Energy Drink : ಬೆಳಗ್ಗೆ ಈ ತರಕಾರಿ ಜ್ಯೂಸ್ ಕುಡಿಯಿರಿ | ಎನರ್ಜಿ ಡ್ರಿಂಕ್ ಸೂಪರ್

ಆರೋಗ್ಯ ವೃದ್ಧಿಸಲು ಪ್ರತಿಯೊಬ್ಬರು ತರಹೇವಾರಿ ತರಕಾರಿ, ಪೋಷಕಾಂಶ ಉಳ್ಳ ಆಹಾರ ಸೇವನೆ ಮಾಡುವುದು ಸಹಜ. ನಾವು ದಿನನಿತ್ಯ ಬಳಸುವ ಅನೇಕ ಆಹಾರ ಸಾಮಗ್ರಿಗಳು ಆರೋಗ್ಯ ಕಾಪಾಡಲು ನೆರವಾಗುತ್ತವೆ. ದಿನನಿತ್ಯದ ದಿನಚರಿಯಲ್ಲಿ ಹಿತಮಿತವಾಗಿ, ನಿಯಮಿತ ಪ್ರಮಾಣದಲ್ಲಿ ಸತ್ವಯುತ ಆಹಾರ ಜೊತೆಗೆ ದೇಹಕ್ಕೆ ಬೇಕಾದಷ್ಟು ವ್ಯಾಯಮ ಮಾಡುವುದು ಉತ್ತಮ.

ತರಕಾರಿಗಳಲ್ಲಿ ಒಂದಾದ ಟೊಮೆಟೊ ಹಣ್ಣು ರುಚಿಕರ ಮತ್ತು ಪೌಷ್ಟಿಕವಾಗಿದ್ದು, ಟೊಮೆಟೊ ಜ್ಯೂಸ್ ಸೇವನೆಯಿಂದ ಸಮತೋಲನದ ಜೊತೆಗೆ ಹಲವಾರು ಪೋಷಕಾಂಶಗಳೂ ಕೂಡ ದೊರಕುತ್ತವೆ. ವಿಶೇಷವಾಗಿ, ಟೊಮೆಟೊ ಹಣ್ಣಿಗೆ ಬಣ್ಣ ಬರಲು ಕಾರಣವಾಗಿರುವ ಲೈಕೋಪೀನ್ ಎಂಬ ಕ್ಯಾರೋಟಿ ನಾಯ್ಡ್ , ಕೊಲೆಸ್ಟ್ರಾಲ್ ಕಡಿಮೆ ಮಾಡುವ, ಹೃದಯಸ್ತಂಭನದಿಂದ ರಕ್ಷಿಸುವುದಲ್ಲದೆ, ಮೂಳೆ, ಕಣ್ಣುಗಳಿಗೆ ಮತ್ತು ತ್ವಚೆಯ ರಕ್ಷಣೆಗು ಟೊಮೇಟೊ ನೆರವಾಗುತ್ತದೆ. ದೀರ್ಘ ಕಾಲ ಕೆಲಸ ಮಾಡಿ ಆಯಾಸಗೊಂಡಾಗ ಮಾರುಕಟ್ಟೆಯಲ್ಲಿ ದೊರೆಯುವ ಎನರ್ಜಿ ಡ್ರಿಂಕ್ ಕುಡಿಯುವ ಅಭ್ಯಾಸ ಹೆಚ್ಚಿನವರಿಗೆ ಇದೆ. ಇದರ ಬದಲಿಗೆ ನೈಸರ್ಗಿಕವಾಗಿ ಮನೆಯಲ್ಲೇ ಜ್ಯೂಸ್ ಮಾಡಿ ಕುಡಿದರೆ ಇಲ್ಲದ ಅನಾರೋಗ್ಯಕ್ಕೆ ತುತ್ತಾಗುವ ಪ್ರಮೇಯ ಬರುವುದಿಲ್ಲ. ಟೊಮ್ಯಾಟೊ ಜ್ಯೂಸ್ ಆರೋಗ್ಯಕ್ಕೆ ಟಾನಿಕ್‌ನಂತೆ ಕಾರ್ಯ ನಿರ್ವಹಿಸುತ್ತದೆ. ಭಾರೀ ವ್ಯಾಯಾಮದ ಬಳಿಕ ದೇಹಕ್ಕೆ ಶಕ್ತಿಯನ್ನು ನೀಡುವ ಟೊಮ್ಯಾಟೊ ರಸವು ಉತ್ಕರ್ಷಣ ನಿರೋಧಕಗಳು, ಪ್ರೋಟೀನ್ಗಳು, ಫೈಬರ್, ಕಾರ್ಬೋಹೈಡ್ರೇಟ್ಗಳು, ವಿಟಮಿನ್ಗಳು, ಪೊಟ್ಯಾಸಿಯಮ್ ಮತ್ತು ರಂಜಕದಂತಹ ಪ್ರಮುಖ ಖನಿಜಗಳನ್ನು ಹೊಂದಿದೆ. ಟೊಮಾಟೋ ರಸದ ಸೇವನೆಯಿಂದ ದೇಹದಲ್ಲಿ ಸಂಗ್ರಹವಾಗಿದ್ದ ಕಲ್ಮಶಗಳು ನಿವಾರಣೆಯಾಗುತ್ತವೆ.

ವಿಶೇಷವಾಗಿ ಟೊಮಾಟೋದಲ್ಲಿರುವ ಕ್ಲೋರೀನ್ ಮತ್ತು ಗಂಧಕದ ಅಂಶ ಯಕೃತ್ ಮತ್ತು ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸಿ ಇವು ಪೂರ್ಣಕ್ಷಮತೆಯಿಂದ ಕಾರ್ಯನಿರ್ವಹಿಸಲು ನೆರವಾಗಿ, ದೇಹವನ್ನು ಕಲ್ಮಶರಹಿತವಾಗಿರಿಸಲು ನೆರವಾಗುತ್ತವೆ. ಟೊಮ್ಯಾಟೊ ರಸವು ವಿಟಮಿನ್ ಬಿ-3, ಇ ಮತ್ತು ಲೈಕೋಪೀನ್ ಅನ್ನು ಹೊಂದಿರುತ್ತದೆ. ಇವು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ಪೊಟಾಶಿಯಂ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದು ಹೃದಯಾಘಾತದ ಸಾಧ್ಯತೆಯನ್ನು ಬಹಳವಾಗಿ ಕಡಿಮೆ ಮಾಡುತ್ತದೆ.

ಟೊಮೆಟೋ ಜ್ಯೂಸ್ ಕುಡಿದರೆ ಅದು ದಿನವಿಡಿ ದೇಹದಲ್ಲಿ ಶಕ್ತಿ ಕಾಪಾಡುವುದರ ಜೊತೆಗೆ ಹಸಿವು ಕಡಿಮೆ ಆಗುತ್ತದೆ. ಟೊಮೆಟೋ ದೀರ್ಘಕಾಲ ತನಕ ದೇಹವನ್ನು ಹೈಡ್ರೇಟ್ ಆಗಿಡುತ್ತದೆ. ಇದರಿಂದ ಟೊಮೆಟೋ ಜ್ಯೂಸ್ ಕುಡಿದರೆ ಅದರಿಂದ ತೂಕ ಇಳಿಸಲು ಸಹಕಾರಿಯಾಗಿದೆ.ಟೊಮ್ಯಾಟೋ ರಸದಲ್ಲಿ ವಿಟಮಿನ್ ಕೆ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿರುವುದಲ್ಲದೆ, ಅತ್ಯಧಿಕ ಪ್ರಮಾಣದ ವಿರೋಧಿ ಆಕ್ಸಿಡೆಂಟ್ಸ್ ಇರುವುದರಿಂದ ಇದರ ರಸ ಸೇವನೆಯಿಂದ ಅನೇಕ ಪ್ರಯೋಜನಗಳಿವೆ. ಇದರಿಂದ ಫ್ರೀ ರಾಡಿಕಲ್ ವಿರುದ್ಧ ಹೋರಡಲು ಸಹಾಯವಾಗುತ್ತದೆ. ಫ್ರೀ ರಾಡಿಕಲ್ , ಹೆಚ್ಚಿನ ವಿರೋಧಿ ಆಕ್ಸಿಡೆಂಟ್ಸ್‌ನ ಪೂರೈಕೆ ಇದ್ದರೆ ಮೂಳೆಯ ಆರೋಗ್ಯವೂ ಅತ್ಯುತ್ತಮವಾಗಿರುತ್ತದೆ.

ಟೊಮಾಟೋದಲ್ಲಿರುವ ಉತ್ತಮ ಪ್ರಮಾಣದ ಫೈಟೋ ನ್ಯೂಟ್ರಿಯೆಂಟ್ ಗಳು ರಕ್ತದಲ್ಲಿ ಅಸಹಜ ಪ್ರಮಾಣದಲ್ಲಿರುವ ಪ್ಲೇಟ್ಲೆಟ್ ಎಂಬ ಕಿರುತಟ್ಟೆಗಳನ್ನು ಸಾಮಾನ್ಯ ಪ್ರಮಾಣಕ್ಕಿಳಿಸುತ್ತದೆ. ಈ ಮೂಲಕ ಅನಗತ್ಯವಾಗಿ ರಕ್ತನಾಳಗಳ ಒಳಗೆ ರಕ್ತ ಹೆಪ್ಪುಗಟ್ಟುವುದನ್ನು ತಡೆಯಬಹುದು. ಹಾಗಾಗಿ, ಈಗಾಗಲೇ ಹೃದಯಸಂಬಂಧಿ ತೊಂದರೆಗಳಿರುವ ವ್ಯಕ್ತಿಗಳಿಗೆ ಟೊಮಾಟೋ ರಸ ತುಂಬಾ ಪ್ರಯೋಜನಕಾರಿಯಾಗಿದೆ.

ಟೊಮೆಟೊ ರಸವು ಧೂಮಪಾನದಿಂದ ದೇಹಕ್ಕೆ ಉಂಟಾಗುವ ಹಾನಿಯನ್ನು ಕಡಿಮೆ ಮಾಡುತ್ತದೆ. ಟೊಮೆಟೊದಲ್ಲಿ ಕ್ಲೋರೊಜೆನಿಕ್ ಆಮ್ಲ ಮತ್ತು ಕೂಮರಿಕ್ ಆಮ್ಲವಿದೆ. ಇವು ಸಿಗರೇಟ್ ನಿಂದ ದೇಹದಲ್ಲಿ ಉತ್ಪತ್ತಿಯಾಗುವ ಕಾರ್ಸಿನೋಜೆನ್ ಗಳ ವಿರುದ್ಧ ಹೋರಾಡುತ್ತವೆ. ಟೊಮಾಟೋದಲ್ಲಿರುವ ಬೀಟಾ ಕ್ಯಾರೋಟೀನ್, ಲ್ಯೂಟಿನ್ ಮತ್ತು ಜಿಯಾಕ್ಸಾಂಥಿನ್ ಎಂಬ ಫೈಟೋ ನ್ಯೂಟ್ರಿಯೆಂಟ್‍ಗಳು ಕಣ್ಣಿನ ಆರೋಗ್ಯವನ್ನು ಕಾಪಾಡುತ್ತವೆ.

ಟೊಮೆಟೋವು ಅಧಿಕ ನಾರಿನಾಂಶವನ್ನು ಕೂಡ ಒಳಗೊಂಡಿದೆ. ಟೊಮೆಟೋ ಜ್ಯೂಸ್ ಕುಡಿದರೆ ಅದರಿಂದ ಕೊಲೆಸ್ಟ್ರಾಲ್ ತಗ್ಗಿಸಬಹುದು. ವಿಟಮಿನ್ ಸಿ ಮತ್ತು ನಿಯಾಸಿನ್ ನಿಂದ ಕೊಲೆಸ್ಟ್ರಾಲ್ ನ್ನು ತಟಸ್ಥಗೊಳಿಸಬಹುದು. ಟೊಮ್ಯಾಟೋ ರಸದಲ್ಲಿ ಉತ್ತಮ ಪ್ರಮಾಣದ ವಿಟಮಿನ್ ಸಿ ಇದೆ. ಇದು ರೋಗನಿರೋಧಕ ಶಕ್ತಿಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ರೋಗಗಳನ್ನು ತಡೆಯಲು ಸಹಾಯ ಮಾಡುತ್ತದೆ. ಟೊಮೆಟೊ ಜ್ಯೂಸ್ ಶೀತ ಮತ್ತು ಜ್ವರದಂತಹ ಆರೋಗ್ಯ ಸಮಸ್ಯೆಗಳಿಂದಲೂ ಕೂಡ ಪಾರುಮಾಡುತ್ತದೆ.

ಆದರೆ, ಕಿಡ್ನಿ ಸಮಸ್ಯೆ ಇದ್ದರೆ ಟೊಮೆಟೊ ರಸವನ್ನು ಬಹಳ ಸೀಮಿತ ಪ್ರಮಾಣದಲ್ಲಿ ಸೇವಿಸುವುದು ಉತ್ತಮ. ಟೊಮೆಟೊ ಅಲರ್ಜಿ ಇರುವವರು ಟೊಮೆಟೊ ಜ್ಯೂಸ್ ಕುಡಿಯುವುದನ್ನು ತಪ್ಪಿಸಬೇಕು. ಗರ್ಭಿಣಿಯರು ಟೊಮೆಟೊ ರಸವನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು. ನಿತ್ಯವೂ ಟೊಮಾಟೋ ರಸವನ್ನು ಕುಡಿಯುವ ಅಭ್ಯಾಸ ಹೊಂದಿದ್ದರೆ, ತ್ವಚೆಗೆ ಉತ್ತಮ ಪೋಷಣೆ ದೊರಕುತ್ತದೆ. ಹಾಗಾಗಿ, ಮೊಡವೆಗಳಾಗದಂತೆ ಮತ್ತು ಸೂರ್ಯನ ಹಾನಿಕಾರಕ ಅತಿನೇರಳೆ ಕಿರಣಗಳಿಂದ ಜೀವಕೋಶಗಳು ಘಾಸಿಗೊಳ್ಳದಂತೆ ತಡೆಯುತ್ತದೆ. ಟೊಮೇಟೊ ಜ್ಯೂಸ್ ಕುಡಿದರೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು.

Leave A Reply

Your email address will not be published.