ಪುಟ್ಟ ಕಂದನ ಮೈ ಬಣ್ಣವೇ ಅಮ್ಮನ ಕೊಲೆಗೆ ಕಾರಣ | ಎರಡೂವರೆ ವರ್ಷದ ಮಗು ಹೇಳಿತು ಅಪ್ಪನ ಕೊಲೆ ಕೃತ್ಯ
ತಾನೇ ಹೆತ್ತ ಮಗು ಬಣ್ಣದಲ್ಲಿ ಕಪ್ಪಾಗಿದ್ದುದ್ದಕ್ಕೆ ಪತ್ನಿಯ ಶೀಲ ಶಂಕಿಸಿ ಪತಿ ಮಹಾಶಯನೊಬ್ಬ ಕೊಲೆ ಮಾಡಿದ ಘಟನೆಯೊಂದು ನಡೆದಿದೆ. ಆಂಧ್ರಪ್ರದೇಶದ ಕಾಕಿನಾಡ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ತನ್ನ ಹಾಗೂ ಪತ್ನಿಯ ಬಣ್ಣ ಬಿಳಿಯಾಗಿದ್ದರೂ, ಮಗುವಿನ ಬಣ್ಣ ಮಾತ್ರ ಕಪ್ಪು ಎಂದು ಸಂಶಯಿಸಿ ಕೊಲೆ ಮಾಡಿದ್ದಾನೆ.
ಇಂಥದ್ದೊಂದು ಕೃತ್ಯ ಎಸಗಿದಾತ ಒಡಿಶಾದ ಉಮ್ಮರ್‌ಕೋಟ್‌ನ ಸಿಲಾಟಿಗಾಂವ್ ಗ್ರಾಮದ ಮಾಣಿಕ್ ಘೋಷ್. ಈತನ ಕೃತ್ಯಕ್ಕೆ ಬಲಿಯಾದವಳು ಈತನ ಪತ್ನಿ ಕರಗಾಂವ್ ಗ್ರಾಮದ ಲಿಪಿಕಾ ಮಂಡಲ್. ಮೊದಲು ಸಹಜ ಸಾವು ಎಂದೇ ಬಿಂಬಿತವಾಗಿದ್ದ ಈ ಸಾವಿನ ಪ್ರಕರಣ ಕೊನೆಗೆ ಕೊಲೆ ಎನ್ನುವುದು ತಿಳಿದಿದೆ.
ಘಟನೆ ವಿವರ: ಏಳು ವರ್ಷಗಳ ಹಿಂದೆ ಇವರಿಬ್ಬರ ಮದುವೆ ಆಗಿದೆ. ಮದುವೆಯ ನಂತರ ಇಬ್ಬರೂ ಉದ್ಯೋಗಕ್ಕಾಗಿ ಆಂಧ್ರಪ್ರದೇಶದ ಕಾಕಿನಾಡಕ್ಕೆ ವಲಸೆ ಬಂದಿದ್ದರು. ಎರಡೂವರೆ ವರ್ಷಗಳ ಹಿಂದೆ ಈ ದಂಪತಿಗೆ ಹೆಣ್ಣು ಮಗು ಹುಟ್ಟಿತ್ತು.
ಆದರೆ ನಾವಿಬ್ಬರೂ ಬೆಳ್ಳಗಿದ್ದರೂ ಮಗು ಯಾಕೆ ಕಪ್ಪಗೆ ಎಂದು ಈ ಪತಿ ಸದಾ ಪತ್ನಿಯ ಬಗ್ಗೆ ಸಂದೇಹ ವ್ಯಕ್ತಪಡಿಸುತ್ತಿದ್ದ. ಇದೇ ವಿಚಾರವಾಗಿ ದಂಪತಿ ನಡುವೆ ಹಲವು ಬಾರಿ ಜಗಳ ಕೂಡ ಆಗಿದೆ. ಹಾಗಾಗಿ ಕಿರುಕುಳ ಸಹಿಸದೇ ಲಿಪಿಕಾ ತವರಿಗೆ ಬಂದಿದ್ದಳು. ನಂತರ ಕುಟುಂಬಸ್ಥರು ಇಬ್ಬರನ್ನೂ ರಾಜಿ ಮಾಡಿದ್ದರು. ಗಂಡನ ಮನೆಗೆ ಲಿಪಿಕಾ ವಾಪಸಾಗಿದ್ದರು.
ಆದರೆ ಇದೇ ತಿಂಗಳ 18ರಂದು ರಾತ್ರಿ ಲಿಪಿಕಾಗೆ ಮೂರ್ಛೆ ಹೋಗಿರುವುದಾಗಿ ಹೇಳಿದ್ದ ಪತಿ, ಆಸ್ಪತ್ರೆಗೆ ಕರೆದೊಯ್ದಿದ್ದ. ಅಷ್ಟರಲ್ಲಿ ಆಕೆ ಮೃತಪಟ್ಟಿದ್ದಳು. ಇದೊಂದು ಸಹಜ ಸಾವು ಎಂದು ನಂಬಲಾಗಿತ್ತು ನಂತರ ಕುತ್ತಿಗೆಯಲ್ಲಿ ಗಾಯದ ಗುರುತು ಕಂಡುಬಂದಿದ್ದು ಸಂದೇಹಕ್ಕೆ ಎಡೆ ಮಾಡಿಕೊಟ್ಟಿತ್ತು.
ಆದರೆ ವಿಪರ್ಯಾಸವೇನೆಂದರೆ, ಪತಿಯೇ ಈ ಕೊಲೆ ಮಾಡಿದ್ದಾನೆ ಎಂಬ ಬಗ್ಗೆ ಪುರಾವೆಗಳು ಇರಲಿಲ್ಲ. ಅನಂತರ ಸಾಕ್ಷಿ ಹೇಳಿದ್ದೇ ಈ ಪುಟ್ಟ ಕಂದಮ್ಮ. ಹೌದು, ಅಮ್ಮನ ಸಾವಿನ ಬಳಿಕ ಅಜ್ಜಿ ಮನೆಗೆ ಬಂದಿದ್ದ ಎರಡೂವರೆ ವರ್ಷದ ಮಗು, ಅಜ್ಜ-ಅಜ್ಜಿಗೆ ಅಂದು ತಾನು ಕಂಡಿರುವ ದೃಶ್ಯ ಹೇಳಿದೆ. ಅಮ್ಮನ ಗಂಟಲನ್ನು ಎರಡೂ ಕೈಗಳಿಂದ ಅಪ್ಪ ಹಿಡಿದುಕೊಂಡಿದ್ದು, ಅಮ್ಮ ಒದ್ದಾಡಿದ್ದಾಗಿ ಹಾಗೂ ಅಮ್ಮ ಏನೂ ಮಾತನಾಡಲೇ ಇಲ್ಲ ಎಂದು ಮಗು ಹೇಳಿದೆ.
ಆದರೆ ತಮ್ಮ ಮಗಳು ಪ್ರಜ್ಞೆ ತಪ್ಪಿ ಸತ್ತಿದ್ದಾಳೆ ಎಂದುಕೊಂಡಿದ್ದ ಅವರಿಗೆ ಅಳಿಯನೇ ಮಗಳನ್ನು ಕೊಂದಿದ್ದಾನೆ ಎಂಬುದು ಮೊಮ್ಮಗಳ ಮಾತಿನ ಮೂಲಕ ಅರ್ಥವಾಗಿ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರ ಬಳಿ ಕೂಡ ಮಗು ಅಂದು ನಡೆದ ಘಟನೆ ಹೇಳಿದೆ. ಈಗ ಪತಿಯನ್ನು ಪೊಲೀಸರು ಬಂಧಿಸಿದ್ದು, ಸತ್ಯ ಒಪ್ಪಿಕೊಂಡಿದ್ದಾನೆ. ಪೊಲೀಸರು ತನಿಖೆ ಮುಂದುವರೆಸಿದ್ದಾರೆ