿನಿಂದಲೂ ಅನುಸರಿಸುತ್ತಾ ಬರಲಾಗುತ್ತಿದೆ.
ಲೋಕ ಕಲ್ಯಾಣಕ್ಕಾಗಿ ನವರಾತ್ರಿಯ ಲಲಿತಾ ಪಂಚಮಿಯಂದು ಧಾರ್ಮಿಕ ದತ್ತಿ ಇಲಾಖಾ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಮಹಿಳೆಯರ ಸಮ್ಮುಖದಲ್ಲಿ ಸಾಮೂಹಿಕವಾಗಿ “ಕುಂಕುಮಾರ್ಚನೆ” ನಡೆಸಲು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ ಸೂಚನೆ ನೀಡಿದ್ದಾರೆ.
ನವರಾತ್ರಿಯ 30:09:2022 ರ ಶುಕ್ರವಾರವು ಲಲಿತಾ ಪಂಚಮಿ ವಿಶೇಷ ದಿನವಾಗಿದ್ದು, ಈ ದಿನದಂದು ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಯಲ್ಲಿ ಬರುವ ದೇವಾಲಯಗಳಲ್ಲಿ ಸಾಮೂಹಿಕವಾಗಿ ಹಿಂದೂ ಮಹಿಳೆಯರನ್ನು ಬರಮಾಡಿಕೊಂಡು ಲೋಕ ಕಲ್ಯಾಣಕ್ಕಾಗಿ ಕುಂಕುಮಾರ್ಚನೆಯನ್ನು ಅರ್ಚಕರ ಮೂಲಕ ಎರಡು ಪಾಳಿಯಲ್ಲಿ ನೆರವೇರಿಸುವಂತೆ ಸಚಿವರು ಸೂಚನೆ ನೀಡಿದ್ದಾರೆ.
ಸೆಪ್ಟೆಂಬರ್ 30 ರಂದು ಸಾಮೂಹಿಕ ಕುಂಕುಮಾರ್ಚನೆಯನ್ನು ನಡೆಸಲು ಕಾರಣಾಂತರಗಳಿಂದ ಸಾಧ್ಯವಾಗದಿದ್ದಲ್ಲಿ ಅಕ್ಟೋಬರ್ 3ರ ಸೋಮವಾರ ದುರ್ಗಾಷ್ಠಮಿಯಂದು ಈ ಕಾರ್ಯಕ್ರಮವನ್ನು ನಡೆಸಬೇಕು ಹಾಗೂ ಈ ಬಗ್ಗೆ ವ್ಯಾಪಕ ಪ್ರಚಾರ ನೀಡುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಚಿವರ ಸೂಚನೆಯಂತೆ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ಸುತ್ತೋಲೆಯನ್ನು ಹೊರಡಿಸಿದ್ದಾರೆ.