Black Pepper Benefits : ಕರಿಮೆಣಸು ಮಸಾಲೆ ಪದಾರ್ಥ ಮಾತ್ರವಲ್ಲ | ಇದರ ಅದ್ಭುತ ಪ್ರಯೋಜನದ ಲಿಸ್ಟ್ ಇಲ್ಲಿದೆ
ಬ್ಲ್ಯಾಕ್ ಗೋಲ್ಡ್ ಎಂದು ಹೆಸರು ಪಡೆದಿರುವ ಸಾಂಬಾರ ಪದಾರ್ಥಗಳ ರಾಜ ಪಟ್ಟ ಪಡೆದಿರುವ ಕಾಳು ಮೆಣಸು ಅಥವಾ ಕರಿಮೆಣಸು ಔಷಧೀಯ ಗುಣಗಳ ಖನಿಜ ಎಂದರೂ ತಪ್ಪಾಗಲಾರದು. ಅಡುಗೆ ಮನೆಯಲ್ಲಿ ಸಿಗುವ ಈ ಆಹಾರ ಪದಾರ್ಥದಿಂದ ಅನೇಕ ಪ್ರಯೋಜನಗಳಿವೆ. ಕರಿಮೆಣಸನ್ನು ಬೆಳಗ್ಗೆ ಬೆಚ್ಚಗಿನ ನೀರಿನಲ್ಲಿ ಸೇವಿಸುವುದರಿಂದ ದೇಹದ ತ್ರಾಣ ಹೆಚ್ಚುತ್ತದೆ.
ಹೊಟ್ಟೆನೋವು, ಗ್ಯಾಸ್, ಅಸಿಡಿಟಿಯಂತಹ ಸಮಸ್ಯೆಗಳಿಂದ ಬಳಲುತ್ತಿರುವವರು, ನಿಂಬೆರಸಕ್ಕೆ ಚಿಟಿಕೆ ಕಾಳುಮೆಣಸಿನ ಪುಡಿ ಸೇರಿಸಿ ಕುಡಿದರೆ ಪರಿಹಾರ ಸಿಗುತ್ತದೆ. ಹಾಗೆಯೇ ಕರಿಮೆಣಸಿನಲ್ಲಿ ಪೈಪರಿನ್ ಎಂಬ ರಾಸಾಯನಿಕವಿರುವುದರಿಂದ ಕರಿಮೆಣಸಿನ ಪುಡಿಯನ್ನು ಸೇವಿಸಿದರೆ ಒತ್ತಡ, ಖಿನ್ನತೆಯು ಕೂಡ ದೂರವಾಗುತ್ತದೆ.
ನೆಗಡಿ, ಕೆಮ್ಮು, ಕಫದಿಂದ ಬಳಲುತ್ತಿರುವವರು, ಕರಿಮೆಣಸಿನಿಂದ ಮಾಡಿದ ಸಾರನ್ನು ಊಟ ಮಾಡಿದರೆ, ಪರಿಹಾರ ಸಿಗುತ್ತದೆ . ಶೀತದಿಂದ ಉಂಟಾಗುವ ಕಫದಿಂದ ಮುಕ್ತಿ ಪಡೆಯಲು, ಚಿಟಿಕಿ ಕರಿಮೆಣಸಿನಲ್ಲಿ ಒಂದು ಚಮಚ ಅರಿಶಿನವನ್ನು ಬೆರೆಸಿ ಸೇವಿಸುವುದು ಉತ್ತಮ. ಒಣ ಶುಂಠಿ, ಕರಿಮೆಣಸು, ಏಲಕ್ಕಿ ಮತ್ತು ಸಕ್ಕರೆಯನ್ನು ಪುಡಿ ಮಾಡಿಕೊಂಡು ಅದಕ್ಕೆ ಒಣ ದ್ರಾಕ್ಷಿ ಮತ್ತು ತುಳಸಿ ಎಲೆಗಳ ಬೀಜಗಳನ್ನು ಪುಡಿಮಾಡಿ ಮಿಶ್ರಣ ಮಾಡಿ, ಈ ಮಿಶ್ರಣದ ಮಾತ್ರೆಗಳನ್ನು ತಯಾರಿಸಿ ಒಣಗಿಸಿ ಶೀತದ ಅಲರ್ಜಿ ಇದ್ದಾಗ ಬೆಳಿಗ್ಗೆ ಮತ್ತು ಸಂಜೆ ಬೆಚ್ಚಗಿನ ನೀರಿನಿಂದ ಈ ಮಾತ್ರೆಗಳನ್ನು ತೆಗೆದುಕೊಂಡು ಪರಿಹಾರ ಕಂಡುಕೊಳ್ಳಬಹುದು.
ಇಲ್ಲವೇ, ಚಹಾಕ್ಕೆ ಕರಿಮೆಣಸು ಮತ್ತು ತುಳಸಿ ಎಲೆಗಳನ್ನು ಸೇರಿಸಿ ಕುಡಿದರೆ, ಇದರಿಂದ ಶೀತ ಕೆಮ್ಮು ಮಾಯವಾಗುತ್ತದೆ. ಅಷ್ಟೇ ಅಲ್ಲದೆ ಬೆಲ್ಲದೊಂದಿಗೆ ಕಾಳು ಮೆಣಸನ್ನು ಮಿಶ್ರ ಮಾಡಿ ಸಣ್ಣ ಮಾತ್ರೆಗಳನ್ನಾಗಿಸಿ ಕೂಡ ಸೇವಿಸಬಹುದು..ಇದನ್ನು ನಿರಂತರ ಸೇವಿಸುವುದರಿಂದ ಕೆಮ್ಮು, ಗಂಟಲು ಕೆರೆತ, ಶೀತದ ಸಮಸ್ಯೆ ದೂರವಾಗುತ್ತದೆ.
ಹಾಗೆಯೇ ಮೂಗಿನಿಂದ ರಕ್ತಸ್ರಾವವಾಗುವ ಸಮಸ್ಯೆ ಇದ್ದರೆ, ಅದನ್ನು ನಿಲ್ಲಿಸಲು, ಬೆಲ್ಲದೊಂದಿಗೆ ಕರಿ ಮೆಣಸನ್ನು ಮಿಶ್ರ ಮಾಡಿ ಸೇವಿಸಬಹುದು. ಶ್ವಾಸಕೋಶ ಮತ್ತು ಉಸಿರಾಟದ ತೊಂದರೆಗಳಿದ್ದಲ್ಲಿ ಕರಿಮೆಣಸು ಮತ್ತು ಪುದೀನ ಚಹಾವನ್ನು ಕುಡಿಯಬೇಕು. ಇದಲ್ಲದೆ, ಕರಿಮೆಣಸು, ತುಪ್ಪ ಮತ್ತು ಸಕ್ಕರೆ ಕ್ಯಾಂಡಿಯನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ಬೆಳಿಗ್ಗೆ ಮತ್ತು ಸಂಜೆ ಒಂದು ಚಮಚವನ್ನು ತೆಗೆದುಕೊಂಡರೆ, ಇದರಿಂದ ಸಹ ಉಸಿರಾಟ ಸಮಸ್ಯೆಗೆ ಪರಿಹಾರ ಕಾಣಬಹುದು.
ಕರಿಮೆಣಸು, ಜಾಯಿಕಾಯಿ, ಕಲ್ಲು ಉಪ್ಪು ಮತ್ತು ಕರಿಮೆಣಸಿನ ಮಿಶ್ರಣವನ್ನು ಮಾಡಿ, ಕೆಲವು ಹನಿ ಸಾಸಿವೆ ಎಣ್ಣೆಯನ್ನು ಸೇರಿಸಿ ಹಲ್ಲು ಮತ್ತು ಒಸಡುಗಳಿಗೆ ಹಚ್ಚಿದ ಬಳಿಕ ಬಾಯಿಯನ್ನು ತೊಳೆದರೆ, ಒಸಡು ನೋವಿನಿಂದ ಪರಿಹಾರವನ್ನು ಪಡೆಯಬಹುದು. ಕರಿಮೆಣಸು ಹಲ್ಲುಗಳಿಗೆ ತುಂಬಾ ಉಪಯುಕ್ತವಾಗಿದೆ. ಕರಿಮೆಣಸನ್ನು ಉಪ್ಪಿನೊಂದಿಗೆ ಬೆರೆಸಿ ಬ್ರಷ್ ಮಾಡಬೇಕು. ಇದು ಹಲ್ಲುಗಳ ಹೊಳಪು ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ ಅಲ್ಲದೆ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು, ಕರಿಮೆಣಸು ಬೀಜಗಳೊಂದಿಗೆ ಒಣದ್ರಾಕ್ಷಿಗಳನ್ನು ದಿನಕ್ಕೆ ಎರಡು ಮೂರು ಬಾರಿ ತೆಗೆದುಕೊಳ್ಳುವುದು ಒಳ್ಳೆಯದು.
ಕರಿಮೆಣಸು ವಿಟಮಿನ್ ಸಿ, ಎ, ಫ್ಲೇವನಾಯ್ಡ್‌ಗಳು, ಕ್ಯಾರೋಟಿನ್ ಮತ್ತು ಇತರ ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದ್ದು, ಹಾಗಾಗಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಅನ್ನು ತಡೆಯುತ್ತದೆ. ಒಂದು ಕಪ್ ನೀರಿನಲ್ಲಿ ಅರ್ಧ ನಿಂಬೆ ರಸ, ಅರ್ಧ ಟೀಸ್ಪೂನ್ ಕರಿಮೆಣಸು ಮತ್ತು ಅರ್ಧ ಸ್ಪೂನ್ ಕಪ್ಪು ಉಪ್ಪು ಬೆರೆಸಿ ಕುಡಿಯುವುದರಿಂದ ಗ್ಯಾಸ್ ಸಮಸ್ಯೆ ನಿವಾರಣೆಯಾಗುತ್ತದೆ.
ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದಾಗ ಅರ್ಧ ಗ್ಲಾಸ್ ಉಗುರು ಬೆಚ್ಚಗಿನ ನೀರಿನಲ್ಲಿ ಒಂದು ಟೀಸ್ಪೂನ್ ಕರಿಮೆಣಸು ಪುಡಿಯನ್ನು ಬೆರೆಸಿ ಕುಡಿಯಿರಿ. ಎರಡು ಗಂಟೆಗಳ ಅಂತರದಲ್ಲಿ ಹೀಗೆ ಕುಡಿಯುತ್ತಲೇ ಇರುವುದರಿಂದ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ.
ಕರಿಮೆಣಸು ಮತ್ತು ಕಪ್ಪು ಉಪ್ಪನ್ನು ಮೊಸರು ಅಥವಾ ಮಜ್ಜಿಗೆಯಲ್ಲಿ ಬೆರೆಸಿ ಕುಡಿಯುವುದರಿಂದ ಜೀರ್ಣಕಾರಿ ಸಮಸ್ಯೆಗೆ ಪರಿಹಾರ ಪಡೆಯಬಹುದು. ಅಲ್ಲದೆ, ಈ ರೀತಿಯ ಪಾನೀಯ ಕುಡಿಯುವುದರಿಂದ ಹೊಟ್ಟೆಯಲ್ಲಿ ಸೂಕ್ಷ್ಮಜೀವಿಗಳು ಸಾಯುವುದಲ್ಲದೇ , ಹೊಟ್ಟೆ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ದಿನನಿತ್ಯದ ದಿನಚರಿಯಲ್ಲಿ ಕಾಳುಮೆಣಸಿನ ಸೇವನೆಯಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.