ಬಳ್ಳಾರಿ: ಇಲ್ಲಿನ ರೇಡಿಯೊ ಪಾರ್ಕ್ ಬಳಿ ದುಷ್ಕರ್ಮಿಗಳು ಯುವಕನೊಬ್ಬನನ್ನು ಕೊಲೆ ಮಾಡಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.
ಕೊಲೆಯಾದ ವ್ಯಕ್ತಿಯನ್ನು ಮಂಜುನಾಥ (35) ಎಂದು ಗುರುತಿಸಲಾಗಿದೆ.
ಅಕ್ಕಿ ವ್ಯಾಪಾರಿಯಾಗಿದ್ದ ಮಂಜುನಾಥ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು ಎನ್ನಲಾಗಿದೆ. ರಾತ್ರಿ 2 ಗಂಟೆ ಸುಮಾರಿಗೆ ಆರೊಪಿಯೊಬ್ಬ ಮಂಜುನಾಥನ ಜತೆ ಹೊಡೆದಾಟ ಆರಂಭಿಸಿದ್ದ. ಮತ್ತೊಬ್ಬ ಆರೊಪಿ ಸೇರಿಕೊಂಡು ಈತನನ್ನು ಕೆಳಗೆ ಬೀಳಿಸಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಕಾರಿನಲ್ಲಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಿ.ಸಿ.ಟಿ.ವಿ ಕ್ಯಾಮರಾದಲ್ಲಿ ಘಟನೆ ರೆಕಾರ್ಡ್ ಆಗಿದೆ. ಆರೋಪಿಗಳು ಕೊಲೆಯಾದ ಯುವಕನ ಸ್ನೇಹಿತರು ಇರಬಹುದು. ಕುಡಿದ ಅಮಲಿನಲ್ಲಿ ಕೊಲೆ ಮಾಡಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಈ ಕುರಿತು ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.