ಕಡಬದ ‘ಪೊಟ್ಟು ಕೆರೆ’ಗೆ ಅಭಿವೃದ್ಧಿ ಭಾಗ್ಯ!! ಅಮೈ ಕೆರೆಯ ಬೆನ್ನಲ್ಲೇ ಮಾನಸ ಸರೋವರವಾಗಲಿದೆ ತಲೆಮಾರುಗಳೇ ಕಂಡ ‘ಪೊಟ್ಟು ಕೆರೆ’!!

ಕಡಬ: ತಲೆಮಾರುಗಳೇ ಕಂಡ ತಾಲೂಕಿನ ಕುಟ್ರುಪ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಹಳೇ ಸ್ಟೇಷನ್ ಬಳಿ ಇರುವ ಪೊಟ್ಟು ಕೆರೆ ಎಂದೇ ಹೆಸರುವಾಸಿಯಾಗಿರುವ ವಿಶಾಲವಾದ ಕೆರೆಯೊಂದಕ್ಕೆ ಕೊನೆಗೂ ಅಭಿವೃದ್ಧಿ ಭಾಗ್ಯ ಒಲಿದು ಬಂದಿದ್ದು, ಮಿಷನ್ ಅಮೃತ್ ಸರೋವರ್ ಯೋಜನೆಯಡಿಯಲ್ಲಿ ಪೊಟ್ಟು ಕೆರೆ ಮಾನಸ ಸರೋವರವಾಗಲಿದೆ.

ಕಳೆದ ಬಾರಿ ರಾಮಕುಂಜ ಸಮೀಪದ ಅಮೈ ಕೆರೆಗೆ ಅಭಿವೃದ್ಧಿ ಭಾಗ್ಯ ಒಲಿದಿದ್ದು, ಹಲವು ಸಂಘ ಸಂಸ್ಥೆಗಳ ನೆರವಿನಿಂದ ಅಮೈ ಕೆರೆಯನ್ನು ಹೂಳೆತ್ತುವ ಮೂಲಕ ಅಭಿವೃದ್ಧಿ ಪಡಿಸಿ, ಈ ಬಾರಿ ಕೆರೆಯ ಸುತ್ತ ಗಾರ್ಡನ್ ವಿಶ್ರಾಂತಿ ಕೊಠಡಿ ನಿರ್ಮಿಸಲಾಗಿದೆ.ಕಡಬದ ಪೊಟ್ಟು ಕೆರೆಗೆ ತಲೆಮಾರುಗಳ ಇತಿಹಾಸವಿದ್ದು,ಹಿಂದಿನ ಕಾಲದಿಂದಲೂ ಈ ಕೆರೆಯ ನೀರನ್ನು ಯಾರೂ ಉಪಯೋಗಿಸುತ್ತಿರಲಿಲ್ಲ.ಪ್ರಾಣಿಗಳ ಮೃತದೇಹಗಳನ್ನು, ಇನ್ನಿತರ ಕಸ ಕಡ್ಡಿಗಳನ್ನು ಕೆರೆಗೆ ಎಸೆಯುತ್ತಿದ್ದ ಪರಿಣಾಮ ಜಾನುವಾರುಗಳು ಮಾತ್ರ ತಮ್ಮ ದಣಿವು ಆರಿಸಿಕೊಳ್ಳಲು ಈ ಕೆರೆಯನ್ನು ಅವಲಂಬಿಸುತ್ತಿದ್ದವು ಎನ್ನುವುದನ್ನು ಸ್ಥಳೀಯರು ನೆನಪಿಸಿಕೊಳ್ಳುತ್ತಾರೆ.

ಕಳೆದ ಸುಮಾರು 25 ವರ್ಷಗಳ ಹಿಂದೆ ಸರಕಾರಿ ಜಮೀನನ್ನು ಅತಿಕ್ರಮಣ ಮಾಡುವ ಹುನ್ನಾರವೊಂದು ನಡೆದಿದ್ದು, ಮಾಧ್ಯಮಗಳಲ್ಲಿ ವರದಿ ಬಿತ್ತರವಾದ ಬೆನ್ನಲ್ಲೇ ಅತಿಕ್ರಮಣಕಾರರ ಪ್ರಯತ್ನ ವ್ಯರ್ಥವಾಗಿತ್ತು.ಗ್ರಾಮೀಣ ಭಾಗಗಳ ಕೆರೆಗಳನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಅಮೃತ್ ಸರೋವರ್ ಯೋಜನೆಗೆ ಏಪ್ರಿಲ್ 24ರ ಪಂಚಾಯತ್ ರಾಜ್ ದಿನದಂದು ಚಾಲನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ತಾಲೂಕಿನ ಆಯ್ದ 09 ಗ್ರಾಮಗಳ ಕೆರೆಗಳನ್ನು ಸ್ಥಳೀಯ ಸಂಘ ಸಂಸ್ಥೆಗಳ ನೆರವು ಪಡೆದುಕೊಂಡು ಅಭಿವೃದ್ಧಿ ಪಡಿಸಲು ಯೋಜನೆ ರೂಪಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಪೊಟ್ಟು ಕೆರೆಗೂ ಅಭಿವೃಧಿಯಾಗುವ ಭಾಗ್ಯ ಬಂದೊದಗಿದೆ.

ಅಲ್ಲದೇ ಸುಬ್ರಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಏನೆಕಲ್ಲು ಗ್ರಾಮದ ಅಂಗಾರವರ್ಮನ ಕೆರೆ, ಕಾಂತು ಕುಮಾರಿ ಕೆರೆ,ಸವನೂರು ಗ್ರಾಮದ ಕೊಂಬ ಕೆರೆ,ರಾಮಕುಂಜ ಗ್ರಾಮದ ಎತ್ತರಪಡ್ಪು ಕೆರೆ, ನೆಲ್ಯಾಡಿ ಗ್ರಾಮದ ಪಡುಬೆಟ್ಟು ಕೆರೆ, ಪೆರಾಬೆ ಗ್ರಾಮದ ಕೆದ್ದೋಟೆ ಕೆರೆ,ಐತ್ತೂರು ಗ್ರಾಮದ ಸುಳ್ಯ ಕೆರೆಯನ್ನು ಅಭಿವೃದ್ಧಿಗೆ ಗೊತ್ತು ಪಡಿಸಲಾಗಿದ್ದು,ಅಭಿವೃದ್ಧಿ ಕಾಮಗಾರಿಗಾಗಿ ಈಗಾಗಲೇ ಕೆರೆಯ ಸುತ್ತ ಬೇಲಿ ಅಳವಡಿಸಿದ್ದು, ಮೊದಲ ಹಂತದ ಕಾಮಗಾರಿಯ ಹಿನ್ನೆಲೆಯಲ್ಲಿ ನಿವೃತ್ತ ಸೈನಿಕ,ರಾಷ್ಟ್ರ ಪ್ರಶಸ್ತಿ ವಿಜೇತರಿಂದ ಧ್ವಜಾರೋಹಣವನ್ನು ನೆರವೇರಿಸಲಾಗಿದೆ.

?️:ದೀಪಕ್ ಹೊಸ್ಮಠ

Leave A Reply

Your email address will not be published.